Heatwave 
ದೇಶ

ಹೀಟ್ ಡೋಮ್ ಆರ್ಭಟ: ಯುರೋಪಿನಲ್ಲಿ 1300ಕ್ಕೂ ಅಧಿಕ ಜನರ ಪ್ರಾಣ ಕಸಿದ ಅಧಿಕ ತಾಪಮಾನ

ಜೂನ್ ತಿಂಗಳಿನಲ್ಲಿ ಯುರೋಪ್ ಖಂಡದಾದ್ಯಂತ ದಾಖಲೆ ಮಟ್ಟದ ತಾಪಮಾನ ಹೆಚ್ಚಾಗಲು ‘ಹೀಟ್ ಡೋಮ್ ಪ್ರಮುಖ ಕಾರಣವಾಗಿದೆ. ಭೂಮಿಯ ವಾತಾವರಣದ ಮೇಲ್ಭಾಗದಲ್ಲಿ ತೀವ್ರವಾದ ಹೆಚ್ಚಿನ ಒತ್ತಡದ ವಲಯ ಸೃಷ್ಟಿಯಾಗಿ, ಅದು ಒಂದೇ ಕಡೆ ಸ್ಥಿರವಾಗಿ ನಿಂತಾಗ ‘ಹೀಟ್ ಡೋಮ್ ಉಂಟಾಗುತ್ತದೆ. ಇದು ಬಿಸಿಯಾದ ಗಾಳಿಯು ಮೇಲಕ್ಕೆ ಹೋಗಿ ಹೊರಹೋಗದಂತೆ ತಡೆಯುತ್ತದೆ. ಸರಳವಾಗಿ ಹೇಳುವುದಾದರೆ, ಬಿಸಿ ಅನ್ನದ ಪಾತ್ರೆಯ ಮೇಲೆ ಮುಚ್ಚಳ ಮುಚ್ಚಿದಾಗ ಹೇಗೆ ಒಳಗಿನ ಉಗಿ ಹೊರಗೆ ಹೋಗದೆ ಅಲ್ಲೇ ಅಡಗಿರುತ್ತದೆಯೋ, ಹಾಗೆಯೇ ಈ ಹೆಚ್ಚಿನ ಒತ್ತಡದ ವಲಯವು ಬಿಸಿ ಗಾಳಿಯನ್ನು ಭೂಮಿಗೆ ಹತ್ತಿರದಲ್ಲೇ ಲಾಕ್ ಮಾಡಿಬಿಡುತ್ತದೆ. ಮೋಡಗಳು ಸೃಷ್ಟಿಯಾಗದ ಕಾರಣ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ಬಿದ್ದು, ದಿನದಿಂದ ದಿನಕ್ಕೆ ತಾಪಮಾನವು ಕುದಿಯುವ ಮಟ್ಟಕ್ಕೆ ಏರುತ್ತ ಹೋಗುತ್ತದೆ. ಯುರೋಪಿನ ಫ್ರಾನ್ಸ್, ಸ್ಪೇನ್, ಜರ್ಮನಿ ಮತ್ತು ಯುಕೆ ದೇಶಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್​ನಿಂದ 44 ಡಿ.ಸೆ ದಾಟಿದ್ದು, ಈ ಸ್ಥಿತಿ ಏಕೆ ಸೃಷ್ಟಿಯಾಯಿತು, ಇದಕ್ಕೆ ಪರಿಹಾರವೇನು? ಈ ಕುರಿತಾದ ವಿವರ ಇಲ್ಲಿದೆ.
ಸ್ವಿಜರ್ಲೆಂಡ್, ಫ್ರಾನ್ಸ್, ಜರ್ಮನಿ... ಈ ಹೆಸರುಗಳನ್ನು ಕೇಳಿದ ತಕ್ಷಣ ಮನಸ್ಸಿನಲ್ಲಿ ಒಂದು ಸುಂದರ ಚಿತ್ರ ಮೂಡುವುದು ಸ್ವಾಭಾವಿಕ. ಆ ಚಿತ್ರದಲ್ಲಿ ಸಾಮಾನ್ಯವಾಗಿ ಸ್ವಚ್ಛವಾದ ರಸ್ತೆಗಳು, ಹಿಮದಿಂದ ಆವೃತವಾದ ಪರ್ವತಗಳು ಮತ್ತು ಹಿತಕರವಾದ ಹವಾಮಾನವನ್ನು ಆನಂದಿಸುತ್ತಿರುವ ಜನರು ಇರುತ್ತಾರೆ. ಆದರೆ ಪ್ರಸ್ತುತ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಯುರೋಪ್​ನ ಈ ದೇಶಗಳು ಈಗ ದಾಖಲೆ ಮಟ್ಟದ ಬಿಸಿಲಿನಲ್ಲಿ ಬೇಯುತ್ತಿವೆ. ರಸ್ತೆಗಳು ಕರಗುತ್ತಿವೆ, ರೈಲ್ವೆ ಹಳಿಗಳು ಕಿತ್ತುಬರುತ್ತಿವೆ. ಕಳೆದ ಕೆಲವೇ ದಿನಗಳಲ್ಲಿ ಭೀಕರ ಶಾಖದ ಅಲೆಗೆ 1,300ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಿಸಿಲಿನ ಬೇಗೆಯಿಂದ ಬಚಾವಾಗಲು ಜನರು ನದಿ ಮತ್ತು ಕೆರೆಗಳಿಗೆ ಧುಮುಕುತ್ತಿದ್ದು, ಇದರ ಪರಿಣಾಮವಾಗಿ ಫ್ರಾನ್ಸ್ ಒಂದರಲ್ಲೇ 55 ಜನರು ನೀರಿನಲ್ಲಿ ಮುಳುಗಿ ದುರ್ಮರಣ ಹೊಂದಿದ್ದಾರೆ.

