ಪಾಮ್ ಆಯಿಲ್ ಮತ್ತು ರಾಸಾಯನಿಕ ಬಳಸಿ ತಯಾರಿಸಲಾಗುತ್ತಿದ್ದ 1,400 ಕೆಜಿ ನಕಲಿ ಪನೀರ್ ಜಪ್ತಿ
- ಸೂರತ್‌ನಲ್ಲಿ ಪೊಲೀಸರ ಭರ್ಜರಿ ದಾಳಿ
- ಪಾಮ್ ಆಯಿಲ್ ಮತ್ತು ರಾಸಾಯನಿಕ ಬಳಸಿ ತಯಾರಿಸಲಾಗುತ್ತಿದ್ದ 1,400 ಕೆಜಿ ನಕಲಿ ಪನೀರ್ ಜಪ್ತಿ
- ಈ ಪನೀರ್ ತಿಂದರೆ ಕಿಡ್ನಿ ಲಿವರ್ ಡಮಾರ್!
ಸೂರತ್: ಭಾರತದಲ್ಲಿ ದೊರೆಯುವ ಆಹಾರ ಪದಾರ್ಥಗಳ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಜನ ಸಾಮಾನ್ಯರು ಪ್ರತಿದಿನ ಉಪಯೋಗಿಸುವ ಆಹಾರ ವಸ್ತುಗಳಲ್ಲಿ ಕಲಬೆರಿಕೆ ಪ್ರಮಾಣ ಹೆಚ್ಚುತ್ತಿದೆ.
ಕೆಲ ದಿನಗಳ ಹಿಂದೆ ಗುಜರಾತಿನ ಸೂರತ್‌ನಲ್ಲಿ, ಸೂರತ್ ಪೊಲೀಸರು ಮತ್ತು ಆಹಾರ ಸುರಕ್ಷತಾ ಪಡೆಗಳು ನಡೆಸಿದ ಜಂಟಿದಾಳಿಯಲ್ಲಿ ಸುಮಾರು 1,400 ಕಿ.ಲೋ ನಕಲಿ ಪನೀರ್ (Fake Paneer) ನ್ನು ಜಪ್ತಿಮಾಡಿದ ಘಟನೆ ವರದಿಯಾಗಿದೆ.
ಪಾಂಡೇಸರಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಪನೀರ್ (ಕಾಟೇಜ್ ಚೀಸ್) ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದ್ದು ಸುಮಾರು 28 ಲಕ್ಷ ಮೌಲ್ಯದ ಪನೀರ್ನ್ನು ಮುಟ್ಟುಗೋಲು ಹಾಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ನಕಲಿ ಪನೀರ್ನ್ನು ಪಾಮ್ ಎಣ್ಣೆ ಮತ್ತು ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗುತ್ತಿದ್ದು, ಇದನ್ನು ಸುತ್ತ-ಮುತ್ತಲಿನ ಸ್ಥಳೀಯ ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಆರೋಗ್ಯ ಸುರಕ್ಷತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಕಲಿ ಹಾಲಿನಿಂದ ನಕಲಿ ಪನೀರ್!
ಜಪ್ತಿಯಾಗಿರುವ ಪನೀರ್ನ್ನು ಮಾಡಲು ನಕಲಿ ಹಾಲನ್ನು, ಕನಿಷ್ಟ ದರ್ಜೆಯ ಮೊಸರು ಮತ್ತು ಕೊಳೆತ ಲಿಂಬೆಹಣ್ಣನ್ನು ಬಳಕೆ ಮಾಡುತ್ತಿದ್ದಾಗಿ ದಾಳಿ ವೇಳೆ ತಿಳಿದುಬಂದಿದೆ. ಈ ವಿಷಪೂರಿತ ಪನೀರ್ನ್ನು ಜನ ಸೇವಿಸಿದರೆ, ಹೃದಯ, ಲಿವರ್ ಮತ್ತು ಕಿಡ್ನಿ ವೈಫಲ್ಯದಂತ ಗಂಭೀರ ಸಮಸ್ಯೆಗಳು ಜನರಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವುದು ಆರೋಗ್ಯಾಧಿಕಾರಿಗಳ ಅಭಿಪ್ರಾಯವಾಗಿದೆ.
ನೈರ್ಮಲ್ಯತೆ ಎನ್ನುವುದೇ ಇಲ್ಲ
ಪೊಲೀಸರು ಮತ್ತು ಆರೋಗ್ಯ ಸುರಕ್ಷತಾಧಿಕಾರಿಗಳು ನಡೆಸಿದ ಪ್ರದೇಶವು ಕೊಳಚೆ ಪ್ರದೇಶಕ್ಕಿಂತ ಕನಿಷ್ಟವಾಗಿದ್ದು, ಪರಮ ಗಲೀಜಿನಿಂದ ಕೂಡಿರುವ ಕೋಣೆಯಲ್ಲಿ ಈ ನಕಲಿ ಪನೀರ್ನ್ನು ತಯಾರಿಸಲಾಗುತ್ತಿದ್ದದ್ದು ತಿಳಿದುಬಂದಿದೆ.
ಸದ್ಯ ಈ ನಕಲಿ ಪನೀರ್ ಉತ್ಪಾದನಾ ಘಟಕಕ್ಕೆ ಬೀಗ ಜಡಿಯಲಾಗಿದ್ದು, ಘಟಕದ ಮಾಲೀಕನ ವಿರುದ್ಧ ಆಹಾರ ಸುರಕ್ಷತಾ ನಿಯಮಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ,(ಏಜನ್ಸೀಸ್).