ಮೃತ ಉಗ್ರ ಉಸ್ಮಾನ್ 
ದೇಶ

ಕಥುವಾದಲ್ಲಿ ಗುಂಡಿನ ಚಕಮಕಿ: ಓರ್ವ ಪಾಕ್​ ಮೂಲದ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು | Gunfight

ಶ್ರೀನಗರ: ಜಮ್ಮು-ಕಾಶ್ಮೀರದ ಕಥುವಾದಲ್ಲಿ ಇಂದು(ಜ. 23) ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್-ಎ-ಮೊಹಮ್ಮದ್ ಎಂಬ ಉಗ್ರ ಸಂಘಟನೆಯ ಓರ್ವ ಪಾಕ್​ ಉಗ್ರನನ್ನು ಭಾರತೀಯ ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ವರದಿಯಾಗಿದೆ.
ಮೃತ ಉಗ್ರನನ್ನು ಜೆಇಎಂ ಕಮಾಂಡರ್ ಉಸ್ಮಾನ್ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ  ಎಂ4 ಸ್ವಯಂಚಾಲಿತ ರೈಫಲ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ. 
ಈ ಕುರಿತು ಎಕ್ಸ್​ನಲ್ಲಿ ಜಮ್ಮು ವಿಭಾಗದ ಐಜಿಪಿ ಭೀಮ್ ಸೇನ್ ಟುಟಿ, ಕಥುವಾ ಜಿಲ್ಲೆಯ ಬಿಲ್ಲಾವರ್ ಸಾಮಾನ್ಯ ಪ್ರದೇಶದಲ್ಲಿ ಸೇನೆ ಮತ್ತು ಸಿಆರ್‌ಪಿಎಫ್ ಜೊತೆ ಜಂಟಿ ಕಾರ್ಯಾಚರಣೆಯಲ್ಲಿ  ಪಾಕಿಸ್ತಾನಿ ಜೈಶ್ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಿಶ್ತ್ವಾರ್ ಜಿಲ್ಲೆಯಲ್ಲಿ 12,000 ಅಡಿ ಎತ್ತರದಲ್ಲಿ ಜೈಷ್-ಇ-ಮೊಹಮ್ಮದ್ ಉಗ್ರರ ಅಡಗುತಾಣವನ್ನು ಭದ್ರತಾ ಪಡೆಗಳು ಭೇದಿಸಿದ ಕೆಲವು ದಿನಗಳ ನಂತರ ಈ ಎನ್‌ಕೌಂಟರ್ ನಡೆದಿದೆ. ಈ ಅಡಗುತಾಣವು ಬಹು ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಹೊಂದಿದ್ದು, ಏಕಕಾಲದಲ್ಲಿ ನಾಲ್ಕು ಉಗ್ರರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿತ್ತು. ಆಹಾರ, ಅಡುಗೆ ಅನಿಲ, ದೇಸಿ ತುಪ್ಪ, ಧಾನ್ಯಗಳು ಮತ್ತು ಕಂಬಳಿಗಳಂತಹ ಅಗತ್ಯ ವಸ್ತುಗಳು ಪತ್ತೆಯಾಗಿದ್ದವು (ಏಜೆನ್ಸೀಸ್).