ಕಾದು ಕೆಂಡವಾದ ಭೂಮಿ

ಫ್ರಾನ್ಸ್​ನಲ್ಲಿ 1947ರಿಂದ ತಾಪಮಾನವನ್ನು ದಾಖಲಿಸಲು ಪ್ರಾರಂಭಿಸಲಾಯಿತು. ಆದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಇಲ್ಲಿ ಈ ವರ್ಷದ (2026) ಜೂನ್​ನಲ್ಲಿ ತಾಪಮಾನವು 44.3 ಡಿಗ್ರಿ ಸೆಲ್ಸಿಯಸ್​ಗೆ ತಲುಪಿದೆ. ಪ್ಯಾರಿಸ್​ನಲ್ಲಿ ಅಥ್ಲೆಟಿಕ್ಸ್ ಟ್ರಾ್ಯಕ್​ನಲ್ಲಿ ಯುವಕನೊಬ್ಬ ಮೃತಪಟ್ಟರೆ, 18 ತಿಂಗಳ ಮಗು ಕಾರಿನೊಳಗೆ ಸಿಲುಕಿ ಬಿಸಿಲಿನ ಬೇಗೆಗೆ ಪ್ರಾಣ ಕಳೆದುಕೊಂಡಿದೆ. ಫ್ರಾನ್ಸ್ ಒಂದರಲ್ಲೇ ಉಷ್ಣಅಲೆಯ ಭೀಕರತೆಗೆ 1,000ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.
ಪೋಲೆಂಡ್​ನಲ್ಲಿ ಬಿಸಿಲು 105 ವರ್ಷಗಳ ದಾಖಲೆಯನ್ನು ಮುರಿದಿದೆ. ಸ್ಲುಬಿಸ್ ನಗರದಲ್ಲಿ ಕಳೆದ ಒಂದು ವಾರದಿಂದ ಸರಾಸರಿ 40.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದಕ್ಕೂ ಮುನ್ನ 1921ರಲ್ಲಿ ಗರಿಷ್ಠ 40.2 ಡಿಗ್ರಿ ತಾಪಮಾನ ದಾಖಲಾಗಿದ್ದೇ ಅತಿಹೆಚ್ಚಿನದ್ದಾಗಿತ್ತು.
ಜರ್ಮನಿಯ ಕೋಚೆಮ್ಲ್ಲಿ ಗರಿಷ್ಠ 41.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇಲ್ಲಿನ ಕಾಡೊಂದರಲ್ಲಿ ಕಿಚ್ಚು ಹೊತ್ತಿಕೊಂಡಿದ್ದು, ಅಲ್ಲಿ ಇಂದಿಗೂ ಎರಡನೇ ಮಹಾಯುದ್ಧದ ಸಜೀವ ಮದ್ದುಗುಂಡುಗಳು ಹೂತುಹೋಗಿರುವುದು ಆತಂಕ ಮೂಡಿಸಿದೆ. ಜರ್ಮನಿಯಲ್ಲಿ ಎಸಿ ಇಲ್ಲದ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಬ್ರಿಟನ್​ನಲ್ಲಿ ಈ ವಾರ ತಾಪಮಾನ 36.1 ಡಿಗ್ರಿಗೆ ತಲುಪಿದೆ. 1976ರ ಜೂನ್​ನಲ್ಲಿ ದಾಖಲಾಗಿದ್ದ ಗರಿಷ್ಠ 35.6 ಡಿಗ್ರಿ ತಾಪಮಾನದ ದಾಖಲೆ ಈಗ ಮುರಿದುಬಿದ್ದಿದೆ. ಡೆನ್ಮಾರ್ಕ್​ನ ಒಡೆನ್ಸ್​ನಲ್ಲಿ 36.6 ಡಿಗ್ರಿ ತಾಪಮಾನವಿದ್ದು, ಇದು 1874ರ ನಂತರದ ಗರಿಷ್ಠ ಮಟ್ಟವಾಗಿದೆ.

