ಇಬ್ಬರು ಕೇಂದ್ರ ಸಚಿವರು ಸೇರಿದಂತೆ ಎಂಟು ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ಮಿಸ್​!  
ದೇಶ

ರಾಜ್ಯಸಭಾ ಚುನಾವಣೆ: ಇಬ್ಬರು ಕೇಂದ್ರ ಸಚಿವರು ಸೇರಿದಂತೆ ಎಂಟು ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ಮಿಸ್​! | BJP

ಲಖನೌ: ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿರುವ ಮುಂಬರುವ ಚುನಾವಣೆಗಾಗಿ ಬಿಜೆಪಿ (BJP) ಸೋಮವಾರ ಎಂಟು ಅಭ್ಯರ್ಥಿಗಳನ್ನು ಘೋಷಿಸಿದೆ.

ಲಖನೌ: ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿರುವ ಮುಂಬರುವ ಚುನಾವಣೆಗಾಗಿ ಬಿಜೆಪಿ (BJP) ಸೋಮವಾರ ಎಂಟು ಅಭ್ಯರ್ಥಿಗಳನ್ನು ಘೋಷಿಸಿದೆ.

ಉತ್ತರ ಪ್ರದೇಶದ ರಾಜ್ಯಸಭಾ ಚುನಾವಣೆಗೆ ಬಿಜೆಪಿ ತನ್ನ ಎಂಟು ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಶಾಸಕ ಧರ್ಮಪಾಲ್ ಸಿಂಗ್ ಹಾಗೂ ಹಿರಿಯ ಮುಖಂಡರಾದ ರಾಧಾಕಾಂತ್ ಓಝಾ, ಗೋಪಿ ಕೃಷ್ಣ ಪಾಂಡೆ ಮತ್ತು ಪ್ರಕಾಶ್ ಪಾಲ್ ಸೇರಿದಂತೆ ಒಟ್ಟು ಎಂಟು ಅಭ್ಯರ್ಥಿಗಳನ್ನು ಪಕ್ಷವು ಕಣಕ್ಕಿಳಿಸಿದೆ. ಮಾಜಿ ಲೋಕಸಭಾ ಸದಸ್ಯರಾಗಿರುವ, ಜೊತೆಗೆ ಉತ್ತರ ಪ್ರದೇಶದಲ್ಲಿ ಬಿಜೆಪಿಯ ದಲಿತ ಮುಖವಾಗಿ ಪರಿಗಣಿಸಲ್ಪಟ್ಟಿರುವ ವಿದ್ಯಾಸಾಗರ್ ಸೋಂಕರ್ ಅವರಿಗೆ ಪಕ್ಷವು ಟಿಕೆಟ್ ನೀಡಿದೆ.

ಇವರಷ್ಟೆ ಅಲ್ಲದೆ, ಮಾಜಿ ಸಂಸದೆ ಪ್ರಿಯಾಂಕಾ ಸಿಂಗ್ ರಾವತ್ ಮತ್ತು ಉತ್ತರ ಪ್ರದೇಶದಲ್ಲಿ ತಳಮಟ್ಟದಲ್ಲಿ ಪಕ್ಷಕ್ಕಾಗಿ ಪ್ರಚಾರ ಮಾಡಿರುವ ಹಿರಿಯ ನಾಯಕ ರಾಮ್ ಪ್ರತಾಪ್ ಸಿಂಗ್ ಚೌಹಾಣ್ ಅವರಿಗೂ ರಾಜ್ಯಸಭಾ ಟಿಕೆಟ್ ನೀಡಲಾಗಿದೆ. ಇವರೊಂದಿಗೆ ಹಿರಿಯ ಬಿಜೆಪಿ ನಾಯಕ ಹಾಗೂ ಜಾರ್ಖಂಡ್ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರ ಪುತ್ರಿ ಶ್ರುತಿ ಗಂಗ್ವಾರ್ ಅವರನ್ನು ಸಹ ಪಕ್ಷವು ಕಣಕ್ಕಿಳಿಸಿದೆ.

ಸಂಪೂರ್ಣ ವೇಳಾಪಟ್ಟಿ ಹೀಗಿದೆ

  • ಅಧಿಸೂಚನೆ ಹೊರಡಿಸುವ ದಿನಾಂಕ: ಸೆಪ್ಟೆಂಬರ್ 29, 2026 (ಮಂಗಳವಾರ)

  • ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 6, 2026 (ಮಂಗಳವಾರ)

  • ನಾಮಪತ್ರಗಳ ಪರಿಶೀಲನೆ: ಅಕ್ಟೋಬರ್ 7, 2026 (ಬುಧವಾರ)

  • ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: ಅಕ್ಟೋಬರ್ 9, 2026 (ಶುಕ್ರವಾರ)

  • ಮತದಾನದ ದಿನಾಂಕ: ಅಕ್ಟೋಬರ್ 16, 2026 (ಶುಕ್ರವಾರ) ಬೆಳಿಗ್ಗೆ 9:00 ರಿಂದ ಸಂಜೆ 4:00 ರವರೆಗೆ

  • ಮತ ಎಣಿಕೆ: ಅಕ್ಟೋಬರ್ 16, 2026, ಸಂಜೆ 5:00 ರಿಂದ ಆರಂಭ

  • ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ಕೊನೆಯ ದಿನಾಂಕ: ಅಕ್ಟೋಬರ್ 19, 2026 (ಸೋಮವಾರ)

