H D Kumaraswamy | ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ 
ದೇಶ

ನಾಳೆ ಮಧ್ಯಾಹ್ನದವರೆಗೂ ಬೈರಮಂಗಲದಲ್ಲೇ ಇರ್ತೀನಿ, ಸಿಎಂ ಬಂದ್ರೆ ಸಂತೋಷ; ಬಲವಂತವಾಗಿ ಭೂಮಿ ಕಿತ್ತುಕೊಂಡ್ರೆ ಸುಮ್ಮನಿರಲ್ಲ ಎಂದ ಎಚ್​ಡಿಕೆ | H D Kumaraswamy

ಬೆಂಗಳೂರು: ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕಾಗಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿರುವ ಪ್ರಕ್ರಿಯೆಯನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಪತ್ರ ಸಮರ ಮುಂದುವರೆದಿದ್ದು, ಇದೇ ವಿಷಯವಾಗಿ ಮಾತನಾಡಿರುವ ಕೇಂದ್ರ ಸಚಿವ ಎಚ್​​ ಡಿ ಕುಮಾರಸ್ವಾಮಿ ಅವರು, ರೈತರನ್ನು ಬಲವಂತವಾಗಿ ಬೆದರಿಸಿ ಭೂಮಿ ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್​​ಡಿಕೆ, ನಾಳೆ (ಶನಿವಾರ) ಮಧ್ಯಾಹ್ನದವರೆಗೂ ನಾನು ಬೈರಮಂಗಲ ಸರ್ಕಲ್‌ನಲ್ಲಿ ಮುಖ್ಯಮಂತ್ರಿಗಳಿಗಾಗಿ ಕಾಯುತ್ತೇನೆ. ಸಿಎಂ ಡಿ ಕೆ ಶಿವಕುಮಾರ್​ ಅವರು ಬಂದರೆ ಸಂತೋಷ ಎಂದರು.
ನಾವು ಬೈರಮಂಗಲಕ್ಕೆ ಯಾವುದೇ ರೀತಿಯ ಗಲಾಟೆ ಮಾಡಲು ಅಥವಾ ಸಂಘರ್ಷ ಸೃಷ್ಟಿಸಲು ಹೋಗುತ್ತಿಲ್ಲ. ರೈತರ ಶಾಂತಿಯುತ ಪ್ರತಿಭಟನೆಗೆ ಬೆಂಬಲ ನೀಡಲು ಹೋಗುತ್ತಿದ್ದೇವೆ. ಅಲ್ಲಿ ಸೆಕ್ಷನ್ 144 ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಇವರು ಕಾನೂನು ಮೀರಿ ಏನು ಮಾಡಲು ಹೊರಟಿದ್ದಾರೆ? ನಾನು ಕಾನೂನು ಪ್ರಕಾರವೇ ಹೋರಾಟ ಮಾಡುತ್ತೇನೆ. ಕೆಲವು ರೈತರು ಸ್ವಇಚ್ಛೆಯಿಂದ ಭೂಮಿ ಕೊಡಲು ಸಿದ್ಧರಿರಬಹುದು, ಅದಕ್ಕೆ ನಮ್ಮ ತಕರಾರಿಲ್ಲ. ಆದರೆ ಇಡೀ ರೈತ ಸಮುದಾಯದ ಮೇಲೆ ಸರ್ಕಾರ ಗಧಾಪ್ರಹಾರ ಮಾಡಲು ಹೊರಟರೆ ಸಹಿಸುವುದಿಲ್ಲ ಎಂದು ಕೇಂದ್ರ ಸಚಿವರು ಎಚ್ಚರಿಸಿದರು.

ಪ್ರದೀಪ್ ಈಶ್ವರ್‌ಗೆ ಅಂಬೇಡ್ಕರ್ ವಾಚ್ ತೋರಿಸಿದ ಎಚ್​​​ಡಿಕೆ!

ಎಚ್ ಡಿ ಕುಮಾರಸ್ವಾಮಿ ಅವರು ದುಬಾರಿ ವಾಚ್ ಧರಿಸುತ್ತಾರೆ ಎಂಬ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಆರೋಪಕ್ಕೆ ಕುಮಾರಸ್ವಾಮಿ ಸ್ಥಳದಲ್ಲೇ ತಮ್ಮ ಕೈಗಡಿಯಾರವನ್ನು ಮಾಧ್ಯಮಗಳಿಗೆ ತೋರಿಸಿ ಉತ್ತರ ನೀಡಿದರು. ನೋಡಿ, ನನ್ನ ಕೈಯಲ್ಲಿ ಇರುವುದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರವಿರುವ ತೀರಾ ಸಾಧಾರಣ ವಾಚ್. ನನ್ನ ಬಳಿ ದುಬಾರಿ ವಾಚ್‌ಗಳಿವೆ ಎಂದು ಅವರಿಗೆ ಅನ್ನಿಸಿದರೆ, ಅವರದ್ದೇ ಸರ್ಕಾರ ಇದೆಯಲ್ಲ? ಎಸ್‌ಐಟಿ ತನಿಖಾ ತಂಡವನ್ನು ನನ್ನ ಮನೆಗೆ ಕಳುಹಿಸಿ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.