ತೀವ್ರ ಹಾಹಾಕಾರ

ಪ್ರಪಂಚದ ಅತ್ಯಂತ ತಂಪಾದ ವಾಸಯೋಗ್ಯ ಮಹಾದ್ವೀಪಗಳಲ್ಲಿ ಯುರೋಪ್ ಒಂದಾಗಿದೆ. ಇಲ್ಲಿನ ಸಂಪೂರ್ಣ ಮೂಲಸೌಕರ್ಯ ವ್ಯವಸ್ಥೆಯನ್ನು ಚಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆಯೇ ಹೊರತು ಇಂತಹ ಪ್ರಾಣಾಂತಿಕ ಬಿಸಿಲಿಗಲ್ಲ. ಯುರೋಪ್​ನ ಪ್ರಸ್ತುತ ಮೂಲಸೌಕರ್ಯಗಳು ಈ ಮಟ್ಟದ ಶಾಖವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಯುರೋಪ್​ನಲ್ಲಿರುವ ಬಹುತೇಕ ಮನೆಗಳನ್ನು ಚಳಿಯಿಂದ ರಕ್ಷಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ, ಇದು ಶಾಖವನ್ನು ಒಳಗೆ ಹಿಡಿದಿಟ್ಟುಕೊಳ್ಳುತ್ತದೆ. ಬಹುತೇಕ ಛಾವಣಿಗಳು ಟಿನ್ ಅಥವಾ ಲೋಹ (ಕಬ್ಬಿಣ)ದಿಂದ ಮಾಡಲ್ಪಟ್ಟಿವೆ. ಅತಿಯಾದ ಬಿಸಿಲು ಬಂದಾಗ ಈ ಮನೆಗಳು ‘ಭಟ್ಟಿ’ಯಂತೆ (ಓವನ್) ಬದಲಾಗುತ್ತವೆ. ಇವು ಹಗಲಿನಲ್ಲಿ ಶಾಖವನ್ನು ಹಿಡಿದಿಟ್ಟುಕೊಳ್ಳುವುದರಿಂದ, ರಾತ್ರಿಯಲ್ಲೂ ಮನೆಗಳು ತಂಪಾಗುವುದಿಲ್ಲ. ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಆರ್ಕಿಟೆಕ್ಚರ್ ವಿಭಾಗದ ತಜ್ಞರ ಪ್ರಕಾರ, ರಾತ್ರಿಯ ತಾಪಮಾನವೂ ಹೆಚ್ಚಾದಾಗ, ಮನೆಗಳು ದಿನದಿಂದ ದಿನಕ್ಕೆ ಮತ್ತಷ್ಟು ಕಾಯುತ್ತವೆ. ಇದರಿಂದ ಮಾನವನ ದೇಹಕ್ಕೆ ವಿಶ್ರಾಂತಿ ಸಿಗದೆ ಆರೋಗ್ಯ ಹದಗೆಡುತ್ತದೆ.

