ನವದೆಹಲಿ: ಕಳೆದು ತಿಂಗಳು ಇತರ ಐದು ರಾಜ್ಯಸಭಾ ಸದಸ್ಯರೊಂದಿಗೆ ಆಪ್ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಂಡ ಮಾಜಿ ಕ್ರಿಕೆಟರ್ ಮತ್ತು ರಾಜ್ಯಸಭಾ ಸದಸ್ಯ ಹರ್ಭಜನ್ ಸಿಂಗ್(Harbhajan Singh) ತಮ್ಮ ವಿರುದ್ಧ ಆಪ್ ಮಾಡಿದ್ದ ಆರೋಪಕ್ಕೆ ಶುಕ್ರವಾರ(ಮೇ 23) ಆಕ್ರೋಶ ವ್ಯಕ್ತಪಡಿಸಿದ್ದು, ಪಕ್ಷವೇ ರಾಜ್ಯಸಭಾ ಸ್ಥಾನಗಳನ್ನು ಮಾರಿದೆ ಎಂದು ತಿರುಗೇಟು ನೀಡಿದ್ದಾರೆ.
ಎಕ್ಸ್ನಲ್ಲಿ ಆಪ್ ನಾಯಕ ದೇವೇಂದ್ರ ಯಾದವ್, ನಿಮ್ಮ ಆತ್ಮಸಾಕ್ಷಿಗೆ ನೀವು ಏನು ಬೆಲೆ ಕೊಟ್ಟಿದ್ದೀರಿ? ಬಿಜೆಪಿ ದೇಶದ್ರೋಹಿಗಳಿಗೆ 25-25 ಕೋಟಿ ರೂ. ಬಿಡ್ ಮಾಡಿದೆ ಎಂದು ನಾನು ಕೇಳಿದ್ದೇನೆ, ಅದು ನಿಜವೇ ಎಂದು ಪ್ರಶ್ನಿಸಿದ್ದರು.
ಅದಕ್ಕೆ ಪ್ರತಿಕ್ರಿಯಿಸಿರುವ ಹರ್ಭಜನ್ ಸಿಂಗ್, ನನ್ನನ್ನು ದೇಶದ್ರೋಹಿ ಎಂದು ಕರೆಯುವ ಮೊದಲು ಪಂಜಾಬ್ ರಾಜ್ಯಸಭಾ ಸ್ಥಾನವನ್ನು ಎಷ್ಟು ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ನಿಮ್ಮ ಸ್ವಂತ ಜನರನ್ನೇ ಕೇಳಿ. ಯಾರಿಗೆ ಮತ್ತು ಯಾರಿಂದ ಎಷ್ಟು ಲಂಚ ನೀಡಲಾಗಿದೆ ಎಂದು ನಾನು ನಿಮಗೆ ಹೇಳುತ್ತೇನೆ ಎಂದು ಹೇಳಿದ್ದಾರೆ.
ಪಂಜಾಬ್ ಅನ್ನು ಲೂಟಿ ಮಾಡಲು ಮತ್ತು ಲಾಲಾಗೆ ಸರಕುಗಳನ್ನು ತಲುಪಿಸಲು ಯಾರನ್ನಾದರೂ ಮಂತ್ರಿಯಾಗಿ ಅಥವಾ ಕಾವಲುಗಾರನನ್ನಾಗಿ ಹೇಗೆ ನೇಮಿಸಲಾಯಿತು ಎಂದು ನಾನು ನಿಮಗೆ ಹೇಳುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಏಪ್ರಿಲ್ 24ರಂದು ಎಎಪಿ ಸಂಸದರಾಗಿದ್ದ ರಾಘವ್ ಛಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್, ಹರ್ಭಜನ್ ಸಿಂಗ್, ರಾಜೇಂದ್ರ ಗುಪ್ತಾ, ವಿಕ್ರಮ್ ಸಾಹ್ನಿ ಹಾಗೂ ಸ್ವಾತಿ ಮಲಿವಾಲ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಯಲ್ಲಿ ಸೇರ್ಪಡೆಗೊಂಡರು. ಸಾಂವಿಧಾನಿಕ ನಿಬಂಧನೆಯು ಒಂದು ಪಕ್ಷದ ಮೂರನೇ ಎರಡರಷ್ಟು ಸಂಸದರು ಅನರ್ಹತೆಯನ್ನು ಎದುರಿಸದೆ ಮತ್ತೊಂದು ಪಕ್ಷದೊಂದಿಗ ವಿಲೀನಗೊಳ್ಳಲು ಅವಕಾಶ ನೀಡುತ್ತದೆ ಎಂದು ತಮ್ಮ ಪಕ್ಷಾಂತರವನ್ನು ರಾಘವ್ ಚಡ್ಡಾ ಸಮರ್ಥಿಸಿಕೊಂಡಿದ್ದರು (ಏಜೆನ್ಸೀಸ್).