ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್
ನವದೆಹಲಿ: ಭಾರತದ ಪ್ರಧಾನಿ ಮೋದಿಯವರನ್ನು ತಮ್ಮ ಉತ್ತಮ ಸ್ನೇಹಿತ ಎಂದು ಬಣ್ಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump), ಅವರು ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಗುರುವಾರ(ಏ. 16) ಹೊಗಳಿದ್ದಾರೆ
ಪ್ರಧಾನಿ ಮೋದಿಯವರೊಂದಿಗಿನ ಸಂಭಾಷಣೆಯ ಕುರಿತು ಎಎನ್‌ಐ ಜೊತೆ ಮಾತನಾಡಿರುವ ಅವರು, ನಾನು ಅವರೊಂದಿಗೆ ತುಂಬಾ ಚೆನ್ನಾಗಿ ಮಾತನಾಡಿದೆ, ಮತ್ತು ಅವರು ಭಾರತದ ನನ್ನ ಸ್ನೇಹಿತ, ಮತ್ತು ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಶ್ಚಿಮ ಏಷ್ಯಾ ಬಿಕ್ಕಟ್ಟು & ಪ್ರಾದೇಶಿಕ ಭದ್ರತಾ ಕಾಳಜಿ ಬಗ್ಗೆ ಇಬ್ಬರು ಒಳ್ಳೆಯ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಪಶ್ಚಿಮ ಏಷ್ಯಾದ ಪರಿಸ್ಥಿತಿ ಮತ್ತು ಕಡಲ ಭದ್ರತೆ ಸೇರಿದಂತೆ ಪ್ರಮುಖ ಕಾರ್ಯತಂತ್ರದ ಕಾಳಜಿಗಳ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನನಗೆ ಕರೆ ಮಾಡಿ ಚರ್ಚಿಸಿದರು ಎಂಬ ಪ್ರಧಾನಿ ಮೋದಿಯವರು ಹೇಳಿದ ಕೆಲ ದಿನಗಳ ಬಳಿಕ ಟ್ರಂಪ್ ಆ ಕುರಿತು ಮಾತನಾಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಪ್ರಧಾನಿ ಮೋದಿ, ನನ್ನ ಸ್ನೇಹಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಕರೆ ಬಂದಿತು. ವಿವಿಧ ಕ್ಷೇತ್ರಗಳಲ್ಲಿ ನಮ್ಮ ದ್ವಿಪಕ್ಷೀಯ ಸಹಕಾರದಲ್ಲಿ ಸಾಧಿಸಲಾದ ಗಣನೀಯ ಪ್ರಗತಿಯನ್ನು ನಾವು ಪರಿಶೀಲಿಸಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆಯೂ ನಾವು ಚರ್ಚಿಸಿದ್ದೇವೆ ಮತ್ತು ಹಾರ್ಮುಜ್ ಜಲಸಂಧಿಯನ್ನು ಮುಕ್ತ ಮತ್ತು ಸುರಕ್ಷಿತವಾಗಿರಿಸುವ ಮಹತ್ವವನ್ನು ಒತ್ತಿ ಹೇಳಿದ್ದೇವೆ ಎಂದು ಬರೆದುಕೊಂಡಿದ್ದರು (ಏಜೆನ್ಸೀಸ್).