HAL ನೂತನ ಚೇರ್ಮನ್-ಎಂಡಿ ಆಗಿ ಕೋಟ ರವಿ ಆಯ್ಕೆ
- ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ ನೂತನ ಚೇರ್ಮನ್-ಎಂಡಿ ಆಗಿ ಕೋಟ ರವಿ ಆಯ್ಕೆ
- ಎಚ್‌ಎಎಲ್‌ನಲ್ಲಿ ಈ ಹುದ್ದೆಗೆ ಏರಿದ ಮೊದಲ ದಕ್ಷಿಣ ಕನ್ನಡಿಗ ಎಂಬ ಕೀರ್ತಿಗೆ ಪಾತ್ರ
- ಇಂದು (ಜ. 29) ನಡೆದ ಸಭೆಯಲ್ಲಿ ಸಾರ್ವಜನಿಕ ಉದ್ದಿಮೆಗಳ ಆಯ್ಕೆ ಮಂಡಳಿಯಿಂದ ಶಿಫಾರಸು
ಬೆಂಗಳೂರು: ಕೋಟ ರವಿ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ( HAL ) ನ ನೂತನ ಚೇರ್ಮನ್-ಎಂಡಿ ಆಗಿ ಆಯ್ಕೆಯಾಗಿದ್ದಾರೆ. ಎಚ್‌ಎಎಲ್‌ನಲ್ಲಿ ಈ ಹುದ್ದೆಗೆ ಏರಿದ ಮೊದಲ ದಕ್ಷಿಣ ಕನ್ನಡಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಇಂದು (ಜ. 29) ನಡೆದ ಸಭೆಯಲ್ಲಿ ಸಾರ್ವಜನಿಕ ಉದ್ದಿಮೆಗಳ ಆಯ್ಕೆ ಮಂಡಳಿ (PESB), ಎಚ್‌ಎಎಲ್‌ನ ಮುಂದಿನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರ (CMD) ಹುದ್ದೆಗೆ ಕೋಟ ರವಿ ಅವರನ್ನು ಶಿಫಾರಸು ಮಾಡಿದೆ. ರವಿ ಅವರು 2024ರ ನವೆಂಬರ್ 26ರಂದು ಎಚ್‌ಎಎಲ್‌ನ ಕಾರ್ಯಾಚರಣೆಗಳ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಇದಕ್ಕೂ ಮುನ್ನ ಕಾರ್ಪೊರೇಟ್ ಪ್ಲಾನಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು. ಎಲ್‌ಸಿಎ ತೇಜಸ್ ವಿಭಾಗದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದರು. ಅವರ ಸೇವೆಯನ್ನು ಗುರುತಿಸಿ, ಇದೀಗ ಚೇರ್ಮನ್-ಎಂಡಿ ಆಗಿ ಆಯ್ಕೆ ಮಾಡಲಾಗಿದೆ.
ಅಂದಹಾಗೆ, ರವಿ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ಅಹಮದಾಬಾದ್ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಮತ್ತು ಫ್ರಾನ್ಸ್‌ನ ಟೌಲೌಸ್ನಲ್ಲಿರುವ ಇನ್‌ಸ್ಟಿಟ್ಯೂಟ್ ಏರೋನಾಟಿಕ್ ಎಟ್ ಸ್ಪೇಷಿಯಲ್ (ಐಎಎಸ್) ನಿಂದ ಉನ್ನತ ಶಿಕ್ಷಣ ಪಡೆದಿದ್ದಾರೆ. 30 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿದ್ದು, ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದಾರೆ.
ಕೋಟಾ ಅವರು ಭಾರತೀಯ ವಾಯುಪಡೆಯ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್‌ಸಿಎ) ತೇಜಸ್ ಫ್ಲೀಟ್ ಅನ್ನು ಕಾರ್ಯಾಚರಣೆಗೆ ತರಲು ಮುಖ್ಯ ಭೂಮಿಕೆ ವಹಿಸಿದ್ದಾರೆ. 2021ರಲ್ಲಿ 83 ಎಂಕೆ-1ಎ ತೇಜಸ್ ವಿಮಾನಗಳ ಪೂರೈಕೆಗಾಗಿ ಭಾರತದ ರಕ್ಷಣಾ ಕ್ಷೇತ್ರದ ಅತಿದೊಡ್ಡ ಒಪ್ಪಂದವನ್ನು ಯಶಸ್ವಿಯಾಗಿ ಪಡೆಯಲು ಎಚ್‌ಎಎಲ್ ತಂಡವನ್ನು ರವಿ ಅವರು ಮುನ್ನಡೆಸಿದರು.
ಅಂದಹಾಗೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ವಿಮಾನಗಳು, ಹೆಲಿಕಾಪ್ಟರ್‌ಗಳು, ಇಂಜಿನ್‌ಗಳು ಮತ್ತು ಸಂಬಂಧಿತ ಏರೋಸ್ಪೇಸ್ ವ್ಯವಸ್ಥೆಗಳ ವಿನ್ಯಾಸ, ತಯಾರಿಕೆ ಮತ್ತು ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದೆ, (ಏಜೆನ್ಸೀಸ್).