ಇಂಡಿಯಾ ಮೈತ್ರಿಕೂಟ 
ದೇಶ

ಚಿಂದಿಯಾಯಿತೇ ಇಂಡಿಯಾ ಮೈತ್ರಿ? ಏನಿದು ಒಳಜಗಳದ ವಾಸ್ತವ?

ಬಿಜೆಪಿ ವಿರುದ್ಧ ರಾಷ್ಟ್ರಮಟ್ಟದ ಪರ್ಯಾಯ ರಾಜಕೀಯ ವೇದಿಕೆಯಾಗಿ 2023ರಲ್ಲಿ ಹುಟ್ಟಿಕೊಂಡ ‘ಇಂಡಿಯನ್ ನ್ಯಾಷನಲ್ ಡೆವಲಪ್ವೆುಂಟಲ್ ಇನ್ಕ್ಲೂಸಿವ್ ಅಲಯನ್ಸ್’ (ಇಂಡಿಯಾ) ಆರಂಭದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ದೇಶದ ಪ್ರಮುಖ ವಿರೋಧ ಪಕ್ಷಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟದ ಭರವಸೆ ಮೂಡಿಸಿತ್ತು. ಆದರೆ ನಾಯಕತ್ವದ ಪೈಪೋಟಿ, ರಾಜ್ಯಮಟ್ಟದ ವೈಷಮ್ಯಗಳು, ಸೀಟು ಹಂಚಿಕೆ ಗೊಂದಲ, ವೈಯಕ್ತಿಕ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರ ಹಾಗೂ ಇತ್ತೀಚಿನ ಚುನಾವಣಾ ಫಲಿತಾಂಶಗಳ ನಂತರದ ಬೆಳವಣಿಗೆಗಳಿಂದ ಮೈತ್ರಿಕೂಟದ ಭವಿಷ್ಯವೇ ಡೋಲಾಯಮಾನವಾಗಿದೆ.

ಮಹಾಘಟಬಂಧನ್ ಕನಸು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್​ಡಿಎ ಮೈತ್ರಿಕೂಟಕ್ಕೆ ಎದುರಾಳಿ ಶಕ್ತಿಯಾಗಿ ವಿರೋಧ ಪಕ್ಷಗಳನ್ನು ಒಂದೇ ವೇದಿಕೆಗೆ ತರಬೇಕೆಂಬ ಯತ್ನದಿಂದ ಇಂಡಿಯಾ ಮೈತ್ರಿ ಹುಟ್ಟಿಕೊಂಡಿತು. 2024ರ ಲೋಕಸಭೆ ಚುನಾವಣೆಗೆ ಮುನ್ನ ದೇಶದ ರಾಜಕೀಯದಲ್ಲಿ ಅತ್ಯಂತ ದೊಡ್ಡ ಚರ್ಚೆಯ ವಿಷಯವಾಗಿದ್ದು ಈ ಮೈತ್ರಿಕೂಟ. ಬಿಹಾರದ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಈ ಒಕ್ಕೂಟದ ಪ್ರಮುಖ ಸೂತ್ರಧಾರರಾಗಿದ್ದರು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಡಿಎಂಕೆ, ಸಮಾಜವಾದಿ ಪಕ್ಷ, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್​ಸಿಪಿ (ಶರದ್ ಪವಾರ್ ಬಣ), ಆರ್​ಜೆಡಿ, ಜೆಎಂಎಂ, ಎಡಪಕ್ಷಗಳು ಸೇರಿದಂತೆ ಎರಡು ಡಜನ್​ಗಿಂತ ಹೆಚ್ಚು ಪಕ್ಷಗಳು ಈ ವೇದಿಕೆಯಲ್ಲಿ ಸೇರಿಕೊಂಡವು. ರಾಜಕೀಯವಾಗಿ ದೊಡ್ಡ ಸಂದೇಶ ನೀಡುವ ಉದ್ದೇಶ ಇದಕ್ಕಿತ್ತು.

ಪಟನಾದಿಂದ ಬೆಂಗಳೂರಿನವರೆಗೆ...

