Donald Trump Backup plan | ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ದೇಶ

ಟ್ರಂಪ್ ಟ್ಯಾರಿಫ್​ಗೆ "ಸುಪ್ರೀಂ" ಪೆಟ್ಟು.. ಅಮೆರಿಕಾ ಅಧ್ಯಕ್ಷರ 'ಪ್ಲಾನ್ ಬಿ' ಇಂದ ಜಾಗತಿಕ ವ್ಯಾಪಾರಕ್ಕೆ ಮತ್ತೆ ಸುಂಕದ ಕಂಟಕ.? | Donald Trump Backup plan

ವಾಷಿಂಗ್ಟನ್: ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೇರಲಾಗಿದ್ದ ಸುಂಕಗಳನ್ನು ಶುಕ್ರವಾರ ಅಮೆರಿಕದ ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ರದ್ದುಗೊಳಿಸಿದ್ದು, ಈ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ (Donald Trump), ನ್ಯಾಯಾಲಯದ ನಡೆಯನ್ನು ಅವಮಾನ ಎಂದು ಕರೆದಿದ್ದಾರೆ.
ಸುಪ್ರೀಂ ಕೋರ್ಟ್​​ನ ತೀರ್ಪಿನ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿರುವ ಟ್ರಂಪ್​, ಈ ಅಡಚಣೆಯ ನಡುವೆಯೂ ತಮ್ಮ ಗುರಿ ತಲುಪಲು ತಮಗೆ ಒಂದು ಬ್ಯಾಕಪ್ ಯೋಜನೆ ಸಿದ್ಧವಿದೆ ಎಂದು ಗುಡುಗಿರುವುದಾಗಿ ರಾಯಿಟರ್ಸ್​ ವರದಿ ಮಾಡಿದೆ.
ಕಳೆದ ವರ್ಷದಿಂದ ಅಮೆರಿಕ ಅಧ್ಯಕ್ಷ ಟ್ರಂಪ್​ ಹಲವಾರು ದೇಶಗಳ ಮೇಲೆ ಸುಂಕಗಳ ಸರಣಿಯನ್ನು ಘೋಷಿಸಿದ್ದು, ಇದರಲ್ಲಿ ಭಾರತದ ಮೇಲೆ ಶೇಕಡಾ 50 ರಷ್ಟು ಸುಂಕಗಳು ಸೇರಿವೆ. ರಷ್ಯಾ ಮತ್ತು ಉಕ್ರೇನ್ ಜೊತೆಗಿನ ನಾಲ್ಕು ವರ್ಷಗಳ ಯುದ್ಧಕ್ಕೆ ಭಾರತ ಹಣಕಾಸು ಒದಗಿಸುತ್ತಿದೆ ಎಂದು ಟ್ರಂಪ್ ಆರೋಪಿಸಿ ಸುಂಕವನ್ನು ಏರಿಸಿದ್ದರು.
ಈ ತಿಂಗಳ ಆರಂಭದಲ್ಲಿ ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಬಂದಿದ್ದರಿಂದ ನವದೆಹಲಿಯ ಮೇಲಿನ ಸುಂಕಗಳನ್ನು ಶೇಕಡಾ 50 ರಿಂದ 18 ಕ್ಕೆ ಇಳಿಸಲಾಗಿದೆ.

ಸುಪ್ರೀಂ ಕೋರ್ಟ್ ಹೇಳಿದ್ದೇನು..?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ವಿವಾದಾತ್ಮಕ ಮತ್ತು ಆಕ್ರಮಣಕಾರಿ ಆರ್ಥಿಕ ನೀತಿಯಾದ ಸಾರ್ವತ್ರಿಕ ಸುಂಕ ವಿಧಿಸಿರುವುದಕ್ಕೆ, ಸ್ವತಃ ಅಲ್ಲಿನ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದ್ದು, ಟ್ರಂಪ್ ವಿಧಿಸಿದ್ದ ಎಲ್ಲಾ ಸುಂಕಗಳನ್ನು ರದ್ದುಗೊಳಿಸಿರುವ ನ್ಯಾಯಾಲಯವು, ಅಧ್ಯಕ್ಷರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ಟ್ರಂಪ್ ಸುಂಕಗಳನ್ನು ವಿಧಿಸುವ ಮೂಲಕ ಸಂವಿಧಾನವು ನೀಡಿದ ಅಧಿಕಾರವನ್ನು ಮೀರಿದ್ದು, ತೆರಿಗೆ ಮತ್ತು ಸುಂಕಗಳ ನಿರ್ಧಾರವು ಕಾಂಗ್ರೆಸ್ (ಅಮೆರಿಕದ ಸಂಸತ್ತು) ವ್ಯಾಪ್ತಿಗೆ ಬರುತ್ತದೆಯೇ ಹೊರತು ಕೇವಲ ಅಧ್ಯಕ್ಷರ ನಿರ್ಧಾರವಲ್ಲ ಎಂದು ಕೋರ್ಟ್ ಹೇಳಿದೆ.
ಟ್ರಂಪ್ 'ಇಂಟರ್ನ್ಯಾಷನಲ್ ಎಮರ್ಜೆನ್ಸಿ ಎಕನಾಮಿಕ್ ಪವರ್ಸ್ ಆಕ್ಟ್' (IEEPA) ಅಡಿಯಲ್ಲಿ ಈ ಸುಂಕಗಳನ್ನು ಜಾರಿಗೆ ತಂದಿದ್ದರು. ಈ ಕಾನೂನನ್ನು ರಾಷ್ಟ್ರೀಯ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕು ಎನ್ನುವ ನಿಯಮವಿದ್ದು, ಆದರೆ ಈಗ ಅದನ್ನು ಸಾಮಾನ್ಯ ವ್ಯಾಪಾರ ನೀತಿಗಾಗಿ ಬಳಸಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ(ಏಜೆನ್ಸೀಸ್​).