ಏರ್ ಕಂಡಿಷನರ್ (ಎಸಿ) ಕೊರತೆ

ಅಮೆರಿಕದಲ್ಲಿ 90% ಮನೆಗಳಲ್ಲಿ ಎಸಿ ಇದ್ದರೆ, ಯುರೋಪ್​ನ 20% ಮನೆಗಳಲ್ಲಿ ಮಾತ್ರ ಎಸಿ ಇದೆ. ಯುಕೆಯಲ್ಲಿ ಈ ಪ್ರಮಾಣ 7% ಮಾತ್ರ. ಯುರೋಪ್​ನ ಸರ್ಕಾರಿ ಕಚೇರಿಗಳು ಮತ್ತು ಆಸ್ಪತ್ರೆಗಳಲ್ಲೂ ಸಾಕಷ್ಟು ಎಸಿ ಸೌಲಭ್ಯವಿಲ್ಲ. ಇತ್ತೀಚೆಗೆ ಫ್ರಾನ್ಸ್​ನ
ಕ್ಲಿನಿಕ್ ಒಂದರಲ್ಲಿ ಕೊಠಡಿ ಅತಿಯಾಗಿ ಕಾಯ್ದಿದ್ದರಿಂದ ರೋಗಿಯೊಬ್ಬರು ಪ್ರಾಣ ಕಳೆದುಕೊಂಡರು. ತಕ್ಷಣವೇ ಫ್ರಾನ್ಸ್ ಸರ್ಕಾರ ಆಸ್ಪತ್ರೆಗಳಲ್ಲಿ ಎಸಿ ಅಳವಡಿಸಲು 10 ಕೋಟಿ ಯುರೋ (1,070 ಕೋಟಿ ರೂಪಾಯಿ) ಬಜೆಟ್ ಬಿಡುಗಡೆ ಮಾಡಿದೆ.

