Gujarat Viral Mundan Video
ಗುಜರಾತ್: ಭಾರತೀಯ ಸಂಸ್ಕೃತಿಯಲ್ಲಿ 'ಮುಂಡನ' ಅಥವಾ 'ಜವಳ'(ಮೊದಲ ಬಾರಿಗೆ ಮಗುವಿನ ತಲೆಯ ಕೂದಲು ತಗೆಯುವುದು) ಎಂಬುದು ಮಗುವಿನ ಜೀವನದ ಪವಿತ್ರ ಘಟ್ಟ. ಸಾಮಾನ್ಯವಾಗಿ ಮಗು ಹುಟ್ಟಿದ ನಂತರ ಮೊದಲ ಬಾರಿ ಕೂದಲು ತೆಗೆಸುವ ಈ ಆಚರಣೆಯಲ್ಲಿ ಮಗು ಅಳುವುದು ಅಥವಾ ಭಯಪಡುವುದು ಸಹಜ. ಆದರೆ, ಗುಜರಾತ್‌ನ(Gujarat Viral Mundan Video) ಒಂದು ಪುಟ್ಟ ಹಳ್ಳಿಯ ಕುಟುಂಬವೊಂದು ತನ್ನ ಮಗುವಿನ ಭಯವನ್ನು ದೂರ ಮಾಡಲು ಕೈಗೊಂಡ ನಿರ್ಧಾರ ಈಗ ಇಡೀ ಇಂಟರ್ನೆಟ್ ಲೋಕದ ಹೃದಯ ಗೆದ್ದಿದೆ.
ಹೌದು, ಮಗು ಮುಂಡನ ಮಾಡಿಸಿಕೊಳ್ಳುವಾಗ ತಾನು ಮಾತ್ರ ಒಂಟಿ ಎಂದು ಭಾವಿಸಬಾರದು ಎಂಬ ಕಾರಣಕ್ಕೆ ತಂದೆ, ತಾಯಿ ಹಾಗೂ ಅಜ್ಜಿ ಸೇರಿದಂತೆ ಇಡೀ ಕುಟುಂಬವೇ ಒಟ್ಟಾಗಿ ತಲೆ ಬೋಳಿಸಿಕೊಂಡು ಮಗುವಿಗೆ ಸಾಥ್ ನೀಡಿದೆ!
ಮಗುವಿಗಾಗಿ ತಾಯಿಯ ತ್ಯಾಗ!
ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ @Jimmyy__02 ಎಂಬ ಬಳಕೆದಾರರು ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ಒಂದು ಮುದ್ದಾದ ಮಗುವಿನ ಮುಂಡನ ಸಮಾರಂಭ ನಡೆಯುತ್ತಿರುವುದನ್ನು ಕಾಣಬಹುದು. ಮಗು ಕೂದಲು ಕತ್ತರಿಸುವಾಗ ಅಸುರಕ್ಷಿತ ಭಾವನೆ ಅನುಭವಿಸಬಾರದು ಎಂದು ಮೊದಲು ತಂದೆ ತಲೆ ಬೋಳಿಸಿಕೊಂಡರೆ, ನಂತರ ಮಗುವನ್ನು ಎತ್ತಿಕೊಂಡಿದ್ದ ತಾಯಿ ಮತ್ತು ಅಜ್ಜಿ ಕೂಡ ನಗುನಗುತ್ತಲೇ ತಮ್ಮ ಕೂದಲನ್ನು ಅರ್ಪಿಸಿದ್ದಾರೆ.
ಕುಟುಂಬದ ಈ ಅಪರೂಪದ ಬೆಂಬಲದಿಂದಾಗಿ ಮಗು ಯಾವುದೇ ಭಯವಿಲ್ಲದೆ, ಪ್ರೀತಿಯ ವಾತಾವರಣದಲ್ಲಿ ತನ್ನ ಮೊದಲ ಕ್ಷೌರವನ್ನು ಮಾಡಿಸಿಕೊಂಡಿದೆ. "ಮಗುವಿನ ಮುಂಡನ ಸಮಾರಂಭದ ಅತ್ಯಂತ ಮಧುರ ಕ್ಷಣವಿದು" ಎಂದು ನೆಟ್ಟಿಗರು ಈ ವೀಡಿಯೊವನ್ನು ಕೊಂಡಾಡುತ್ತಿದ್ದಾರೆ.
ಪ್ರೀತಿಯೋ ಅಥವಾ ಅತಿರೇಕವೋ?
ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಬಹುತೇಕರು ಈ ಕುಟುಂಬದ ನಡೆಯನ್ನು ಶ್ಲಾಘಿಸಿದ್ದಾರೆ. "ಮಗುವಿನ ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಬೀರಲು ಇಡೀ ಕುಟುಂಬವೇ ಈ ರೀತಿ ಮಾಡಿದ್ದು ನಿಜಕ್ಕೂ ಶ್ಲಾಘನೀಯ. ಇದು ಪ್ರೀತಿಯ ಪರಮಾವಧಿ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಂದೆಡೆ ಕೆಲವು ಜನರು ಇದನ್ನು ವಿರೋಧಿಸಿದ್ದಾರೆ. "ಮಹಿಳೆಯರಿಗೆ ಕೂದಲು ಸೌಂದರ್ಯದ ಸಾಂಕೇತಿಕ ಭಾಗ, ಮಗುವಿಗಾಗಿ ತಾಯಿ ತಲೆ ಬೋಳಿಸಿಕೊಳ್ಳುವ ಅಗತ್ಯವಿರಲಿಲ್ಲ, ಇದು ಸಂಪ್ರದಾಯದ ಅತಿರೇಕ" ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದರೆ, ಟೀಕೆಗಳಿಗಿಂತ ಈ ಕುಟುಂಬದ ವಾತ್ಸಲ್ಯಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದ್ದು, ಮಗುವಿನ ಧೈರ್ಯಕ್ಕಾಗಿ ಹೆತ್ತವರು ಏನು ಬೇಕಾದರೂ ಮಾಡಬಲ್ಲರು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಮುಂಡನ ಸಂಪ್ರದಾಯದ ಮಹತ್ವ
ಹಿಂದೂ ಧರ್ಮದ 16 ಸಂಸ್ಕಾರಗಳಲ್ಲಿ ಮುಂಡನ ಕೂಡ ಒಂದು. ಮಗು ತನ್ನ ಹಿಂದಿನ ಜನ್ಮದ ಕಲ್ಮಶಗಳನ್ನು ತೊರೆದು ಹೊಸ ಜೀವನವನ್ನು ಆರಂಭಿಸಲು ಈ ಸಂಪ್ರದಾಯ ನಡೆಸಲಾಗುತ್ತದೆ ಎನ್ನಲಾಗುತ್ತದೆ,(ಎಜೆನ್ಸೀಸ್).