ಹರ್ದೀಪ್ ಪುರಿ, ಬಿ.ಎಲ್. ವರ್ಮಾಗೆ ಕೊಕ್​

ಅಚ್ಚರಿಯೆಂಬಂತೆ, ಪ್ರಸ್ತುತ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ ಬಿ ಎಲ್​ ವರ್ಮಾ, ಈ ಹಿಂದೆ ಕರ್ನಾಟಕದ ಬಿಜೆಪಿ ಉಸ್ತುವಾರಿಯಾಗಿದ್ದ ಹಿರಿಯ ನಾಯಕ ಅರುಣ್ ಸಿಂಗ್ ಅವರನ್ನು ಸಹ ಪಕ್ಷವು ಕೈಬಿಟ್ಟಿದೆ. ಮೇಲ್ಮನೆಯ ಸದಸ್ಯರಾಗಿದ್ದ ಗೀತಾ ಶಾಕ್ಯ, ಸೀಮಾ ದ್ವಿವೇದಿ ಮತ್ತು ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರಿ ನೀರಜ್ ಶೇಖರ್ ಕೂಡ ಮತ್ತೊಮ್ಮೆ ಟಿಕೆಟ್ ಪಡೆಯಲು ವಿಫಲರಾಗಿದ್ದಾರೆ.

Rajyasabha BJP 5 OCT.pdf
Preview

ನಿರೀಕ್ಷೆಯಂತೆ ಬಿಜೆಪಿಗೆ ಮೇಲುಗೈ!

ಚುನಾವಣೆ ನಡೆಯಲಿರುವ 10 ಸ್ಥಾನಗಳ ಪೈಕಿ ಬಿಜೆಪಿ ಪ್ರಸ್ತುತ ಎಂಟು ಸ್ಥಾನಗಳನ್ನು ಹೊಂದಿದೆ. ಸಂಖ್ಯೆಯ ಪ್ರಕಾರ, ಪಕ್ಷದ ಎಲ್ಲಾ ಎಂಟು ಅಭ್ಯರ್ಥಿಗಳನ್ನು ಮತ್ತೆ ಮೇಲ್ಮನೆಗೆ ಆಯ್ಕೆ ಮಾಡಿಕೊಳ್ಳುವ ಬಲವನ್ನು ಪಕ್ಷವು ಹೊಂದಿದೆ. ಇತ್ತ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಈಗಾಗಲೇ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ.

ಸಮಾಜವಾದಿ ಪಕ್ಷವು ತನ್ನ ಇಬ್ಬರು ನಾಯಕರನ್ನು ಆಯ್ಕೆ ಮಾಡಲು ಅಗತ್ಯವಿರುವ ಸಂಖ್ಯಾಬಲವನ್ನು ಹೊಂದಿದ್ದು, ಆದರೂ ಕೂಡ ಕೆಲ ಎನ್​ಡಿಎ ಶಾಸಕರ ಅಡ್ಡ ಮತದಾನದ ಮೇಲೆ ಭರವಸೆ ಇಟ್ಟು ಮೂರು ಸ್ಥಾನಗಳನ್ನು ಗೆಲ್ಲಲು ಪಕ್ಷವು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿರುವುದಾತಿ ಇಂಡಿಯಾ ಟಿವಿ ವರದಿ ಮಾಡಿದೆ. ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ಧನರಾಜ್ ಪರಿಮಲ್ ನಥ್ವಾನಿ ಅವರನ್ನು ಎಸ್​ಪಿ ಅಭ್ಯರ್ಥಿಗಳೆಂದು ಹೆಸರಿಸಿದ್ದು, ಮೂರನೇ ಅಭ್ಯರ್ಥಿಯನ್ನು ನಾಳೆಯ ವೇಳೆಗೆ ಘೋಷಿಸುವ ಸಾಧ್ಯತೆ ದಟ್ಟವಾಗಿದೆ.

ಕೇಸರಿ ಪಾಳಯಕ್ಕೆ ಎಸ್​ಪಿ ಚಾಲೆಂಜ್​!

ಇದೇ ವಿಷಯವಾಗಿ ಎರಡು ದಿನಗಳ ಹಿಂದೆ ಪಿಟಿಐ ಜೊತೆ ಮಾತನಾಡಿದ್ದ ಎಸ್‌ಪಿ ಸಂಸದ ವೀರೇಂದ್ರ ಸಿಂಗ್, ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಯಾವ ಮಾರ್ಗದ ಮೂಲಕ ಗೆಲ್ಲಿಸಿಕೊಂಡಿತ್ತೋ, ಅದೇ ಮಾರ್ಗದ ಮೂಲಕ ನಾವು ನಮ್ಮ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಕ್ಟೋಬರ್ 16 ರಂದು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಚುನಾವಣೆಗೆ ಮತದಾನ ನಡೆಯಲಿದ್ದು, ಅಂದೇ ಸಂಜೆ ಮತ ಎಣಿಕೆ ಕಾರ್ಯ ನಡೆದು, ಫಲಿತಾಂಶವು ಹೊರಬೀಳಲಿದೆ(ಏಜೆನ್ಸೀಸ್​).