ಹಿರಿಯ ನಾಗರಿಕರ ಜನಸಂಖ್ಯೆ ಹೆಚ್ಚು

ಯುರೋಪ್​ನಲ್ಲಿ 22%ಕ್ಕಿಂತ ಹೆಚ್ಚು ಜನಸಂಖ್ಯೆ 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ಹೊಂದಿದೆ. ಇದರಿಂದಾಗಿ ಯುರೋಪ್ ಅನ್ನು ವಿಶ್ವದ ಹಿರಿಯ ನಾಗರಿಕರ ಮಹಾದ್ವೀಪ ಎಂದು ಕರೆಯಲಾಗುತ್ತದೆ. ಫ್ರಾನ್ಸ್​ನ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಪ್ರಕಾರ, ಶಾಖದ ಅಲೆಯಿಂದ ಸಂಭವಿಸಿದ ಸರಾಸರಿ 1,000 ಸಾವುಗಳಲ್ಲಿ 85%ಕ್ಕಿಂತ ಹೆಚ್ಚು ಜನರು 65 ವರ್ಷ ಮೇಲ್ಪಟ್ಟ ಹಿರಿಯರಾಗಿದ್ದಾರೆ. ಇದರಲ್ಲಿ 40% ಸಾವುಗಳು ಮನೆಯಲ್ಲೇ ಸಂಭವಿಸಿವೆ. ಭಾರತಕ್ಕೆ ಹೋಲಿಸಿದರೆ ಯುರೋಪ್​ನಲ್ಲಿ ಸೂರ್ಯನ ಬೆಳಕು ಹೆಚ್ಚು ಸಮಯ ಇರುತ್ತದೆ. ಇದರಿಂದಾಗಿ ಶಾಖದ ತೀವ್ರತೆ ಹೆಚ್ಚಾಗುತ್ತದೆ. ಪ್ರಸ್ತುತ ಯುರೋಪ್​ನಲ್ಲಿ ಹಗಲು 16 ಗಂಟೆಗಳಿರುತ್ತದೆ, ಆದರೆ ಭಾರತದಲ್ಲಿ 12-13 ಗಂಟೆಗಳು ಮಾತ್ರ. ಅಲ್ಲದೆ, ಯುರೋಪ್​ನ ಪ್ರಸ್ತುತ ಬಿಸಿಲು ‘ಡ್ರೖೆ ಹಿಟ್’ ಆಗಿದ್ದು, ಗಾಳಿಯೂ ಬೀಸುತ್ತಿಲ್ಲ. ಜನರಿಗೆ ಇಂತಹ ಹವಾಮಾನದ ಅಭ್ಯಾಸವಿಲ್ಲದ ಕಾರಣ ಅವರು ಹೆಚ್ಚು ಉಸಿರುಗಟ್ಟುವಿಕೆಯನ್ನು ಅನುಭವಿಸುತ್ತಿದ್ದಾರೆ.

ದಾಖಲೆ ಮಟ್ಟದ ಬಿಸಿಲಿಗೆ ಕಾರಣಗಳೇನು?

