E85 Fuel 
ದೇಶ

ಇ20 ಪೆಟ್ರೋಲ್‌ಗಿಂತ ಇ85 ಇಂಧನವೇ ಸಖತ್ ಚೀಪ್: ಕೇಂದ್ರ ಸಚಿವ ಹರ್ದೀಪ್ ಪುರಿ ಬಿಡುಗಡೆ ಮಾಡಿದ ಹೊಸ ಫ್ಯುಯೆಲ್ ವಿಶೇಷತೆ ಏನು..? | E85 Fuel

ನವದೆಹಲಿ: ಹೊಸದೆಹಲಿ: ದೇಶದ ಇಂಧನ ವಲಯದಲ್ಲಿ ಪರಿಸರಸ್ನೇಹಿ ಮತ್ತು ಆರ್ಥಿಕ ಕ್ರಾಂತಿಗೆ ಮುನ್ನುಡಿ ಬರೆದಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಶೇಕಡಾ 85 ರಷ್ಟು ಎಥನಾಲ್ ಮಿಶ್ರಿತ ಹೊಸ ಇ85 E85 Fuel (ಫ್ಲೆಕ್ಸ್-ಫ್ಯುಯೆಲ್) ಇಂಧನವನ್ನು ದೆಹಲಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್‌ನಲ್ಲಿ ಶುಕ್ರವಾರ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ಸದ್ಯ ಚಾಲ್ತಿಯಲ್ಲಿರುವ ಇ20 (E20) ಇಂಧನಕ್ಕಿಂತ ಪ್ರತಿ ಲೀಟರ್‌ಗೆ ಅಂದಾಜು 20 ರೂಪಾಯಿಗಳಷ್ಟು ಅಗ್ಗವಾಗಲಿದೆ ಎಂದು ಅವರು ಪ್ರಕಟಿಸಿದ್ದಾರೆ. ಈ ಅತ್ಯಾಧುನಿಕ ಇಂಧನವು ವಾಹನ ಸವಾರರ ಜೇಬಿಗೆ ಭಾರಿ ಆಸರೆಯಾಗಲಿದ್ದು, ಮಾಲಿನ್ಯ ನಿಯಂತ್ರಣಕ್ಕೂ ಪ್ರಮುಖ ಕೊಡುಗೆ ನೀಡಲಿದೆ.
ಶೇಕಡಾ 80 ರಿಂದ 85 ರಷ್ಟು ಎಥನಾಲ್ ಮತ್ತು ಶೇಕಡಾ 15 ರಿಂದ 20 ರಷ್ಟು ಮೋಟಾರ್ ಗ್ಯಾಸೋಲಿನ್ ಒಳಗೊಂಡಿರುವ ಈ ಇ85 ಇಂಧನವು, ಎಥನಾಲ್ ಇಂಧನದಲ್ಲಿ ಕ್ಯಾಲೋರಿಫಿಕ್ ಮೌಲ್ಯದ ಕೊರತೆಯಿಂದ ಗ್ರಾಹಕರಿಗೆ ಆಗಬಹುದಾದ ನಷ್ಟವನ್ನು ಸರಿದೂಗಿಸಲು ಮತ್ತು ಅವರನ್ನು ಪ್ರೋತ್ಸಾಹಿಸಲು ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಸಚಿವರು ವಿವರಿಸಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ ಇ85 ಇಂಧನದ ಬೆಲೆಯನ್ನು ಪ್ರತಿ ಲೀಟರ್‌ಗೆ 82.12 ರೂಪಾಯಿಗಳಾಗಿ ನಿಗದಿಪಡಿಸಲಾಗಿದೆ.
