ಗೋರಖ್ಪುರ: ದೆಹಲಿಯ ವಾಯುಮಾಲಿನ್ಯದ ಬಗ್ಗೆ ವ್ಯಂಗ್ಯವಾಡಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಯುಪಿ ಜನರು ಶುದ್ಧ ವಾತಾವರಣವನ್ನು ಆನಂದಿಸುತ್ತಿದ್ದಾರೆ. ಎಲ್ಲಾ ಅಭಿವೃದ್ಧಿ ಕಾರ್ಯಗಳ ಹೊರತಾಗಿಯೂ ಉಸಿರುಗಟ್ಟಿಸುತ್ತಿಲ್ಲ. ದೆಹಲಿ ವಾತಾವರಣ ನೋಡಿದ್ದೀರಾ? ಗ್ಯಾಸ್ ಚೇಂಬರ್ನಂತಿದೆ ಎಂದು ಹೇಳಿದ್ದಾರೆ.
ಗೋರಖ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಇಂದಿನ ಅತಿದೊಡ್ಡ ಜಾಗತಿಕ ಸವಾಲುಗಳಲ್ಲಿ ಪರಿಸರ ನಾಶವೂ ಒಂದು. ಇಲ್ಲಿ ಪರಿಸರ ಸಾಕಷ್ಟು ಉತ್ತಮವಾಗಿದೆ. ಮಾಲಿನ್ಯವಿಲ್ಲ, ಹಾಗಾಗಿ ರೋಗಗಳು ಕಡಿಮೆಯಾಗುತ್ತವೆ. ಅದೇ ಮಾಲಿನ್ಯವಾದ್ರೆ ಅದು ಶ್ವಾಸಕೋಶಗಳಿಗೆ ಹಾನಿ ಮಾಡುತ್ತದೆ ಎಂದು ತಿಳಿಸಿದ್ದಾರೆ.
ದೆಹಲಿ ಸ್ಥಿತಿಯನ್ನು ನೋಡಿದ್ದೀರಾ? ಅಲ್ಲಿ ಗ್ಯಾಸ್ ಚೇಂಬರ್ನಂತೆ ವಾತಾವರಣ ಇದೆ. ಪರಿಸ್ಥಿತಿ ಭೀಕರವಾಗಿದೆ. ಉಸಿರಾಟ ಕಷ್ಟ, ಕಣ್ಣುಗಳಲ್ಲಿ ಉರಿಯುವಂತೆ ಆಗುತ್ತಿದೆ. ಆಸ್ತಮಾದಿಂದ ಬಳಲುತ್ತಿರುವವರು, ವೃದ್ಧರು ಹಾಗೂ ಮಕ್ಕಳು ಮನೆಯೊಳಗೆ ಇರಲು ವೈದ್ಯರು ಸಲಹೆ ನೀಡುತ್ತಾರೆ. ಇದು ಯಾವ ರೀತಿಯ ಜೀವನ? ಎಂದಿದ್ದಾರೆ.
ಪರಿಸರಕ್ಕೆ ಯಾವುದೇ ಅಡಚಣೆ ಉಂಟಾದರೆ ಇದೇ ರೀತಿಯ ಪರಿಸ್ಥಿತಿ ಉಂಟಾಗಬಹುದು. ನಾವು ಇಲ್ಲಿ ಅದೃಷ್ಟವಂತರು, ಉಸಿರುಗಟ್ಟಿಸುವ ವಾತಾವರಣವಿಲ್ಲದೆ ನಮಗೆ ಅಭಿವೃದ್ಧಿ ಇದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).