ಬಿಜೆಪಿ ಸಂಸದ ಹಾಗೂ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ 
ದೇಶ

ಹಮೀದ್ ಅನ್ಸಾರಿ ಹೇಳಿಕೆ: ಕಾಂಗ್ರೆಸ್​ ಸಂಪೂರ್ಣವಾಗಿ ಮುಸ್ಲಿಂ ಲೀಗ್-ಮಾವೋವಾದಿ ಪಕ್ಷವಾಗಿ ಮಾರ್ಪಟ್ಟಿದೆ: ಬಿಜೆಪಿ ವಾಗ್ದಾಳಿ | BJP

ನಿರುಪಾದಿ ಬ್ಯಾಡಗಿ
ನವದೆಹಲಿ: ಹಿಂದೂ ಬಲಪಂಥಿಯ ಕೋಮುವಾದದ ಕುರಿತಾಗಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಕಾಂಗ್ರೆಸ್​ ಸಂಪೂರ್ಣವಾಗಿ ಮುಸ್ಲಿಂ ಲೀಗ್-ಮಾವೋವಾದಿ ಪಕ್ಷವಾಗಿ ಮಾರ್ಪಟ್ಟಿದೆ ಎಂದು ವಾಗ್ದಾಳಿ ನಡೆಸಿದೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ, ಭಾರತಕ್ಕೆ ನಿಜವಾದ ಅಪಾಯವಿರುವುದು ಕಮ್ಯುನಿಸಂನಿಂದಲ್ಲ, ಬದಲಾಗಿ ಹಿಂದೂ ಬಲಪಂಥೀಯ ಕೋಮುವಾದದಿಂದ ಎಂಬ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಅಭಿಪ್ರಾಯವನ್ನು ಅನ್ಸಾರಿ ಪ್ರಸ್ತಾಪಿಸಿದ್ದರು.
ಈ ಕುರಿತು ಮಾತನಾಡಿರುವ ಬಿಜೆಪಿ ಸಂಸದ ಹಾಗೂ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, ಕಾಂಗ್ರೆಸ್ ಪಕ್ಷವು ಎಡಪಂಥೀಯ ಸಿದ್ಧಾಂತದತ್ತ ವಾಲಿದ್ದು, ಆ ಪಕ್ಷ ಯಾವ ಸ್ಥಿತಿಗೆ ತಲುಪಿದೆ ಎಂಬುದನ್ನು ಅನ್ಸಾರಿ ಅವರ ಹೇಳಿಕೆಗಳು ಬಹಿರಂಗಪಡಿಸಿವೆ ಎಂದು ಹೇಳಿದ್ದಾರೆ.
ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು 2019ರಲ್ಲಿ ಬರೆಯಲಾದ ಪುಸ್ತಕವೊಂದನ್ನು ಉಲ್ಲೇಖಿಸಿದ್ದಾರೆ. ಆ ಪುಸ್ತಕದ ಪ್ರಕಾರ ಹಿಂದೂ ರಾಷ್ಟ್ರೀಯತೆಗಿಂತ ಕಮ್ಯುನಿಸಂ ತಮಗೆ ದೊಡ್ಡ ಬೆದರಿಕೆಯಲ್ಲ ಎಂದು ನೆಹರೂ ಜಿ ಹೇಳಿದ್ದಾರೆ ಎಂದು ನಮಗೆ ತಿಳಿಸಿದ್ದಾರೆ. ಇದಕ್ಕಾಗಿ ನಾನು ಹಮೀದ್ ಅನ್ಸಾರಿ ಅವರನ್ನು ಅಭಿನಂದಿಸಲು ಬಯಸುತ್ತೇನೆ. ಇದನ್ನೂ ಹೇಳುವ ಮೂಲಕ ಅವರು ಮೂರು ಅತ್ಯಂತ ಪ್ರಮುಖ ವಿಷಯಗಳನ್ನು ಹೊರತಂದಿದ್ದಾರೆ.
1) ಕಾಂಗ್ರೆಸ್ ಸಂಪೂರ್ಣವಾಗಿ 'ಮುಸ್ಲಿಂ ಲೀಗ್-ಮಾವೋವಾದಿ ಕಾಂಗ್ರೆಸ್' ಆಗಿ ಮಾರ್ಪಟ್ಟಿದೆ ಎಂಬುದನ್ನು ಅವರು ಸ್ಪಷ್ಟವಾಗಿ ಬಯಲಿಗೆಳೆದಿದ್ದಾರೆ.
2) ನೆಹರೂ ಜಿ ಅವರ ಪ್ರಕಾರ ಕಮ್ಯುನಿಸಂ ನಿಜಕ್ಕೂ ಒಂದು ಬೆದರಿಕೆಯಾಗಿತ್ತು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ, ಆದರೆ ಇಂದು ಕಾಂಗ್ರೆಸ್ ಅತೀವ ಎಡಪಂಥೀಯತೆಯತ್ತ ಸಾಗಿದೆ.
3) ನೆಹರೂ ಅವರ ಉಲ್ಲೇಖವನ್ನು ತಂದಿದ್ದಾರೆ. ಇದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಮಾತುಗಳಲ್ಲಿ ಪ್ರತಿಫಲಿಸುವ ವಿಷಯಗಳ ಮೂಲವು ಅವರ ವಂಶಾವಳಿಯಲ್ಲೇ ಅಡಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದಿದ್ದಾರೆ.
ಸಂವಿಧಾನ ತಜ್ಞ ಮತ್ತು ಲೇಖಕ ಎ.ಜಿ. ನೂರಾನಿ ಅವರ ಸ್ಮರಣಾರ್ಥ ಶುಕ್ರವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅನ್ಸಾರಿ ಅವರು ಭಾರತಕ್ಕೆ ಎದುರಾಗಿರುವ ಸಂಭಾವ್ಯ ಬೆದರಿಕೆಗಳ ಕುರಿತಾದ ನೆಹರೂ ಅವರ ನಿಲುವುಗಳನ್ನು ಚರ್ಚಿಸುವಾಗ ನೂರಾನಿ ಅವರ 2019ರ ಕೃತಿಯಾದ ದಿ ಆರ್‌ಎಸ್‌ಎಸ್: ಎ ಮೆನೇಸ್ ಟು ಇಂಡಿಯಾ ಅನ್ನು ಉಲ್ಲೇಖಿಸಿದರು (ಏಜೆನ್ಸೀಸ್).