Howrah Police Action | ಖಾಕಿ ಪಡೆ ಮೇಲೆ ಬಾಂಬ್ ಎಸೆದಿದ್ದ ಟಿಎಂಸಿ ರೌಡಿಗಳ ಅರೆಬೆತ್ತಲೆ ಮೆರವಣಿಗೆ 
ದೇಶ

ಬಂಗಾಳದಲ್ಲಿ ಬದಲಾಯ್ತು ಟ್ರೆಂಡ್; ಖಾಕಿ ಪಡೆ ಮೇಲೆ ಬಾಂಬ್ ಎಸೆದಿದ್ದ ಟಿಎಂಸಿ ರೌಡಿಗಳ ಅರೆಬೆತ್ತಲೆ ಮೆರವಣಿಗೆ ಮಾಡಿದ ಪೊಲೀಸರು! | Howrah Police Action

Howrah Police Action: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹಿನ್ನೆಲೆಯುಳ್ಳ ಸ್ಥಳೀಯ ಸುಲಿಗೆಕೋರರ ವಿರುದ್ಧ ಖಾಕಿ ಪಡೆ ಹಿಂದೆಂದೂ ಕಾಣದ ಆಪರೇಷನ್ ಆರಂಭಿಸಿದೆ. ಹೌರಾ ಜಿಲ್ಲೆಯ ರಸ್ತೆಗಳಲ್ಲಿ ಟಿಎಂಸಿ ಪ್ರಭಾವಿ ನಾಯಕರ ಒಳ ಉಡುಪಿನಲ್ಲಿದ್ದ ದೃಶ್ಯಗಳು, ತಲೆ ಬೋಳಿಸಿ ಹಾಗೂ ಸೊಂಟಕ್ಕೆ ಹಗ್ಗ ಹಾಕಿ ಕೈಕೋಳ ತೊಡಿಸಿ ಸಾರ್ವಜನಿಕವಾಗಿ ಮೆರವಣಿಗೆ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ದೇಶ್ಯಾದ್ಯಂತ ಸಂಚಲನ ಮೂಡಿಸಿವೆ.
ರಾಜಕೀಯ ಆಶ್ರಯದಲ್ಲಿ ಸಾರ್ವಜನಿಕರನ್ನು ಪೀಡಿಸುತ್ತಿದ್ದ ಅಪರಾಧಿಗಳ ವಿರುದ್ಧ ಸರ್ಕಾರ ಸಮರ ಸಾರಿದ್ದು, ಅಪರಾಧ ಸ್ಥಳಗಳ ಮರುಸೃಷ್ಟಿ ಮತ್ತು ಸಾಕ್ಷ್ಯಾಧಾರಗಳ ಪರಿಶೀಲನೆಯ ನೆಪದಲ್ಲಿ ಪೊಲೀಸರು ಗೂಂಡಾಗಳ ಅಹಂಕಾರವನ್ನು ಇಳಿಸಿದ್ದಾರೆ.
ಕೇಸ್ 1: 20 ಕ್ರಿಮಿನಲ್ ಪ್ರಕರಣಗಳ ಡಾನ್ ಆಕಾಶ್ ಸಿಂಗ್ ಅರಬೆತ್ತಲೆ ಮೆರವಣಿಗೆ
ಹೌರಾದಲ್ಲಿ ಭೀತಿ ಹುಟ್ಟಿಸಿದ್ದ, ಸುಮಾರು 20ಕ್ಕೂ ಹೆಚ್ಚು ಗಂಭೀರ ಕ್ರಿಮಿನಲ್ ಕೇಸ್‌ಗಳನ್ನು ಎದುರಿಸುತ್ತಿರುವ ಡಾನ್ ಎಂದೇ ಕುಖ್ಯಾತನಾದ ಆಕಾಶ್ ಸಿಂಗ್‌ನನ್ನು ಪೊಲೀಸರು ಸಾರ್ವಜನಿಕವಾಗಿ ರಸ್ತೆಯಲ್ಲಿ ನಡೆಸಿಕೊಂಡು ಹೋಗಿದ್ದಾರೆ. 2021 ರಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆಯೇ ಗುಂಡು ಹಾರಿಸಿ, ಬಾಂಬ್ ಎಸೆದಿದ್ದ ಆರೋಪ ಈತನ ಮೇಲಿದ್ದು, ಇವನನ್ನು ಪೂರ್ವ ಮಿಡ್ನಾಪುರದ ಕೋಲಾರಘಾಟ್‌ನಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ.
ಕ್ರೈಮ್ ಸೀನ್ ಪರಿಶೀಲನೆಯ ನೆಪದಲ್ಲಿ ಗೋಲಾಬಾರಿ ಮತ್ತು ಮಾಲಿಪಂಚಘರಾ ಪೊಲೀಸ್ ಠಾಣೆಯ ಜಂಟಿ ತಂಡಗಳು ಆಕಾಶ್ ಸಿಂಗ್‌ನ ತಲೆ ಮತ್ತು ಗಡ್ಡವನ್ನು ಸಂಪೂರ್ಣವಾಗಿ ಬೋಳಿಸಿ, ಕೇವಲ ಬನಿಯನ್ ಮತ್ತು ಬಾಕ್ಸರ್ ಶಾರ್ಟ್ಸ್ (ಒಳ ಉಡುಪು) ಧರಿಸಿದ ಸ್ಥಿತಿಯಲ್ಲಿ ಕೈಕೋಳ ಹಾಕಿ ಇಡೀ ರಸ್ತೆಯಲ್ಲಿ ಮೆರವಣಿಗೆ ನಡೆಸಿವೆ. ತೀವ್ರ ಬೇಸಿಗೆಯ ಕಾರಣ ಆಕಾಶ್ ಸಿಂಗ್ ತಾನೇ ತಲೆ ಬೋಳಿಸಲು ಕೇಳಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಡಿಯೋವನ್ನು ಪಶ್ಚಿಮ ಬಂಗಾಳ ಬಿಜೆಪಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಪರಾಧದ ವಿರುದ್ಧ ನಮ್ಮ ಸರ್ಕಾರದ ಶೂನ್ಯ ಸಹಿಷ್ಣುತೆ ನೀತಿಗೆ ಇದು ಸಾಕ್ಷಿ ಎಂದಿದೆ. ಈತ ಟಿಎಂಸಿ ಮಾಜಿ ಶಾಸಕ ಗೌತಮ್ ಚೌಧರಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ಕೇಸ್ 2: ಗಬ್ಬರ್ ಅರಮನೆಯಲ್ಲಿ 140 ಆಡುಗಳು, ಟೆರೇಸ್ ಮೇಲೆ ಜೂಜಿನ ಅಡ್ಡೆ!