ಬಿಹಾರದ ಪಟನಾದಲ್ಲಿ 2023ರ ಜೂನ್​ನಲ್ಲಿ ನಡೆದ ಈ ಮೈತ್ರಿಕೂಟದ ಸಭೆ ವಿರೋಧ ಪಕ್ಷಗಳ ಏಕತೆಯ ಮೊದಲ ಪ್ರದರ್ಶನವಾಗಿತ್ತು. ಬಳಿಕ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅಧಿಕೃತವಾಗಿ ಐಎನ್​ಡಿಇಎ (ಇಂಡಿಯಾ) ಎಂಬ ಹೆಸರು ಘೊಷಿಸಲಾಯಿತು. ಒಂದೇ ವೇದಿಕೆಯಲ್ಲಿ ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್, ಸ್ಟಾಲಿನ್, ತೇಜಸ್ವಿ ಯಾದವ್, ಶರದ್ ಪವಾರ್, ಅಖಿಲೇಶ್ ಯಾದವ್ ಮುಂತಾದ ನಾಯಕರು ಕಾಣಿಸಿಕೊಂಡದ್ದು ಬಿಜೆಪಿ ವಿರುದ್ಧ ಬಲಿಷ್ಠ ಪ್ರತಿಪಕ್ಷ ರೂಪುಗೊಳ್ಳುತ್ತಿರುವ ಭಾವನೆ ಮೂಡಿಸಿತು. ಮುಂಬೈ ಸಭೆಯಲ್ಲಿ ಸಮನ್ವಯ ಸಮಿತಿ ರಚನೆ, ಕಾಮನ್ ಪ್ರೋಗ್ರಾಂ, ಸೀಟು ಹಂಚಿಕೆ ಕುರಿತ ಮಾತುಕತೆ ಮುಂತಾದ ನಿರ್ಧಾರಗಳನ್ನೂ ಕೈಗೊಳ್ಳಲಾಯಿತು.

ಹೆಚ್ಚಾದ ಮನಸ್ತಾಪ

2024ರ ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ಇಂಡಿಯಾ ಮೈತ್ರಿಕೂಟದ ಒಳಜಗಳಗಳು ಇನ್ನಷ್ಟು ಬಹಿರಂಗವಾಗತೊಡಗಿದವು. ಕಾಂಗ್ರೆಸ್ ತನ್ನನ್ನು ರಾಷ್ಟ್ರಮಟ್ಟದ ಪ್ರಮುಖ ಪರ್ಯಾಯ ಶಕ್ತಿಯಾಗಿ ಬಿಂಬಿಸಲು ಪ್ರಯತ್ನಿಸಿದರೆ, ಹಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ದಬ್ಬಾಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವು. ಮಮತಾ ಬ್ಯಾನರ್ಜಿ ಹಲವು ಸಂದರ್ಭಗಳಲ್ಲಿ ಕಾಂಗ್ರೆಸ್ ಕಾರ್ಯವೈಖರಿಯನ್ನು ಪರೋಕ್ಷವಾಗಿ ಟೀಕಿಸಿ, ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ನಿರ್ಧಾರ ಹೇರಬಾರದು ಎಂಬ ಸಂದೇಶ ನೀಡಿದರು. 

