ಬೈಕರ್ ಯುವತಿಗೆ ಬೇಕಂತಲೇ ಕಾರಿನಲ್ಲಿ ಗುದ್ದಿದ ಪುಂಡನ ಅಸಲಿ ಮುಖ ಕಡೆಗೂ ರಿವೀಲ್
- ಗುರುಗ್ರಾಮ್ನಲ್ಲಿ ಬೈಕರ್ ಯುವತಿಗೆ ಬೇಕಂತಲೇ ಕಾರಿನಿಂದ ಡಿಕ್ಕಿ ಹೊಡೆದ ಪುಂಡನ ಅಟ್ಟಹಾಸ
- ಅಸ್ಸಾಂ ಸೇನೆಯಲ್ಲಿ ಅಧಿಕಾರಿಯಾಗಿರುವ ತನ್ನ ಸ್ನೇಹಿತನ ಕಾರನ್ನು ಮನಬಂದಂತೆ ಡ್ರೈವಿಂಗ್
- ಬೈಕರ್ ಯುವತಿಗೆ ಗುದ್ದಿದ ರಭಸಕ್ಕೆ ಒಂದಷ್ಟು ದೂರ ಉಜ್ಜಿಕೊಂಡು ಹೋದ ಬೈಕ್
ಹರಿಯಾಣ: ಗುರುಗ್ರಾಮ್ನಲ್ಲಿ ಬೈಕರ್ ಯುವತಿಗೆ ಬೇಕಂತಲೇ ಹೆದ್ದಾರಿಯಲ್ಲಿ ತನ್ನ ಕಾರಿನಿಂದ ಡಿಕ್ಕಿ ಹೊಡೆದ ಪ್ರಕರಣದ (Gurugram Hit-And-Run) ಆರೋಪಿ ಕಲ್ಯಾಣ್ ಬೈನ್ಸ್ಲಾ ಅಸಲಿ ಮುಖ ಬೆಳಕಿಗೆ ಬಂದಿದೆ.
ಅಸ್ಸಾಂ ಸೇನೆಯಲ್ಲಿ ಅಧಿಕಾರಿಯಾಗಿರುವ ತನ್ನ ಸ್ನೇಹಿತನ ಕಾರನ್ನು ಮನಬಂದಂತೆ ಚಲಾಯಿಸಿಕೊಂಡು ಬಂದ ಕಲ್ಯಾಣ್ ಎಂಬಾತ, ಅದೇ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬೈಕರ್ ಯುವತಿಯೊಂದಿಗೆ ಸಣ್ಣ ವಿಚಾರಕ್ಕೆ ವಾಗ್ವಾದ ನಡೆಸಿದ್ದಾನೆ. ಯುವತಿ ಹೇಳಿದ ಯಾವುದೋ ಮಾತಿಗೆ ಸಿಟ್ಟಿಗೆದ್ದು, ವೇಗವಾಗಿ ಕಾರಿನಲ್ಲಿ ಆಕೆಯ ಬೈಕ್ಗೆ ಗುದ್ದಿದ್ದಾನೆ. ಕಾರಿನ ರಭಸಕ್ಕೆ ಆಕೆಗೆ ನೆಲಕ್ಕೆ ಉರುಳಿ ಬಿದ್ದರೆ, ಬೈಕ್ ಒಂದಷ್ಟು ದೂರ ಉಚಿಕೊಂಡು ಹೋಗಿದೆ. ಈ ಪ್ರಕರಣ ಬೆನ್ನತ್ತಿರುವ ಖಾಕಿಗೆ ಈಗ ಕೆಲವು ವಿಚಾರಗಳು ಸ್ಪಷ್ಟವಾಗಿದೆ.
ಇನ್ಸ್ಟಾ ಖಾತೆ ಡಿಆ್ಯಕ್ಟಿವೇಟ್!