ಇದಕ್ಕೆ ಪ್ರಮುಖವಾಗಿ 3 ಕಾರಣಗಳಿವೆ

ಒಮೆಗಾ ಬ್ಲಾಕ್​ನಿಂದ ಸ್ಥಗಿತಗೊಂಡ ಮಾರುತಗಳು
ಯುರೋಪ್​ನ ವಾತಾ ವರಣದಲ್ಲಿ ಹೆಚ್ಚಿನ ಒತ್ತಡದ ವ್ಯವಸ್ಥೆ ನಿರ್ವಣವಾಗಿದೆ ಮತ್ತು ಇದರ ಎರಡೂ ಬದಿಗಳಲ್ಲಿ ಕಡಿಮೆ ಒತ್ತಡದ ವ್ಯವಸ್ಥೆ ಇದೆ. ಇದರಿಂದಾಗಿ ಹವಾಮಾನವನ್ನು ಮುಂದಕ್ಕೆ ಕೊಂಡೊಯ್ಯುವ ವೇಗದ ಮಾರುತಗಳಾದ ‘ಜೆಟ್ ಸ್ಟ್ರೀಮ್ಳು’ ಅಂಕುಡೊಂಕಾಗಿ ಚಲಿಸುತ್ತಿವೆ. ಹವಾಮಾನ ನಕ್ಷೆಯಲ್ಲಿ ಇದು ಗ್ರೀಕ್ ಅಕ್ಷರ ಒಮೆಗಾ ಆಕಾರವನ್ನು ಹೋಲುತ್ತದೆ. ಇದನ್ನು ‘ಹವಾಮಾನದ ಟ್ರಾಫಿಕ್ ಜಾಮ್ ಎನ್ನಬಹುದು. ಇದರ ಪರಿಣಾಮವಾಗಿ, ಆಫ್ರಿಕಾದಿಂದ ಬರುವ ಬಿಸಿ ಮತ್ತು ಒಣ ಗಾಳಿ ಯುರೋಪ್​ನ ವಾತಾವರಣದಲ್ಲಿ ಸಿಲುಕಿಕೊಂಡಿದೆ ಮತ್ತು ತಂಪಾದ ಗಾಳಿ ಹಾಗೂ ಮೋಡಗಳು ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.
ಹೀಟ್ ಡೋಮ್ ಸೃಷ್ಟಿ
ಒಮೆಗಾ ಬ್ಲಾಕ್​ನಿಂದಾಗಿ ಹೈ-ಪ್ರೆಶರ್ ಸಿಸ್ಟಮ್ ಒಂದೇ ಕಡೆ ಸ್ಥಿರವಾಗಿ ನಿಂತಾಗ, ಅದು ‘ಹೀಟ್ ಡೋಮ್ ಅಥವಾ ಶಾಖದ ಗುಮ್ಮಟವನ್ನು ಸೃಷ್ಟಿಸುತ್ತದೆ. ಸೂರ್ಯನ ಬಿಸಿಲಿನಿಂದ ಭೂಮಿ ಕಾಯ್ದಾಗ, ಬಿಸಿ ಗಾಳಿ ಮೇಲೆ ಏರಲು ಪ್ರಯತ್ನಿಸುತ್ತದೆ. ಆದರೆ ಮೇಲಿರುವ ಹೈ-ಪ್ರೆಶರ್ ವ್ಯವಸ್ಥೆಯು ಈ ಬಿಸಿ ಗಾಳಿಯನ್ನು ಮತ್ತೆ ಕೆಳಕ್ಕೆ ತಳ್ಳುತ್ತದೆ. ಗಾಳಿಯು ಕೆಳಕ್ಕೆ ಒತ್ತಲ್ಪಟ್ಟಾಗ ಅದು ಮತ್ತಷ್ಟು ಬಿಸಿಯಾಗುತ್ತದೆ. ಇದು ಪ್ರೆಶರ್ ಕುಕ್ಕರ್​ನಂತಹ ವಾತಾವರಣವನ್ನು ನಿರ್ವಿುಸುತ್ತದೆ.
ಜಾಗತಿಕ ತಾಪಮಾನ ಏರಿಕೆ
ಒಮೆಗಾ ಬ್ಲಾಕ್ ಮತ್ತು ಹೀಟ್ ಡೋಮ್ ನೈಸರ್ಗಿಕ ಹವಾಮಾನ ವಿದ್ಯಮಾನಗಳಾಗಿದ್ದು, ಇವು ಹಿಂದೆಯೂ ಸಂಭವಿಸುತ್ತಿದ್ದವು. ಆದರೆ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಇವುಗಳ ಸಂಖ್ಯೆ ಮತ್ತು ತೀವ್ರತೆ ಹೆಚ್ಚಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹವಾಮಾನ ಸಂಶೋಧನಾ ಸಂಸ್ಥೆಯಾದ ವರ್ಲ್ಡ್ ವೆದರ್ ಆಟ್ರಿಬ್ಯೂಷನ್ ಪ್ರಕಾರ, 50 ವರ್ಷಗಳ ಹಿಂದೆ ಇಂತಹ ಭೀಕರ ಶಾಖದ ಅಲೆ ಬರುವುದು ಅಸಾಧ್ಯವೆನಿಸುತ್ತಿತ್ತು. ಯುರೋಪ್ ಜಾಗತಿಕ ಸರಾಸರಿಗಿಂತ ದುಪ್ಪಟ್ಟು ವೇಗದಲ್ಲಿ ಕಾಯುತ್ತಿದೆ.

ಯಾವಾಗ ಮುಕ್ತಿ ಸಿಗಲಿದೆ?