ದೆಹಲಿ, ಹರಿಯಾಣ ಮತ್ತು ಪಂಜಾಬ್​ನಲ್ಲಿ ಆಪ್ ಮತ್ತು ಕಾಂಗ್ರೆಸ್ ಮತ್ತೆ ಪರಸ್ಪರ ವಿರುದ್ಧ ದಾಳಿ ನಡೆಸತೊಡಗಿದವು. ಪಂಜಾಬ್​ನಲ್ಲಿ ಎರಡೂ ಪಕ್ಷಗಳು ನೇರ ಎದುರಾಳಿಗಳಾಗಿರುವುದು ಮೈತ್ರಿಯ ಏಕತೆಯನ್ನೇ ಪ್ರಶ್ನಿಸುವಂತಿತ್ತು. ಮಹಾರಾಷ್ಟ್ರದಲ್ಲಿ ಶಿವಸೇನೆ ವಿಭಜನೆ, ಎನ್​ಸಿಪಿ ಬಣಗಳ ಸಂಘರ್ಷ ಮತ್ತು ಕಾಂಗ್ರೆಸ್​ನ ಪ್ರಾದೇಶಿಕ ಲೆಕ್ಕಾಚಾರಗಳು ಮಹಾವಿಕಾಸ್ ಅಘಾಡಿಯೊಳಗೂ ಗೊಂದಲ ಸೃಷ್ಟಿಸಿದವು. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸಿಪಿಎಂ ನೇತೃತ್ವದ ಎಲ್​ಡಿಎಫ್ ನಡುವೆ ನಡೆದ ತೀವ್ರ ಸಂಘರ್ಷವೂ ಮೈತ್ರಿಕೂಟದ ಒಳವೈಷಮ್ಯಕ್ಕೆ ಕನ್ನಡಿ ಹಿಡಿಯಿತು.

ಪ್ರಧಾನಿ ಅಭ್ಯರ್ಥಿ ಗೊಂದಲ

ಮೈತ್ರಿಕೂಟದ ಪ್ರಮುಖ ಸಮಸ್ಯೆಗಳಲ್ಲಿ ಒಂದು, ಪ್ರಧಾನಿ ಅಭ್ಯರ್ಥಿಯ ಆಯ್ಕೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪಕ್ಷದ ಒಂದು ವರ್ಗ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಬಯಸಿದರೂ, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಅರವಿಂದ ಕೇಜ್ರಿವಾಲ್, ಅಖಿಲೇಶ್ ಯಾದವ್ ಸೇರಿದಂತೆ ಅನೇಕ ನಾಯಕರು ಈ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳಲಿಲ್ಲ. ಮೊದಲು ಬಿಜೆಪಿಯನ್ನು ಸೋಲಿಸೋಣ, ನಂತರ ನಾಯಕನ ಬಗ್ಗೆ ತೀರ್ವನಿಸೋಣ ಎಂಬ ಮಾತು ಕೇಳಿಬಂದರೂ, ಒಳಗೊಳಗೆ ನಾಯಕತ್ವದ ಪೈಪೋಟಿ ತೀವ್ರವಾಗಿತ್ತು.

ಆರಂಭದಿಂದಲೇ ವೈಷಮ್ಯ

ಮೈತ್ರಿಕೂಟದ ಅಡಿ ಪಾಯದಲ್ಲೇ ಅನೇಕ ವಿರೋಧಾಭಾಸಗಳಿದ್ದವು. ಒಂದೆಡೆ ಕಾಂಗ್ರೆಸ್ ದೇಶವ್ಯಾಪಿ ಅಸ್ತಿತ್ವವುಳ್ಳ ರಾಷ್ಟ್ರೀಯ ಪಕ್ಷ. ಇನ್ನೊಂದೆಡೆ ಅನೇಕ ಪ್ರಾದೇಶಿಕ ಪಕ್ಷಗಳಿಗೆ ಅವುಗಳ ರಾಜ್ಯಗಳಲ್ಲಿ ಕಾಂಗ್ರೆಸ್ಸೇ ಮುಖ್ಯ ಎದುರಾಳಿ! ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ತಳಮಟ್ಟದಲ್ಲಿ ಕಾಂಗ್ರೆಸ್ ಜತೆ ಸಮನ್ವಯವೇ ಇರಲಿಲ್ಲ. ಎಡಪಕ್ಷಗಳ ಜತೆಗಂತೂ ಟಿಎಂಸಿ ವೈಷಮ್ಯ ಇನ್ನೂ ತೀವ್ರ. ಪಂಜಾಬ್​ನಲ್ಲಿ ಕಾಂಗ್ರೆಸ್ ಮತ್ತು ಆಪ್ ನೇರ ಎದುರಾಳಿಗಳು. ದೆಹಲಿಯಲ್ಲೂ ಅದೇ ಪರಿಸ್ಥಿತಿ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸಿಪಿಎಂ ನೇತೃತ್ವದ ಎಲ್​ಡಿಎಫ್ ಪರಸ್ಪರ ಪ್ರಮುಖ ವಿರೋಧಿಗಳು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಪ್ರಶ್ನೆಯೇ ದೊಡ್ಡ ತಲೆನೋವಾಗಿತ್ತು. ಹೀಗಾಗಿ ದೆಹಲಿ ಮಟ್ಟದ ಸ್ನೇಹ ರಾಜ್ಯ ಮಟ್ಟದಲ್ಲಿ ಕಾಣಿಸದಿರುವುದು ಮೈತ್ರಿಕೂಟದ ದೊಡ್ಡ ದೌರ್ಬಲ್ಯವಾಯಿತು.

