ಕೆ.ಅಣ್ಣಾಮಲೈ 
ದೇಶ

ಗುಜರಾತ್ ಕೇಂದ್ರಿತ ಅಭಿವೃದ್ಧಿ ಬದಲಾಗಬೇಕು: ಎಲ್ಲಾ ಕಾರ್ಯಕ್ರಮಗಳನ್ನು ಒಂದೇ ರಾಜ್ಯದಲ್ಲಿ ಕೇಂದ್ರೀಕರಿಸಲು ಸಾಧ್ಯವಿಲ್ಲ: ಅಣ್ಣಾಮಲೈ | Annamalai

ಚೆನ್ನೈ: ದೇಶದ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಗುಜರಾತ್​​ಗೆ ಸೀಮಿತಗೊಳಿಸಲಾಗುತ್ತಿದೆ ಎಂಬ ವಿಚಾರಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿರುವ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಮತ್ತು ವಿ ದ ಲೀಡರ್ಸ್ ಆಂದೋಲನದ ರೂವಾರಿ ಕೆ.ಅಣ್ಣಾಮಲೈ(Annamalai), ಗುಜರಾತ್ ಕೇಂದ್ರಿತ ಅಭಿವೃದ್ಧಿ ಮಾದರಿ ಬದಲಾಗಬೇಕು. ಎಲ್ಲಾ ಕಾರ್ಯಕ್ರಮಗಳನ್ನು ಒಂದೇ ರಾಜ್ಯದಲ್ಲಿ ಕೇಂದ್ರೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇಂಡಿಯಾ ಟುಡೇ ತಮಿಳುನಾಡು ರೌಂಡ್ ಟೇಬಲ್‌ನಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಬಿಜೆಪಿಯ ನಿರ್ಧಾರಗಳು ದೆಹಲಿ ಕೇಂದ್ರಿತವಾಗುತ್ತಿವೆ ಎಂದು ನಾನು ನಂಬುತ್ತೇನೆ, ಇದು ತುಂಬಾ ದುರದೃಷ್ಟಕರ. ಬೃಹತ್ ಹೂಡಿಕೆಗಳು, ತಂತ್ರಜ್ಞಾನ ಯೋಜನೆಗಳು ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳೆಲ್ಲವನ್ನೂ ಒಂದೇ ರಾಜ್ಯದಲ್ಲಿ ಕೇಂದ್ರೀಕರಿಸಲು ಸಾಧ್ಯವಿಲ್ಲ. ಅದು ಬದಲಾಗಬೇಕು ಎಂದಿದ್ದಾರೆ.
ತಮ್ಮ ಮಾತಿಗೆ ಉದಾಹರಣೆಗಳನ್ನು ನೀಡಿರುವ ಅವರು, ಎಲ್ಲಾ ಎಐ (AI) ಕಂಪನಿಗಳು ಅಥವಾ ವೇಫರ್ ಕಂಪನಿಗಳು ಅಲ್ಲಿಗೆ ಹೋಗುವುದು, 2030ರ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಪೊಲೀಸ್ ಕ್ರೀಡಾಕೂಟಗಳು ಅಲ್ಲಿಗೆ ಹೋಗುವುದು ಹಾಗೂ 2036ರ ಒಲಿಂಪಿಕ್ ಕ್ರೀಡಾಕೂಟವು (ಪ್ರಸ್ತಾವಿತ) ಅಹಮದಾಬಾದ್‌ಗೆ ಹೋಗುವುದು ಸರಿಯಲ್ಲ. ಇಡೀ ಭಾರತದ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಂತಹ 'ಗುಜರಾತ್ ಮಾದರಿ'ಯನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಸಿಎಂ ವಿಜಯ್ ಅವರು ಅಧಿಕಾರದಲ್ಲಿ 100 ದಿನಗಳನ್ನು ಪೂರೈಸಿದ ಬಗ್ಗೆ ಮಾತನಾಡಿರುವ ಅವರು, ವಿಜಯ್ ತುಂಬಾ ಕಠಿಣ ಪರಿಸ್ಥಿತಿಯಲ್ಲಿದ್ದಾರೆ. ಶಕ್ತಿಗಳು ನಿಮ್ಮ ವಿರುದ್ಧ ಇರುವ ಈ ಸಮಯದಲ್ಲಿ ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗುವುದು ಸುಲಭವಲ್ಲ. ವಿಜಯ್‌ಗೆ ಆಡಳಿತ ನಡೆಸಲು ಕನಿಷ್ಠ ಒಂದು ವರ್ಷ ಕಾಲಾವಕಾಶ ನೀಡಬೇಕು ಎಂದಿದ್ದಾರೆ (ಏಜೆನ್ಸೀಸ್).