ಇ85 ಮಿಶ್ರಿತ ಇಂಧನವು ಪ್ರಸ್ತುತ ರಸ್ತೆಗಿಳಿಯುತ್ತಿರುವ ಸಾಮಾನ್ಯ ಪೆಟ್ರೋಲ್ ವಾಹನಗಳಿಗೆ ಸೂಕ್ತವಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇದು ಕೇವಲ ವಿಶೇಷವಾಗಿ ವಿನ್ಯಾಸಗೊಳಿಸಲಾದ ಫ್ಲೆಕ್ಸ್ ಫ್ಯುಯೆಲ್ ವಾಹನಗಳಿಗೆ (Flex Fuel Vehicles) ಮತ್ತು ಅದಕ್ಕೆ ಹೊಂದುವಂತಹ ಎಂಜಿನ್ ಹೊಂದಿರುವ ವಾಹನಗಳಿಗೆ ಮಾತ್ರ ಪ್ರತ್ಯೇಕವಾಗಿ ಬಳಕೆಯಾಗಲಿದೆ. ವಾಹನ ತಯಾರಕರ ಕಟ್ಟುನಿಟ್ಟಿನ ಪರೀಕ್ಷೆಗಳ ಆಧಾರದ ಮೇಲೆಯೇ ಇ85 ಸಾಮರ್ಥ್ಯದ ವಾಹನಗಳ ಬಳಕೆಯ ಪರಿವರ್ತನೆಯನ್ನು ನಿರ್ಧರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಇ85 ಇಂಧನಕ್ಕೆ ಹೊಂದಿಕೊಳ್ಳುವ ಇಂತಹ ವಿಶೇಷ ವಾಹನಗಳನ್ನು ಸುಲಭವಾಗಿ ಗುರುತಿಸಲು ಅವುಗಳಿಗೆ ಪ್ರತ್ಯೇಕವಾದ ಮತ್ತು ವಿಭಿನ್ನವಾದ ನಂಬರ್ ಪ್ಲೇಟ್‌ಗಳನ್ನು ನೀಡುವ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಹೊಸ ಇಂಧನ ವಿತರಣಾ ಜಾಲದ ವಿಸ್ತರಣೆಯ ಕುರಿತು ಮಾತನಾಡಿದ ಕೇಂದ್ರ ಸಚಿವರು, ಮುಂಬರುವ ಕೆಲವೇ ವಾರಗಳಲ್ಲಿ ದೇಶಾದ್ಯಂತ ಕನಿಷ್ಠ 50 ರಿಂದ 100 ಇ85 ಇಂಧನ ಮಾರಾಟ ಮಳಿಗೆಗಳು (ಡಿಸ್ಪೆನ್ಸಿಂಗ್ ಸ್ಟೇಷನ್) ಕಾರ್ಯಾರಂಭ ಮಾಡಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರಂಭಿಕ ಹಂತದಲ್ಲಿ ರಾಷ್ಟ್ರ ರಾಜಧಾನಿ ವಲಯ (NCR) ಮತ್ತು ಮಹಾರಾಷ್ಟ್ರದ ಪುಣೆ-ಮುಂಬೈ-ನಾಗ್ಪುರ ವಲಯಗಳಲ್ಲಿ ಈ ಮಳಿಗೆಗಳನ್ನು ಲಭ್ಯವಾಗುವಂತೆ ಮಾಡಲಾಗುವುದು. ಈ ವರ್ಷದ ಅಂತ್ಯದ ವೇಳೆಗೆ ಇಂತಹ ಮಳಿಗೆಗಳ ಸಂಖ್ಯೆಯನ್ನು 500 ಕ್ಕೆ ಹೆಚ್ಚಿಸಲು ಮತ್ತು 2027 ರ ಅಂತ್ಯದ ವೇಳೆಗೆ ದೇಶಾದ್ಯಂತ ಸರಿಸುಮಾರು 5,000 ಇ85 ಇಂಧನ ಮಾರಾಟ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಗುರಿ ಚಿಂತನೆ ನಡೆಸಿದೆ ಎಂದು ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ(ಏಜೆನ್ಸೀಸ್​).