ವಿಭಿನ್ನ ವಿಚಾರಧಾರೆ

ಇಂಡಿಯಾ ಮೈತ್ರಿಕೂಟದ ಪ್ರಮುಖ ದೌರ್ಬಲ್ಯಗಳಲ್ಲಿ ಒಂದು, ಏಕೀಕೃತ ರಾಜಕೀಯ ಮತ್ತು ಆರ್ಥಿಕ ದೃಷ್ಟಿಕೋನದ ಕೊರತೆ. ಮೈತ್ರಿಕೂಟದಲ್ಲಿದ್ದ ಪಕ್ಷಗಳ ಸಿದ್ಧಾಂತ ಮತ್ತು ರಾಜಕೀಯ ಆದ್ಯತೆಗಳು ಪರಸ್ಪರ ಭಿನ್ನ. ಕೆಲವು ಪಕ್ಷಗಳು ಪ್ರಬಲ ಪ್ರಾದೇಶಿಕ ಅಸ್ತಿತ್ವವನ್ನು ಮುಂದಿಟ್ಟರೆ, ಇನ್ನು ಕೆಲವು ಸಮಾಜವಾದಿ ಅಥವಾ ಧರ್ಮನಿರಪೇಕ್ಷ ರಾಜಕೀಯವನ್ನು ಪ್ರತಿಪಾದಿಸುತ್ತಿದ್ದವು. ಎಡಪಕ್ಷಗಳ ಆರ್ಥಿಕ ನೀತಿಗಳು ಕಾಂಗ್ರೆಸ್ ಅಥವಾ ಟಿಎಂಸಿಯ ನಿಲುವುಗಳಿಂದ ಸಾಕಷ್ಟು ಭಿನ್ನ. ಹೀಗಾಗಿ ಬಿಜೆಪಿ ವಿರುದ್ಧ ಒಂದಾಗಿದ್ದರೂ, ಪರ್ಯಾಯ ಆಡಳಿತದ ಸ್ಪಷ್ಟ ಮಾದರಿಯನ್ನು ನೀಡಲು ಮೈತ್ರಿಕೂಟ ವಿಫಲವಾಯಿತು ಎಂಬ ಮಾತಿದೆ.

ಪ್ರಭಾವವೂ ಇತ್ತು...