ಸಿಎಂ ಬ್ಯುಸಿ ಇರಬಹುದು, ನಾಳೆ ಎಚ್​​ಡಿಕೆ ಬೈರಮಂಗಲದಲ್ಲಿ ಇರಲಿದ್ದಾರೆ

ಇದೇ ವಿಚಾರವಾಗಿ ಮಾತನಾಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮುಖ್ಯಮಂತ್ರಿಗಳು ವಿಧಾನಸೌಧದ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ನಡೆಸಲು ಆಹ್ವಾನಿಸಿದ್ದರು. ಆದರೆ, ಕುಮಾರಸ್ವಾಮಿ ಅವರು ರೈತರ ಪರ ಇರುವ ವ್ಯಕ್ತಿ. ಹಾಗಾಗಿ ಸಂಕಷ್ಟದಲ್ಲಿರುವ ರೈತರ ಸಮ್ಮುಖದಲ್ಲೇ ಬಹಿರಂಗವಾಗಿ ಸಮಸ್ಯೆ ಪರಿಹರಿಸೋಣ ಎಂದು ಮರುಪತ್ರ ಬರೆದಿದ್ದಾರೆ ಎಂದು ಅವರು ತಿಳಿಸಿದರು.
ವಿಧಾನಸೌಧದಲ್ಲಿ ಚರ್ಚಿಸುವ ಸಿಎಂ ಪ್ರಸ್ತಾಪವನ್ನು ನಿರಾಕರಿಸಿ, ರೈತರ ಮಧ್ಯೆ ಕೂತು ಸಮಸ್ಯೆ ಬಗೆಹರಿಸೋಣ ಎಂದು ಕುಮಾರಸ್ವಾಮಿ ಅವರು ಬರೆದ ಪತ್ರಕ್ಕೆ ಮುಖ್ಯಮಂತ್ರಿಗಳಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲ. ಬಹುಶಃ ಸಿಎಂ ಅವರು ಬ್ಯುಸಿ ಇರಬಹುದು. ಆದರೆ, ಕುಮಾರಸ್ವಾಮಿ ಅವರು ರೈತರ ಪರವಾಗಿ ತಮಗಿರುವ ಕಮಿಟ್‌ಮೆಂಟ್‌ ಅನ್ನು ಉಳಿಸಿಕೊಳ್ಳಲು ನಾಳೆ ಬೈರಮಂಗಲ ಸರ್ಕಲ್‌ಗೆ ಭೇಟಿ ನೀಡುವುದು ಪಕ್ಕಾ ಎಂದು ನಿಖಿಲ್ ಸ್ಪಷ್ಟಪಡಿಸಿದರು.

ಪೋಸ್ಟರ್ ಅಭಿಯಾನ ಕಾಂಗ್ರೆಸ್‌ನ ಸಣ್ಣತನ ಎಂದ ನಿಖಿಲ್

ದೇವೇಗೌಡರ ಕುಟುಂಬದ ವಿರುದ್ಧ ಕಾಂಗ್ರೆಸ್ ಪೋಸ್ಟರ್ ಅಭಿಯಾನ ನಡೆಸುತ್ತಿರುವ ಕುರಿತು ನಿಖಿಲ್​ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪೋಸ್ಟರ್ ಅಭಿಯಾನ ಕಾಂಗ್ರೆಸ್‌ಗೆ ಹೊಸದೇನಲ್ಲ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಪೇ ಸಿಎಂ ಮಾಡಿದ್ದರು. ಈಗ ಕಾಂಗ್ರೆಸ್‌ನಲ್ಲಿ ಪರ್ಸೆಂಟೇಜ್ ವ್ಯವಹಾರ ಎಲ್ಲಿಗೆ ಹೋಗಿ ತಲುಪಿದೆ ಎಂಬುದು ಅಧಿಕಾರಿಗಳು ಮತ್ತು ಶಾಸಕರಿಗೆ ಚೆನ್ನಾಗಿ ಗೊತ್ತಿದೆ. ಯಾರು ಕರ್ನಾಟಕದಲ್ಲಿ ಎಷ್ಟೆಷ್ಟು ಭೂಮಿ ಹೊಂದಿದ್ದಾರೆ ಎಂಬ ದಾಖಲೆಗಳನ್ನು ಬಿಡುಗಡೆ ಮಾಡಲು ನಮಗೂ ಬರುತ್ತದೆ. ಆದರೆ, ನಾವು ಅಂತಹ ಸಣ್ಣತನದ ರಾಜಕೀಯ ಮಾಡಲು ಹೋಗುವುದಿಲ್ಲ. ಇದು ಕುಟುಂಬದ ತೇಜೋವಧೆಯ ಪ್ರಶ್ನೆಯಲ್ಲ, ರೈತರ ಬದುಕಿನ ಪ್ರಶ್ನೆ. ಇದಕ್ಕೆ ರೈತರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ನಿಖಿಲ್ ತಿರುಗೇಟು ನೀಡಿದರು.
ವಾಚ್​​ ವಿವಾದ ಬಗ್ಗೆಯೂ ಮಾತನಾಡಿರುವ ನಿಖಿಲ್​, ಪ್ರದೀಪ್​ ಈಶ್ವರ್​​ ಪ್ರಚಾರ ಪ್ರಿಯರು. ಅಂತವರಿಗೆ ಉತ್ತರ ಕೊಟ್ಟು ಸಮಯ ವ್ಯರ್ಥ ಮಾಡುವುದು ಬೇಡ ಎಂದು ವ್ಯಂಗ್ಯವಾಡಿದರು.