Jhalmuri Punchline | ಹೇಗ್‌ನಲ್ಲಿ ಪ್ರಧಾನಿ ಮೋದಿಯವರ 'ಝಲ್ಮುರಿ' ಹಾಸ್ಯದ ಅಲೆ 
ದೇಶ

ನೆದರ್‌ಲ್ಯಾಂಡ್ಸ್​ವರೆಗೆ ತಲುಪ್ತು 'ಝಲ್ಮುರಿ' ವಾಸನೆ...ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಬಂಗಾಳದ ತಿಂಡಿಯ ಕಥೆ ಇದು! | Jhalmuri Punchline

Jhalmuri Punchline: ಪ್ರಧಾನಿ ನರೇಂದ್ರ ಮೋದಿ ಶನಿವಾರ ಯುರೋಪ್ ಪ್ರವಾಸದ ವೇಳೆ ತಮ್ಮ ಪ್ರಚಾರದ ಪಂಚ್‌ಲೈನ್ ನೆನಪಿಸುವ ಮೂಲಕ ಅಲ್ಲಿದ್ದವರ ಮನ ಗೆದ್ದಿದ್ದಾರೆ. ನೆದರ್‌ಲ್ಯಾಂಡ್ಸ್‌ಗೆ ಭೇಟಿ ನೀಡಿರುವ ಅವರು, ಆರಂಭದಲ್ಲಿ ಹೇಗ್‌ನಲ್ಲಿ ಆಯೋಜಿಸಲಾಗಿದ್ದ ಭಾರತೀಯ ಸಮುದಾಯದ ಬೃಹತ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಭಾರತದಲ್ಲಿ ಇತ್ತೀಚೆಗಷ್ಟೇ ಭಾರಿ ಸದ್ದು ಮಾಡಿದ್ದ ತಮ್ಮ ಝಲ್ಮುರಿ ಹೇಳಿಕೆಯನ್ನು ಪುನರುಚ್ಛರಿಸಿದ ಪ್ರಧಾನಿ ಮೋದಿ, ಕಿಕ್ಕಿರಿದು ತುಂಬಿದ್ದ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಾ, ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳಲ್ಲಿ ಭಾಗವಹಿಸಿದ ಮತದಾರರನ್ನು ಅಭಿನಂದಿಸಿದರು.
ಪ್ರಧಾನಿಯವರು ಈ ಚುನಾವಣಾ ಯಶಸ್ಸಿನ ಕುರಿತು ಮಾತನಾಡುತ್ತಿರುವಾಗಲೇ, ಇಡೀ ಭಾಷಣದ ಸಾರವನ್ನು ಮೊದಲೇ ಗ್ರಹಿಸಿದ ಜನಸಮೂಹವು ಏಕಾಏಕಿ ಜೋರಾಗಿ ಚಪ್ಪಾಳೆ ತಟ್ಟಲು ಆರಂಭಿಸಿತು. ಇದನ್ನು ಕಂಡು ಮೋದಿ, ಸ್ವಲ್ಪ ಹೊತ್ತು ಮಾತು ನಿಲ್ಲಿಸಿ, ವೇದಿಕೆಯ ಮೇಲೆ ಮುಗುಳ್ನಗುತ್ತಾ, ಝಲ್ಮುರಿ ಯಹಾಂ ಭಿ ಪಹೋಚ್ ಗಯಿ? (ಝಲ್ಮುರಿ ಇಲ್ಲಿಗೂ ತಲುಪಿದೆಯೇ?) ಎಂಬ ಸಾಲನ್ನು ಹಾಸ್ಯಭರಿತವಾಗಿ ಕೇಳಿದರು.
ಮೋದಿ ಅವರ ಈ ಲಘು ಹಾಸ್ಯಕ್ಕೆ ಇಡೀ ಸಭಾಂಗಣವು ನಗು ಮತ್ತು ಚಪ್ಪಾಳೆಯಿಂದ ತುಂಬಿಹೋಯಿತು. ಕೆಲ ಚುನಾವಣಾ ಒನ್-ಲೈನರ್‌ಗಳು ಮತ್ತು ಪ್ರಚಾರದ ಶೈಲಿಗಳು ಅಧಿಕೃತ ರಾಜತಾಂತ್ರಿಕ ನಿಯೋಗಗಳಿಗಿಂತಲೂ ಎಷ್ಟು ವೇಗವಾಗಿ ದೇಶದ ಗಡಿ ದಾಟಿ ಪ್ರಯಾಣಿಸುತ್ತವೆ ಎಂಬುದಕ್ಕೆ ಈ ಕ್ಷಣ ಜೀವಂತ ಸಾಕ್ಷಿಯಾಯಿತು.

ಝಲ್ಮುರಿ ಸವಿದಿದ್ದ ಮೋದಿ..

ಪಶ್ಚಿಮ ಬಂಗಾಳದ ಜಾರ್ಗ್ರಾಮ್‌ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನು ಮುಗಿಸಿ ವಾಪಸಾಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಹಠಾತ್ ಆಗಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ ರಸ್ತೆಬದಿಯ ಸಣ್ಣ ಅಂಗಡಿಯೊಂದಕ್ಕೆ ಭೇಟಿ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಬಂಗಾಳದ ಅತ್ಯಂತ ಜನಪ್ರಿಯ ತಿಂಡಿಯಾದ ಝಲ್ಮುರಿ ಅಂಗಡಿಯ ಮುಂದೆ ನಿಂತ ಪ್ರಧಾನಿ, ಅಲ್ಲಿನ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತರು. ಅಂಗಡಿಯ ಮಾಲೀಕರು ಮೋದಿ ಸಮ್ಮುಖದಲ್ಲೇ ತಾಜಾ ಝಲ್ಮುರಿಯನ್ನು ಸಿದ್ಧಪಡಿಸಿದರು. ಇದನ್ನು ಕುತೂಹಲದಿಂದ ಗಮನಿಸಿದ ಪ್ರಧಾನಿ ಮೋದಿ ತಿಂಡಿಯ ರುಚಿ ನೋಡಿದರು.
ಇದು ಕೇವಲ ತಿಂಡಿ ಸವಿಯುವುದಕ್ಕೆ ಸೀಮಿತವಾಗದೆ, ಅಂಗಡಿಯ ಮಾಲೀಕರು ಮತ್ತು ಸುತ್ತಮುತ್ತಲ ನಿವಾಸಿಗಳೊಂದಿಗೆ ಅತ್ಯಂತ ಸಹಜವಾಗಿ ಸಂವಹನ ನಡೆಸಿದರು. ಅವರ ದೈನಂದಿನ ಜೀವನೋಪಾಯ ಮತ್ತು ಕೆಲಸದ ಬಗ್ಗೆ ವಿಚಾರಿಸಿದರು. ಈ ಅನಿರೀಕ್ಷಿತ ಭೇಟಿಯಿಂದ ಉತ್ತೇಜಿತರಾದ ಸ್ಥಳೀಯರು ಮೋದಿ, ಮೋದಿ ಮತ್ತು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುವ ಮೂಲಕ ಆ ಪ್ರದೇಶದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದ್ದರು(ಏಜೆನ್ಸೀಸ್​​).