ಹವಾಮಾನ ವಿಜ್ಞಾನಿಗಳ ಪ್ರಕಾರ, ಹೀಟ್ ಡೋಮ್ ನಿಧಾನವಾಗಿ ಪಶ್ಚಿಮ ಯುರೋಪ್​ನಿಂದ ಪೂರ್ವದ ಕಡೆಗೆ ಚಲಿಸಲಿದೆ. ಅಂಟಾರ್ಟಿಕಾ ಕಡೆಯಿಂದ ಬರುವ ತಂಪಾದ ಮಾರುತಗಳು ಸ್ವಲ್ಪ ಸಮಾಧಾನ ತರಲಿವೆ. ಫ್ರಾನ್ಸ್​ನ ಪಶ್ಚಿಮ ಭಾಗದಲ್ಲಿ ಮತ್ತು ಜರ್ಮನಿ, ಇಟಲಿ ಹಾಗೂ ಬ್ರಿಟನ್​ನಲ್ಲೂ ತಾಪಮಾನ ತಾತ್ಕಾಲಿಕವಾಗಿ ಕಡಿಮೆಯಾಗಲಿದೆ. ಆದರೆ ಈ ಪರಿಹಾರ ಕೆಲವು ದಿನಗಳ ಮಟ್ಟಿಗೆ ಮಾತ್ರ ಇರಲಿದೆ. ಹವಾಮಾನ ವಿಜ್ಞಾನಿಗಳ ಮುನ್ಸೂಚನೆಯ ಪ್ರಕಾರ, ಜುಲೈ ತಿಂಗಳಲ್ಲಿ ಯುರೋಪ್​ನ ಮೇಲೆ ಮತ್ತೊಂದು ಹೀಟ್ ಡೋಮ್ ಸಕ್ರಿಯಗೊಳ್ಳಬಹುದು. ಇದರ ಪ್ರಭಾವ ಪಶ್ಚಿಮ ಮತ್ತು ಮಧ್ಯ ಯುರೋಪ್​ನಲ್ಲಿ ಹೆಚ್ಚಾಗಿರಲಿದೆ. ಸ್ಪೇನ್, ಪೋರ್ಚುಗಲ್, ಫ್ರಾನ್ಸ್​ನಲ್ಲಿ ತೀವ್ರ ಶಾಖದ ಅಲೆಯ ಅವಧಿ 6 ರಿಂದ 9 ದಿನಗಳು ಇರುವ ಸಾಧ್ಯತೆಯಿದೆ. ಜರ್ಮನಿ, ದಕ್ಷಿಣ ಇಂಗ್ಲೆಂಡ್, ಉತ್ತರ ಇಟಲಿಯಲ್ಲಿ ಜುಲೈ 7ರಿಂದ 10 ನಡುವೆ ಮತ್ತೊಮ್ಮೆ ಹೀಟ್ ಡೋಮ್ ಸಕ್ರಿಯವಾಗಲಿದೆ. ಇದು ಪ್ರಸ್ತುತ ಇರುವ ಬಿಸಿಲಿಗಿಂತಲೂ ಹೆಚ್ಚು ಅಪಾಯಕಾರಿಯಾಗಬಹುದು. ಏಕೆಂದರೆ ಮೊದಲ ಹಂತದ ಶಾಖದ ಅಲೆಯು ಈಗಾಗಲೇ ಮಣ್ಣಿನ ತೇವಾಂಶವನ್ನು ಒಣಗಿಸಿದೆ, ರಸ್ತೆ ಮತ್ತು ಕಟ್ಟಡಗಳನ್ನು ಕಾಯಿಸಿದೆ. ಇಂತಹ ಸಂದರ್ಭದಲ್ಲಿ ಸತತವಾಗಿ ಬರುವ ಎರಡನೇ ಶಾಖದ ಅಲೆಯು ನಗರಗಳನ್ನು ಮತ್ತಷ್ಟು ಕಾಡಲಿದೆ. ಆಗಸ್ಟ್​ವರೆಗೆ ಯುರೋಪ್​ನಲ್ಲಿ ಇದೇ ರೀತಿಯ ಬಿಸಿ ವಾತಾವರಣ ಮುಂದುವರಿಯಲಿದ್ದು, ಈ ವರ್ಷ ಎಲ್-ನಿನೋ ಪ್ರಭಾವದಿಂದಾಗಿ ಯುರೋಪ್​ನಲ್ಲಿ ತೀವ್ರ ಬರಗಾಲ ಎದುರಾಗುವ ಆತಂಕವೂ ಇದೆ.