ಮತ್ತೊಂದು ಪ್ರಮುಖ ಕಾರ್ಯಾಚರಣೆಯಲ್ಲಿ, ಹೌರಾದ ವಾರ್ಡ್ ಸಂಖ್ಯೆ 36ರ ಟಿಎಂಸಿ ಅಧ್ಯಕ್ಷ ಶಮೀಮ್ ಅಹ್ಮದ್ ಅಲಿಯಾಸ್ ಬಡೆ ಅಥವಾ ಗಬ್ಬರ್ ಎಂಬಾತನನ್ನು ಬಿಳಿ ಬನಿಯನ್‌ನಲ್ಲಿ ಕೈಕೋಳ ತೊಡಿಸಿ ಸಾರ್ವಜನಿಕವಾಗಿ ನಡೆಸಿಕೊಂಡು ಹೋಗಲಾಗಿದೆ. ಮೇ 7 ರಂದು ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮೆರವಣಿಗೆಯ ಮೇಲೆ ಬಾಂಬ್ ಮತ್ತು ಗನ್ ದಾಳಿ ನಡೆಸಿದ ಪ್ರಮುಖ ಆರೋಪಿ ಈ ಶಮೀಮ್ ಅಹ್ಮದ್. ಈತನನ್ನು ಮುಂಬೈ ಪೊಲೀಸರ ಸಹಾಯದಿಂದ ಚೆಂಬೂರ್‌ನಲ್ಲಿ ಬಂಧಿಸಲಾಗಿತ್ತು.
ಅಕ್ರಮ ನಿರ್ಮಾಣ, ವಸೂಲಿ ದಂಧೆ ನಡೆಸುತ್ತಿದ್ದ ಈತನ ಐಷಾರಾಮಿ ನಿವಾಸದ ಮೇಲೆ ದಾಳಿ ಮಾಡಿದಾಗ ಪೊಲೀಸರೇ ಶಾಕ್ ಆಗಿದ್ದಾರೆ. ಈತನ ಐದು ಅಂತಸ್ತಿನ ಕಟ್ಟಡದಲ್ಲಿ ರಹಸ್ಯ ಮೆಟ್ಟಿಲುಗಳು, ಟೆರೇಸ್ ಮೇಲಿದ್ದ ಅಕ್ರಮ ಜೂಜಿನ ಅಡ್ಡೆ ಹಾಗೂ ವಸತಿ ಕಟ್ಟಡದ ಮೇಲ್ಛಾವಣಿಯಲ್ಲೇ ಸಾಕಿ ವಸೂಲಿ ದಂಧೆಗೆ ಬಳಸುತ್ತಿದ್ದ 140 ಆಡುಗಳು ಪತ್ತೆಯಾಗಿವೆ.

