ಮುಂಬೈ: ಟೀಮ್ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂಧಾನ ( Smriti Mandhana ) ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೋಡಿಯ ಮದುವೆ ನ.23ರಂದು ನಡೆಯಬೇಕಿತ್ತು. ಆದರೆ ಈ ಮದುವೆ ನಿಂತಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬುತ್ತಿದ್ದಂತೆ ಕೆಲವು ವಿಚಾರ ಹಾಗೂ ವ್ಯಕ್ತಿಗಳ ಹೆಸರು ಮುನ್ನೆಲೆಗೆ ಬಂದವು.
ಮಹಾರಾಷ್ಟ್ರ ಮೂಲದ ಸ್ಮೃತಿ ಮಂಧಾನ, ಇಂದೋರ್ ಮೂಲದ ಪಲಾಶ್ ಮುಚ್ಚಲ್ ಅವರೊಂದಿಗೆ 2019ರಿಂದಲೂ ಡೇಟಿಂಗ್ ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದರು. ಸ್ಮೃತಿ ಅವರು ಟೀಮ್ ಇಂಡಿಯಾದ ಆರಂಭಿಕ ಆಟಗಾರ್ತಿ ಮತ್ತು ಉಪನಾಯಕಿಯಾಗಿದ್ದರೆ, ಪಲಾಶ್ ಮುಚ್ಚಲ್ ಬಾಲಿವುಡ್‌ನಲ್ಲಿ ಸಂಗೀತ ನಿರ್ದೇಶಕನಾಗಿದ್ದಾರೆ. ನವೆಂಬರ್ 23 ರಂದು ಮದುವೆ ನಡೆಯಬೇಕಿತ್ತು. ಆದರೆ, ಸಂಜೆಯೊತ್ತಿಗೆ ಇಡೀ ಚಿತ್ರಣವೇ ಬದಲಾಯಿತು. ಮದುವೆಯನ್ನು ಮುಂದೂಡಲಾಗಿದೆ ಎಂಬ ಸುದ್ದಿ ಹೊರಬಿತ್ತು.
ತಂದೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾದ ನಂತರ, ಸ್ಮೃತಿ ಅವರು ತನ್ನ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಕೇಳಿಕೊಂಡಿದ್ದಾರೆ. ಹೀಗಾಗಿ ಮದುವೆಯನ್ನು ಮುಂದೂಡಲಾಗಿದೆ ಎಂದು ಅವರ ಮ್ಯಾನೇಜರ್ ಬಹಿರಂಗಪಡಿಸಿದ್ದಾರೆ. ಅದಾದ ನಂತರ, ಪಲಾಶ್ ಕೂಡ ಅನಿರೀಕ್ಷಿತವಾಗಿ ಆಸ್ಪತ್ರೆಗೆ ದಾಖಲಾಗಿದರು. ಈ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪಲಾಶ್ ಅವರು ಮೇರಿ ಡಿ'ಕೋಸ್ಟಾ ಎಂಬ ನೃತ್ಯ ನಿರ್ದೇಶಕಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹರಿಬಿಡಲಾಯಿತು. ಅಲ್ಲದೆ, ಪಲಾಶ್ ಮತ್ತು ಮುಚ್ಚಲ್ ಚಾಟ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್‌ಗಳನ್ನು ಸಹ ಹರಿಬಿಡಲಾಯಿತು. ಇದರಲ್ಲಿ ಪಲಾಶ್ ಅವರು ಸ್ಮೃತಿಯ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆಕೆ ತನಗೆ ಸರಿಯಾಗಿ ಟೈಂ ಕೊಡುತ್ತಿಲ್ಲ ಎಂದು ಪಲಾಶ್ ಹೇಳಿಕೊಂಡಿದ್ದಾರೆ. ಅಲ್ಲದೆ, ತನ್ನೊಂದಿಗೆ ಡೇಟ್ ಮಾಡುವಂತೆ ಪಲಾಶ್ ಕೇಳಿಕೊಂಡಿದ್ದಾರೆ. ಆದರೆ, ವೈರಲ್ ಆಗಿರುವ ಸ್ಕ್ರೀನ್ಶಾಟ್ಗಳ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಅದೊಂದು ವದಂತಿಯಾಗಿದೆ.