ಇಂಡಿಯಾ ಮೈತ್ರಿಕೂಟ ಸಂಪೂರ್ಣ ಯಶಸ್ಸು ಸಾಧಿಸದಿದ್ದರೂ, ಅದರ ಕೆಲವು ಪರಿಣಾಮಗಳು ಸ್ಪಷ್ಟವಾಗಿ ಕಾಣಿಸಿಕೊಂಡಿವೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಭಾರೀ ಬಹುಮತ ಪಡೆಯುವುದನ್ನು ತಡೆಯುವಲ್ಲಿ ಇದು ಯಶಸ್ವಿಯಾಯಿತು. ಹಲವು ರಾಜ್ಯಗಳಲ್ಲಿ ಪ್ರತಿಪಕ್ಷಗಳ ಮೈತ್ರಿ ನೇರವಾಗಿ ಚುನಾವಣಾ ಫಲಿತಾಂಶಗಳ ಮೇಲೂ ಪರಿಣಾಮ ಬೀರಿತು. 2019ರ ನಂತರ ಚದುರಿಹೋಗಿದ್ದ ಮತ್ತು ಆತ್ಮವಿಶ್ವಾಸ ಕಳೆದುಕೊಂಡಿದ್ದ ಪ್ರತಿಪಕ್ಷ ರಾಜಕೀಯಕ್ಕೆ ಇಂಡಿಯಾ ಮೈತ್ರಿಕೂಟ ಹೊಸ ಚೈತನ್ಯ ನೀಡಿತು. ವಿರೋಧ ಪಕ್ಷಗಳು ಮತ್ತೆ ರಾಷ್ಟ್ರೀಯ ರಾಜಕೀಯ ಚರ್ಚೆಯ ಕೇಂದ್ರಕ್ಕೆ ಬರುವಂತಾಯಿತು. ಜತೆಗೆ ಸಂವಿಧಾನ ರಕ್ಷಣೆ, ಪ್ರಜಾಪ್ರಭುತ್ವ ಸಂಸ್ಥೆಗಳ ಸ್ವಾಯತ್ತತೆ, ಫೆಡರಲಿಸಂ, ನಿರುದ್ಯೋಗ, ಬೆಲೆ ಏರಿಕೆ ಮತ್ತು ಸಾಮಾಜಿಕ ನ್ಯಾಯದಂತಹ ವಿಚಾರಗಳು ಚುನಾವಣಾ ಚರ್ಚೆಯ ಪ್ರಮುಖ ಅಂಶಗಳಾಗಿ ಹೊರಹೊಮ್ಮಲು ಸಾಧ್ಯವಾಯಿತು. ರಾಜಕೀಯ ಸಂವಾದದ ದಿಕ್ಕು ಬದಲಾಯಿತು.

ನಿತೀಶ್ ಯು-ಟರ್ನ್

ಮೈತ್ರಿಕೂಟಕ್ಕೆ ಅತ್ಯಂತ ದೊಡ್ಡ ಹೊಡೆತ ನೀಡಿದ್ದು ನಿತೀಶ್​ಕುಮಾರ್ ಅವರ ರಾಜಕೀಯ ತಿಪ್ಪರಲಾಗ. ಒಕ್ಕೂಟ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿತೀಶ್, 2024ರ ಆರಂಭದಲ್ಲೇ ಮತ್ತೆ ಎನ್​ಡಿಎ ಸೇರಿದರು. ಬಿಹಾರದಲ್ಲಿ ಆರ್​ಜೆಡಿ-ಕಾಂಗ್ರೆಸ್ ಜತೆಗಿನ ಸರ್ಕಾರ ತೊರೆದು ಬಿಜೆಪಿ ಜತೆ ಕೈಜೋಡಿಸಿದರು. ಇದರಿಂದ ಇಂಡಿಯಾ ಮೈತ್ರಿಕೂಟದ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳೆದ್ದವು. ಒಕ್ಕೂಟ ಕಟ್ಟಿದ ನಾಯಕನೇ ಹೊರಟರೆ ಅದರ ಭವಿಷ್ಯ ಏನು ಎಂಬ ಚರ್ಚೆ ಪ್ರಬಲವಾಯಿತು.