ಸದ್ಯಕ್ಕೆ ತಲೆಮರಿಸಿಕೊಂಡಿರುವ ಪುಂಡ ಕಲ್ಯಾಣ್ ಸುಳಿವಿಗೆ ಬಲೆ ಬೀಸಿರುವ ಪೊಲೀಸರು, ಈತ ಓರ್ವ ಬಾಡಿ ಬಿಲ್ಡರ್ ಎಂಬುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಕೂಡಲೇ ಆತ ನಡೆಸುತ್ತಿದ್ದ ಜಿಮ್ ಮಾಲೀಕರನ್ನು ವಿಚಾರಿಸಿದ್ದಾರೆ. ಈ ವೇಳೆ, ಬಾಡಿಗೆ ವಿಚಾರಕ್ಕೆ ಸಣ್ಣ ಜಗಳವಾಗಿ ಆತನನ್ನು ಕಳೆದ ತಿಂಗಳ ಹಿಂದೆಯಷ್ಟೇ ಅಲ್ಲಿಂದ ಖಾಲಿ ಮಾಡಿಸಿದ್ದಾಗಿ ಹೇಳಿದ್ದಾರೆ. ಇನ್ನು ಆತನ ಸೋಷಿಯಲ್ ಮೀಡಿಯಾ ಖಾತೆ ಚೆಕ್ ಮಾಡಿದ ಖಾಕಿಗೆ ಆತನ ಫೋಟೋಗಳು ಕಣ್ಣಿಗೆ ಬಿದ್ದಿವೆ.
ಸೋಶಿಯಲ್ ಮೀಡಿಯಾದಲ್ಲಿ ತಾನೊಬ್ಬ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ' ಹಾಗೂ ಭಾರತೀಯ ರಗ್ಬಿ ತಂಡದ ಸದಸ್ಯ ಎಂದು ಬರೆದುಕೊಂಡಿದ್ದಾನೆ. ಆದರೆ, ಆತನ ಸಾಧನೆಗಳ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಅಥವಾ ಸಾಕ್ಷಿಗಳು ಸಿಗದಿರುವುದು ಗಮನಾರ್ಹ. ಇನ್ಸ್ಟಾ ಖಾತೆಯಲ್ಲಿ ಹೆಚ್ಚಿನ ಸಂಖ್ಯೆಯ ಫಾಲೋವರ್ಸ್ ಹೊಂದಿರುವ ಕಲ್ಯಾಣ್, ಅಮೆಚೂರ್ ಒಲಿಂಪ್ಸ್ ಇಂಡಿಯಾ ಎಂಬ ಬಾಡಿ ಬಿಲ್ಡಿಂಗ್ ಪಂದ್ಯಾವಳಿಯ ವಿಜೇತ ಎಂದೂ ಬರೆದುಕೊಂಡಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಬೈಕರ್ ಯುವತಿ ಅಳಲು
ಭಾನುವಾರ ರಾತ್ರಿ ಬೈಕರ್ ಯುವತಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ರಸ್ತೆ ಅಪಘಾತದ ಭೀಕರ ದೃಶ್ಯವನ್ನು ಹಂಚಿಕೊಂಡಿದ್ದು, ಕಾರಿನಲ್ಲಿದ್ದ ವ್ಯಕ್ತಿಗಳು ತಮಗೆ ಕಿರುಕುಳ ನೀಡಲು ಯತ್ನಿಸಿದ್ದನ್ನು ವಿವರಿಸಿದ್ದಾರೆ. ನನಗೆ ಹೇಳಲು ಮಾತೇ ಬರುತ್ತಿಲ್ಲ. ಇಂದು ನನಗೆ ಗುರುಗ್ರಾಮದ ರಸ್ತೆಗಳಲ್ಲಿ ಕಿಂಚಿತ್ತು ಸುರಕ್ಷತೆ ಇಲ್ಲ ಎಂಬ ಭಾವನೆ ಮೂಡಿದೆ. ಕಾನೂನಿನ ಭಯವಿಲ್ಲದ ಇಂತಹವರು ಹೆದ್ದಾರಿಯಲ್ಲಿ ಡಿಕ್ಕಿ ಹೊಡೆದು ಪರಾರಿಯಾಗುತ್ತಾರೆ" ಎಂದು ಆಕ್ರೋಶ ಹೊರಹಾಕಿದ್ದಾರೆ,(ಏಜೆನ್ಸೀಸ್).