ಚೆನ್ನೈ: ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿ ಸಾವಿರ ಕೋಟಿ ಗಡಿ ಮುನ್ನುಗ್ಗುತ್ತಿರುವ ಬಾಲಿವುಡ್ ಚಿತ್ರ ಧುರಂಧರ್-2 ಚಿತ್ರವನ್ನು ಪರೋಕ್ಷವಾಗಿ ಟೀಕಿಸಿರುವ ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ವೆಟ್ರಿಮಾರನ್, ಇಂದಿನ ಸಿನಿಮಾಗಳಲ್ಲಿ ರಾಜಕೀಯ ಪ್ರಚಾರದ ಪ್ರವೃತ್ತಿ ಹೆಚ್ಚುತ್ತಿದೆ. ಆಡಳಿತ ಪಕ್ಷವು ಇತಿಹಾಸವನ್ನು ವಿರೂಪಗೊಳಿಸಲು ಮತ್ತು ಜನರ ಆಲೋಚನೆಗಳ ಮೇಲೆ ಪ್ರಭಾವ ಬೀರಲು ಸಿನಿಮಾಗಳನ್ನು ಬಳಸುತ್ತಿದೆ ಎಂದು ಹೇಳಿದ್ದಾರೆ.
ಈಗ ಎಲ್ಲವೂ ಪ್ರಚಾರವಾಗಿ ಮಾರ್ಪಟ್ಟಿದೆ. ಈ ಪ್ರಚಾರವು ನಮ್ಮ ನೆನಪುಗಳು ಮತ್ತು ಆಲೋಚನೆಗಳ ಮೇಲೆ ಪ್ರಭಾವ ಬೀರುವ ಶಕ್ತಿಯನ್ನು ಹೊಂದಿದೆ. 2016ರಲ್ಲಿ ನೋಟು ರದ್ದತಿಯಿಂದ ಎಷ್ಟು ಜನರು ಸರತಿ ಸಾಲಿನಲ್ಲಿ ನಿಂತು ಪ್ರಾಣ ಕಳೆದುಕೊಂಡರು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಈಗ ಅದನ್ನೆಲ್ಲಾ ಮರೆಮಾಚಿ ದ್ವೇಷವನ್ನು ಹೆಚ್ಚಿಸಲು ಪ್ರಚಾರವನ್ನು ಹರಡುತ್ತಿದ್ದಾರೆ. ಇತಿಹಾಸ ಅಥವಾ ಸತ್ಯಗಳನ್ನು ವಿರೂಪಗೊಳಿಸುವುದು ದ್ವೇಷ ಪ್ರಚಾರದ ವರ್ಗಕ್ಕೆ ಸೇರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದಿತ್ಯಧರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಟನೆ ಧುರಂಧರ್-2 ಸಿನಿಮಾದಲ್ಲಿ 2016ರ ನೋಟು ರದ್ದತಿಯನ್ನು ಸಮರ್ಥಿಸಿಕೊಂಡು, ಪಾಕಿಸ್ತಾನದಿಂದ ಬರುವ ನಕಲಿ ನೋಟುಗಳನ್ನು ತಡೆಯಲು ಆಡಳಿತ ಪಕ್ಷವು ತೆಗೆದುಕೊಂಡ ಮಾಸ್ಟರ್ ಸ್ಟ್ರೋಕ್ ಎಂದು ಬಿಂಬಿಸಲಾಗಿದೆ ಎನ್ನಲಾಗಿದೆ (ಏಜೆನ್ಸೀಸ್).