ಕೇಸ್ 3: ಸಹಿನ್ ಮೊಲ್ಲಾ ಸೊಂಟಕ್ಕೆ ಹಗ್ಗ ಹಾಕಿ ಎಳೆದುಕೊಂಡ ಹೋದ ಅಧಿಕಾರಿಗಳು

ಹೌರಾ ಜಿಲ್ಲೆಯ ಸಂಕ್ರೈಲ್ ಎಂಬಲ್ಲಿ, ಪೊಲೀಸರು ಸಹಿನ್ ಮೊಲ್ಲಾ ಅಲಿಯಾಸ್ ಸನ್ನಿ ಎಂಬ ಸುಲಿಗೆಕೋರನನ್ನು ಸೊಂಟಕ್ಕೆ ದಪ್ಪನೆಯ ಹಗ್ಗ ಕಟ್ಟಿ, ಬಿಳಿ ಬನಿಯನ್ ಮತ್ತು ಶಾರ್ಟ್ಸ್‌ನಲ್ಲಿ ಬೆಲ್ತೋಲಾ ಪ್ರದೇಶದ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಈತ ಹಿಂದೆ ತಾತ್ಕಾಲಿಕ ಟ್ರಾಫಿಕ್ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾಗ ವರ್ತಕರಿಂದ ಹಣ ವಸೂಲಿ ಮಾಡಿ ಕೆಲಸದಿಂದ ವಜಾಗೊಂಡಿದ್ದ. ಆದರೆ ಟಿಎಂಸಿ ಪಕ್ಷದ ಪ್ರಭಾವ ಬಳಸಿ ಇಡೀ ಪ್ರದೇಶದಲ್ಲಿ ತನ್ನ ದೌರ್ಜನ್ಯ ಮುಂದುವರಿಸಿದ್ದ. ಮೇ 23 ರಂದು ಈತನನ್ನು ಬಂಧಿಸಲಾಗಿತ್ತು ಎಂದು ತಿಳಿದುಬಂದಿದೆ.