ಪಲಾಶ್ ಬಗ್ಗೆ ತಿಳಿದ ಸ್ಮೃತಿಯ ತಂದೆ ಶ್ರೀನಿವಾಸ್ ನವೆಂಬರ್ 22ರ ರಾತ್ರಿಯೇ ಪಲಾಶ್ ಅವರನ್ನು ಎದುರಿಸಿ, ಪ್ರಶ್ನಿಸಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ದೊಡ್ಡದಾಗಿ ಜಗಳ ಜಡೆದಿದೆ. ಎರಡೂ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಶ್ರೀನಿವಾಸ್ ಅವರಿಗೆ ಹೃದಯಾಘಾತವಾಗಿದೆ ಎಂದು ಗಾಸಿಪ್ ಹರಡುತ್ತಿದ್ದಾರೆ.
ಮದುವೆ ಮುಂದೂಡಿಕೆಯ ಸ್ವಲ್ಪ ಸಮಯದ ನಂತರ, ಸ್ಮೃತಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಅಳಿಸಿಹಾಕಿರುವುದನ್ನು ಅಭಿಮಾನಿಗಳು ಗಮನಿಸಿದರು, ಅದರಲ್ಲಿ ಅವರ ನಿಶ್ಚಿತಾರ್ಥ ಮತ್ತು ಪ್ರಪೋಸಲ್ ಫೋಟೋಗಳು ಸೇರಿವೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಬಿಸಿಯಾಗುತ್ತಿದ್ದಂತೆ, ಸ್ಮೃತಿ ಮತ್ತು ಪಲಾಶ್‌ಗೆ ಅವರ ಮದುವೆ ನೃತ್ಯಗಳನ್ನು ಕಲಿಸಲು ನೇಮಕಗೊಂಡಿದ್ದ ಬೋಸ್ಕೊ ಗುಂಪಿನ ಇಬ್ಬರು ನೃತ್ಯ ನಿರ್ದೇಶಕರಾದ ನಂದಿಕಾ ದ್ವಿವೇದಿ ಮತ್ತು ಗುಲ್ನಾಜ್ ಅವರು ಈ ವಿವಾದದಲ್ಲಿ ಭಾಗಿಯಾಗಿದ್ದಾರೆ ಎಂದು ಅನಾಮಧೇಯ ಪೋಸ್ಟ್ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಆರೋಪವು ಕಾಡ್ಗಿಚ್ಚಿನಂತೆ ಹರಡಿತು, ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ಕೆಲವೇ ಗಂಟೆಗಳಲ್ಲಿ, ಎರಡೂ ಹೆಸರುಗಳು ದೇಶಾದ್ಯಂತ ಟ್ರೆಂಡಿಂಗ್ ಆಗಲು ಪ್ರಾರಂಭಿಸಿದವು, ಹೀಗಾಗಿ ಗುಲ್ನಾಜ್ ಈ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ.
ಗುಲ್ನಾಜ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, “ನನ್ನ ಮತ್ತು ನನ್ನ ಸ್ನೇಹಿತೆ ನಂದಿಕಾ ಬಗ್ಗೆ ಸಾಕಷ್ಟು ಊಹಾಪೋಹಗಳು ಮತ್ತು ಸುಳ್ಳು ಹೇಳಿಕೆಗಳು ಹರಡುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ, ಆದ್ದರಿಂದ ನಾವು ಈ ಸಮಸ್ಯೆಯಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ನಾವು ಯಾರನ್ನಾದರೂ ಸಾಮಾಜಿಕವಾಗಿ ತಿಳಿದಿದ್ದೇವೆ ಅಥವಾ ಅವರೊಂದಿಗೆ ಫೋಟೋ ತೆಗೆದುಕೊಂಡಿದ್ದೇವೆ ಎಂದ ಮಾತ್ರಕ್ಕೆ ನಾವು ಅವರ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದ್ದೇವೆಂದು ಅರ್ಥವಲ್ಲ. ದಯವಿಟ್ಟು ವಿಷಯಗಳನ್ನು ಗೌರವದಿಂದ ಇಟ್ಟುಕೊಳ್ಳೋಣ ಮತ್ತು ಆತುರದ ತೀರ್ಮಾನಗಳಿಗೆ ಬರುವುದು ಬೇಡ. ನಿಮ್ಮ ತಿಳುವಳಿಕೆ ಮತ್ತು ಬೆಂಬಲವನ್ನು ನಾವು ಪ್ರಶಂಸಿಸುತ್ತೇವೆ ” ಎಂದು ಬರೆದುಕೊಂಡು ಸ್ಪಷ್ಟನೆ ನೀಡಿದ್ದಾರೆ.