ನಿರೀಕ್ಷೆ ವಾಸ್ತವ

2024ರ ಲೋಕಸಭೆ ಚುನಾವಣೆಯಲ್ಲಿ ಈ ಮೈತ್ರಿಕೂಟ ಬಿಜೆಪಿ ನಿರೀಕ್ಷಿಸಿದ್ದಕ್ಕಿಂತ ಉತ್ತಮ ಪೈಪೋಟಿ ನೀಡಿತು. ಎನ್​ಡಿಎ ಮತ್ತೆ ಅಧಿಕಾರಕ್ಕೆ ಮರಳಿದರೂ, ಬಿಜೆಪಿ ಏಕಪಕ್ಷೀಯ ಬಹುಮತದಿಂದ ಕೆಳಗಿಳಿಯಿತು. ಇನ್ನೊಂದೆಡೆ ಇಂಡಿಯಾ ಮೈತ್ರಿ 230ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಪ್ರತಿಪಕ್ಷವಾಗಿ ಬಲಿಷ್ಠವಾಯಿತು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೈತ್ರಿ ಯಶಸ್ವಿಯಾಯಿತು. ಮಹಾರಾಷ್ಟ್ರದಲ್ಲೂ ಮಹಾವಿಕಾಸ್ ಅಘಾಡಿ ಉತ್ತಮ ಸಾಧನೆ ಮಾಡಿತು. ಇಂಡಿಯಾ ಮೈತ್ರಿ ವಿಫಲವಾಗಿಲ್ಲ ಎಂಬ ಅಭಿಪ್ರಾಯವೂ ಈ ಫಲಿತಾಂಶಗಳಿಂದ ವ್ಯಕ್ತವಾಯಿತು. ಆದರೆ ಸರ್ಕಾರ ರಚನೆ ಸಾಧ್ಯವಾಗದ ಕಾರಣ ಕೂಟದ ಭವಿಷ್ಯ ಮತ್ತೆ ಪ್ರಶ್ನಾರ್ಥಕವಾಯಿತು.

ಮತ್ತಷ್ಟು ಧಕ್ಕೆ ತಂದ ಫಲಿತಾಂಶ

ಇತ್ತೀಚಿನ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನ ಸಭೆ ಚುನಾವಣೆಯ ನಂತರದ ರಾಜಕೀಯ ಬೆಳವಣಿಗೆಗಳು ಇಂಡಿಯಾ ಮೈತ್ರಿಕೂಟದ ಬಲಹೀನತೆಯನ್ನು ಮತ್ತಷ್ಟು ಬಯಲಿಗೆಳೆದಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ರಾಷ್ಟ್ರ ಮಟ್ಟದಲ್ಲಿ ಇಂಡಿಯಾ ಮೈತ್ರಿಯ ಭಾಗವಾಗಿದ್ದರೂ, ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳನ್ನು ತನ್ನ ಪ್ರಮುಖ ಎದುರಾಳಿಗಳಾಗಿಯೇ ನೋಡುತ್ತಿದೆ. ಇದೊಂದು ವಿಚಿತ್ರ ಪರಿಸ್ಥಿತಿ. ತಮಿಳುನಾಡಿನಲ್ಲಿ ಇದು ಇನ್ನೂ ಸಂಕೀರ್ಣ. 

ಡಿಎಂಕೆ ನೇತೃತ್ವದ ಮೈತ್ರಿಯ ಭಾಗವಾಗಿದ್ದ ಕಾಂಗ್ರೆಸ್, ಚುನಾವಣೋತ್ತರ ರಾಜಕೀಯ ಲೆಕ್ಕಾಚಾರದಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮಿದ ವಿಜಯ್ ಅವರ ಟಿವಿಕೆಗೆ ಬೆಂಬಲ ಸೂಚಿಸಿದ್ದು, ಡಿಎಂಕೆ-ಕಾಂಗ್ರೆಸ್ ಸಂಬಂಧದಲ್ಲಿ ಬಿರುಕು ಮೂಡಿಸಿದೆ. ಕಾಂಗ್ರೆಸ್ ಶಾಸಕರನ್ನು ಸೇಫ್ ಲೊಕೇಶನ್​ಗೆ ಕರೆದೊಯ್ಯುವ ಮಟ್ಟಿಗೆ ಅಲ್ಲಿ ರಾಜಕೀಯ ಅನಿಶ್ಚಿತತೆ ನಿರ್ವಣವಾಗಿತ್ತು. ಈ ಎರಡೂ ರಾಜ್ಯಗಳ ಬೆಳವಣಿಗೆಗಳು ಇಂಡಿಯಾ ಮೈತ್ರಿಯಲ್ಲಿ ತತ್ವಾಧಾರಿತ ಒಗ್ಗಟ್ಟಿಗಿಂತ ಪ್ರಾದೇಶಿಕ ಲಾಭವೇ ಪ್ರಮುಖ ಎಂಬ ಭಾವನೆಯನ್ನು ಬಲಪಡಿಸಿವೆ.