ಮಾನವ ಹಕ್ಕುಗಳ ಉಲ್ಲಂಘನೆ ಎಂದು ಟಿಎಂಸಿ ಆಕ್ರೋಶ

ಪೊಲೀಸರ ಈ ಕಠಿಣ ಕ್ರಮವನ್ನು ತೃಣಮೂಲ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಇದು ಕಾನೂನಿನ ಮೂಲಭೂತ ತತ್ವಗಳು ಮತ್ತು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಸರ್ಕಾರದ ಕೆಲಸ ಸರ್ಕಸ್ ನಡೆಸುವುದು ಅಥವಾ ಸಾರ್ವಜನಿಕರಿಗೆ ಮನೋರಂಜನೆ ನೀಡುವುದಲ್ಲ. ಅಪರಾಧಿಗಳನ್ನು ಬೆಂಬಲಿಸದಿದ್ದರೂ, ಕಾನೂನನ್ನು ಕೈಗೆತ್ತಿಕೊಂಡು ಹೀಗೆ ಮಾರುಕಟ್ಟೆಯಲ್ಲಿ ಹಗ್ಗ ಕಟ್ಟಿ ಒಳ ಉಡುಪಿನಲ್ಲಿ ಮೆರವಣಿಗೆ ಮಾಡುವುದು ಸಾಂವಿಧಾನಿಕ ಸಂಸ್ಥೆಯ ಲಕ್ಷಣವಲ್ಲ. ಪೊಲೀಸರಿಗೆ ಮಿತಿಮೀರಿದ ಅಧಿಕಾರ ನೀಡಿದರೆ ಅದು ಸಂಸ್ಥೆಯೊಳಗಿನ ಕ್ರೂರತೆಯನ್ನು ಎಚ್ಚರಿಸುತ್ತದೆ ಎಂದು ಬ್ಯಾನರ್ಜಿ ಖಳವಳ ವ್ಯಕ್ತಪಡಿಸಿದ್ದಾರೆ.
ಬಂಗಾಳದಾದ್ಯಂತ ಮುಂದುವರಿದ ಈ ಆಪರೇಷನ್ ಭಾಗವಾಗಿ ಕೋಲ್ಕತ್ತಾದಲ್ಲಿ ಟಿಎಂಸಿ ಕೌನ್ಸಿಲರ್ ಸುದೀಪ್ ಪಾಲಿಸಂಪ್ರದಾಯ ಸೇರಿದಂತೆ ಹತ್ತಾರು ನಾಯಕರನ್ನು ಜೈಲಿಗಟ್ಟಲಾಗಿದೆ. ಕೌನ್ಸಿಲರ್ ಸುದೀಪ್‌ನನ್ನು ಪೊಲೀಸರು ಕರೆದೊಯ್ಯುವಾಗ ಸಾರ್ವಜನಿಕರೇ ಮುಗಿಬಿದ್ದು ಚೋರ್-ಚೋರ್ ಎಂದು ಘೋಷಣೆ ಕೂಗಿದ್ದಾರೆ. ಕೃಷ್ಣನಗರ ಮತ್ತು ಹೂಗ್ಲಿಯಲ್ಲಿಯೂ ಪಂಚಾಯತ್ ಪ್ರಮುಖರನ್ನು ವಸೂಲಿ ದಂಧೆಯಡಿಯಲ್ಲಿ ಬಂಧಿಸಲಾಗಿದ್ದು, ಟಿಎಂಸಿ ನೈತಿಕತೆಯ ಪ್ರಶ್ನೆ ಎತ್ತುತ್ತಿದ್ದರೂ, ಪಶ್ಚಿಮ ಬಂಗಾಳದ ನೂತನ ಸರ್ಕಾರ ಮಾತ್ರ ಅರಬೆತ್ತಲೆ ಮೆರವಣಿಗೆ ಮೂಲಕವೇ ಅಪರಾಧಿಗಳಿಗೆ ಅತ್ಯಂತ ಕಠಿಣ ಸಂದೇಶ ರವಾನಿಸುತ್ತಿದೆ(ಏಜೆನ್ಸೀಸ್​​).