ನೃತ್ಯ ಸಂಯೋಜಕಿ ನಂದಿಕಾ ದ್ವಿವೇದಿ ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಿಲ್ಲ ಮತ್ತು ತಮ್ಮ ಪ್ರೊಫೈಲ್ ಅನ್ನು ಖಾಸಗಿಯಾಗಿಟ್ಟಿದ್ದಾರೆ. ಸ್ಮೃತಿ ಅಥವಾ ಪಲಾಶ್ ಈ ವಿವಾದದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕುಟುಂಬ ಸದಸ್ಯರು ಮತ್ತು ವಿವಾಹ ಆಯೋಜಕರ ವರದಿಗಳ ಪ್ರಕಾರ, ಕುಟುಂಬದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದ ಕಾರಣ ಸಮಾರಂಭವನ್ನು ಮುಂದೂಡಲಾಗಿದೆ. ಅದಕ್ಕೂ ಮೀರಿ, ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳು ಹೆಚ್ಚುತ್ತಲೇ ಇದ್ದರೂ, ಎರಡೂ ಕಡೆಯವರು ಮೌನವಾಗಿರಲು ಆಯ್ಕೆ ಮಾಡಿಕೊಂಡಿದ್ದಾರೆ.
ಮೇರಿ ಡಿ'ಕೋಸ್ಟಾ ಎಂಬ ನೃತ್ಯ ನಿರ್ದೇಶಕಿ ಹೆಸರು ಕೂಡಾ ಕೇಳಿ ಬಂದಿತ್ತು. ಈ ಕುರಿತಾಗಿ ಸ್ವತಃ ಇವರು ಸೋಶಿಯಲ್ ಮೀಡಿಯಾದಲ್ಲಿ ಸ್ಟಷ್ಟನೆ ನೀಡಿದ್ದಾರೆ. ತಾನು ನೃತ್ಯ ಸಂಯೋಜಕಿ ಅಲ್ಲ ಅಥವಾ ಪಲಾಶ್ ಮೋಸ ಮಾಡಿದ ವ್ಯಕ್ತಿಯಲ್ಲ. ತಾನು ಕ್ರಿಕೆಟ್ ಅನ್ನು ನೋಡುತ್ತೇನೆ ಮತ್ತು ಸ್ಮೃತಿಯನ್ನು ಪ್ರೀತಿಸುತ್ತೇನೆ. ನಾನು ಇನ್ನೊಬ್ಬ ಮಹಿಳೆಯನ್ನು ಎಂದಿಗೂ ನೋಯಿಸುವುದಿಲ್ಲ, ಅದಕ್ಕಾಗಿಯೇ ನಾನು ಎಲ್ಲದರ ಬಗ್ಗೆ ಪಾರದರ್ಶಕವಾಗಿರಬೇಕು ಎಂದು ಭಾವಿಸಿದೆ. ವಿಷಯಗಳು ಗೊಂದಲಕ್ಕೊಳಗಾಗುತ್ತಿರುವುದರಿಂದ ನಾನು ಇದನ್ನು ಹೇಳುತ್ತಿದ್ದೇನೆ ಮತ್ತು ಜನರು ತಪ್ಪು ವಿಷಯಗಳನ್ನು ಊಹಿಸಿಕೊಳ್ಳುವುದನ್ನು ನಾನು ಬಯಸುವುದಿಲ್ಲ" ಎಂದು ಮೇರಿ ಹೇಳಿದರು.