Shashi Tharoor | ಸಂಸದ ಶಶಿ ತರೂರ್
ತಿರುವನಂತಪುರಂ: ಪಕ್ಷದ ಆಂತರಿಕ ವ್ಯವಸ್ಥೆಯ ಬಗ್ಗೆ ಕೆಲವು ಸಮಸ್ಯೆಗಳಿದ್ದು, ಅಂತಹ ವಿಷಯಗಳನ್ನು ಮಾಧ್ಯಮಗಳ ಬದಲು ಹಿರಿಯ ನಾಯಕರ ಜೊತೆ ಚರ್ಚಿಸುತ್ತೇನೆ ಎಂದು ಸಂಸದ ಶಶಿ ತರೂರ್ ಹೇಳೀದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ತರೂರ್, ಕಳೆದ 17 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದೇನೆ, ಏನೇ ತಪ್ಪಾಗಿದ್ದರೂ ಪರಿಹರಿಸಬೇಕು, ಅದನ್ನು ಸೂಕ್ತ ವೇದಿಕೆಯಲ್ಲಿ ತಿಳಿಸುತ್ತೇನೆ.
ನಾನು ಹೇಳುವುದಿಷ್ಟೆ, ನನ್ನ ಸ್ವಂತ ಪಕ್ಷದ ನಾಯಕತ್ವದೊಂದಿಗೆ ಚರ್ಚಿಸಬೇಕಾದ ವಿಷಯಗಳಿವೆ, ಸಾರ್ವಜನಿಕ ವೇದಿಕೆಯಲ್ಲಿ ಅಲ್ಲ, ನಾನು ಸಂಸತ್ತಿಗಾಗಿ ದೆಹಲಿಗೆ ಹೋಗುತ್ತೇನೆ ಮತ್ತು ನನ್ನ ಕಳವಳಗಳನ್ನು ಪಕ್ಷದ ನಾಯಕತ್ವಕ್ಕೆ ಸ್ಪಷ್ಟಪಡಿಸುತ್ತೇನೆ, ಅವರ ದೃಷ್ಟಿಕೋನವನ್ನು ಸರಿಯಾಗಿ ಚರ್ಚಿಸಲು ಅವಕಾಶ ಸಿಗುತ್ತದೆ ಎಂದು ಹೇಳಿದರು.
ರಾಹುಲ್ ಗಾಂಧಿ ನೇತೃತ್ವದ ಸಭೆಗೆ ಏಕೆ ಭಾಗವಹಿಸಲಿಲ್ಲ ಎಂಬ ಪ್ರಶ್ನೆಗೂ ಉತ್ತರಿಸಿದ ತರೂರ್, ತಮ್ಮ ಅಲಭ್ಯತೆಯ ಬಗ್ಗೆ ಪಕ್ಷದ ನಾಯಕತ್ವಕ್ಕೆ ತಿಳಿಸಿದ್ದು, ಸಾಹಿತ್ಯ ಉತ್ಸವದಲ್ಲಿ ಭಾಗವಹಿಸುವುದರಿಂದ ನಿರಂತರ ಪ್ರಯಾಣ ಕಷ್ಟಕರವಾಗಿತ್ತು ಎಂದು ವಿವರಿಸಿದರು. ನಾನು ಖಂಡಿತವಾಗಿಯೂ ಸಂಸತ್ತಿನಲ್ಲಿ ಪಕ್ಷದ ಎಲ್ಲಾ ಚಟುವಟಿಕೆಗಳಿಗೆ ಹಾಜರಾಗುತ್ತೇನೆ ಮತ್ತು ಆ ಸಮಯದಲ್ಲಿ ಪಕ್ಷದ ನಾಯಕರನ್ನು ಭೇಟಿ ಮಾಡಬಹುದು ಎಂದು ಹೇಳಿದರು.
ತರೂರ್ಗೆ ಅವಮಾನ..?
ಇತ್ತೀಚೆಗೆ ಎರ್ನಾಕುಲಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು, ಈ ಸಭೆಯಲ್ಲಿ ಸಂಸದ ತರೂರ್ಗೆ ಸೂಕ್ತ ಗೌರವ ನೀಡಿಲ್ಲ ಎಂಬ ಮಾತುಗಳು ಕೇಳಿಬಂದಿದ್ದು, ಇದರಿಂದ ಬೇಸರಗೊಂಡಿರುವ ಅವರು ಪಕ್ಷದ ನಾಯಕರುಗಳ ಜೊತೆ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.
ರಾಜ್ಯ ನಾಯಕರು ಮತ್ತು ಹೈಕಮಾಂಡ್ನ ವರಿಷ್ಠರು ಸಂಪರ್ಕಿಸಲು ಪ್ರಯತ್ನಿಸಿದರೂ, ತರೂರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಮತ್ತು ಶನಿವಾರ ಕೋಝಿಕ್ಕೋಡ್‌ನಲ್ಲಿ ನಡೆಯಲಿರುವ ಕೇರಳ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಪ್ರಧಾನಿ ಭೇಟಿಗಾಗಿ ಅಂತರ..?
ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ತರೂರ್ ರಾಜ್ಯದಲ್ಲೇ ಉಳಿದಿದ್ದರು ಎಂದು ವರದಿಯಾಗಿದೆ. ರಾಜ್ಯದಲ್ಲಿ ಅನೇಕ ಯೋಜನೆಗಳಿಗೆ ಚಾಲನೆ ನೀಡಲು ಮತ್ತು ಮುಂಬರುವ ಚುನಾವಣೆ ಪ್ರಚಾರ ಆರಂಭಿಸಲು ಕೇರಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಶುಕ್ರವಾರ ತಿರುವನಂತಪುರಂನಲ್ಲಿ ರೋಡ್ ಶೋ ಮತ್ತು ಸಭೆ ನಡೆಸಿದರು. ಈ ಭೇಟಿಯ ವೇಳೆ ತಮ್ಮ ಕ್ಷೇತ್ರದಲ್ಲಿರಲು ತರೂರ್ ಮೊದಲೇ ಹೈಕಮಾಂಡ್ ಅನುಮತಿ ಕೋರಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದ್ದವು(ಏಜೆನ್ಸೀಸ್).