ಗುರುಗ್ರಾಮ: ಹರಿಯಾಣದ ಗುರುಗ್ರಾಮದ ತಾಯಿಯೊಬ್ಬರು ತಮ್ಮ ಮಗುವಿನ ನರ್ಸರಿ ಶಾಲೆಯ ಫೀಸ್ ಸ್ಟ್ರಕ್ಚರ್ ಹಂಚಿಕೊಂಡಿದ್ದು(Nursery Fee Viral), ಅದರ ಮೊತ್ತ ನೋಡಿ ಇಡೀ ಇಂಟರ್ನೆಟ್ ಸ್ತಬ್ದವಾಗಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಎಂಬುದು ಸಾಮಾನ್ಯ ಜನರಿಗೆ ಗಗನಕುಸುಮವಾಗುತ್ತಿದೆ ಎಂಬ ಮಾತಿಗೆ ಪುಷ್ಟಿ ನೀಡುವಂತ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.
ಗುರುಗ್ರಾಮ ಮೂಲದ ಹೆಚ್‌ಆರ್ ಪ್ರೊಫೆಷನಲ್ ಪೂಜಾ ಸೇಟಿಯಾ ಅವರು ತಮ್ಮ ಲಿಂಕ್ಡ್‌ಇನ್ (LinkedIn) ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. 2026-27ರ ಶೈಕ್ಷಣಿಕ ಸಾಲಿನಲ್ಲಿ ತಮ್ಮ ಮಗುವನ್ನು ನರ್ಸರಿಗೆ ಸೇರಿಸಲು ಅವರು ಪ್ರತಿ ಮೂರು ತಿಂಗಳಿಗೆ (Quarterly) ಬರೋಬ್ಬರಿ 1,24,780 ರೂಪಾಯಿ ಫೀಸ್ ಕಟ್ಟಬೇಕಿದೆ. ಅಂದರೆ ವರ್ಷಕ್ಕೆ ಸುಮಾರು 3.7 ಲಕ್ಷ ರೂಪಾಯಿ ಕೇವಲ ನರ್ಸರಿ ಶಿಕ್ಷಣಕ್ಕಾಗಿ ವ್ಯಯಿಸಬೇಕಿದೆ!
'ಇದು ಜೋಕ್ ಅಲ್ಲ' ಎಂದ ತಾಯಿ
ಫೀಸ್ ಕಾರ್ಡ್ ಫೋಟೋ ಹಂಚಿಕೊಂಡಿರುವ ಪೂಜಾ, "ಈ ಸ್ಕ್ರೀನ್‌ಶಾಟ್ ಖಂಡಿತವಾಗಿಯೂ ಜೋಕ್ ಅಲ್ಲ. ನನ್ನ ಮಗ ಈ ವರ್ಷ ನರ್ಸರಿ ಆರಂಭಿಸುತ್ತಿದ್ದಾನೆ, ಇದು ಅವನ ಶಾಲೆಯ ಫೀಸ್ ಸ್ಟ್ರಕ್ಚರ್. ಇದರ ಬದಲು ನಾನು ಮಗನಿಗೆ ಮನೆಯಲ್ಲೇ ಪಾಠ ಮಾಡಿ, ಈ ಹಣವನ್ನು ಎಸ್‌ಐಪಿ (SIP) ನಲ್ಲಿ ಹೂಡಿಕೆ ಮಾಡಿದರೆ ಅವನು ಪದವಿ ಮುಗಿಸುವಷ್ಟರಲ್ಲಿ ದೊಡ್ಡ ಮೊತ್ತದ ಹಣ ಅವನ ಕೈಲಿರುತ್ತದೆ" ಎಂದು ವ್ಯಂಗ್ಯವಾಗಿ ಅಳಲು ತೋಡಿಕೊಂಡಿದ್ದಾರೆ.
ನೆಟ್ಟಿಗರ ಆಕ್ರೋಶ ಮತ್ತು ಹಳೆಯ ನೆನಪು
ಪೂಜಾ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಎಕ್ಸ್ (X) ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿ, "ಈ ಒಂದು ಕ್ವಾರ್ಟರ್ ಫೀಸ್‌ನಲ್ಲಿ (1.24 ಲಕ್ಷ) ನಾನು ನನ್ನ ಇಡೀ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದೆ. ಅಷ್ಟೇ ಅಲ್ಲದೆ, ಉಳಿದ ಹಣದಲ್ಲಿ ಹೆಚ್‌ಟಿಎಂಎಲ್ ಕೋರ್ಸ್ ಕೂಡ ಮಾಡಿದ್ದೆ!" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ನಾನು ನರ್ಸರಿಯಿಂದ ಡಿಗ್ರಿ ಮುಗಿಸುವವರೆಗೆ ಅಂದರೆ 17 ವರ್ಷಗಳ ಶಿಕ್ಷಣಕ್ಕೆ ಒಟ್ಟು 1 ಲಕ್ಷ ಖರ್ಚು ಮಾಡಿರಬಹುದು. ಈಗಿನ ಕಾಲ ಬದಲಾಗಿದೆ ನಿಜ, ಆದರೆ ಇದು ಲೂಟಿಯಂತೆ ಕಾಣುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಮಾಜದ ಪ್ರತಿಷ್ಠೆ ಮತ್ತು ಶಿಕ್ಷಣ
ಈ ಫೀಸ್ ವಿಚಾರವಾಗಿ ಪರ-ವಿರೋಧ ಚರ್ಚೆಗಳೂ ನಡೆದಿವೆ. ಕೆಲವರು "ನರ್ಸರಿ ಮುಗಿಸುವಷ್ಟರಲ್ಲಿ ಮಗು ಸ್ಟಾರ್ಟ್-ಅಪ್ ಶುರು ಮಾಡುವಷ್ಟು ಟ್ಯಾಲೆಂಟ್ ಆಗುತ್ತದೆಯೇ?" ಎಂದು ತಮಾಷೆ ಮಾಡಿದರೆ, ಇನ್ನು ಕೆಲವರು ಸಮಾಜದ ಪ್ರತಿಷ್ಠೆಗಾಗಿ ಪೋಷಕರು ಇಷ್ಟು ದೊಡ್ಡ ಮೊತ್ತ ವ್ಯಯಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ,(ಏಜೆನ್ಸೀಸ್).