ನವದೆಹಲಿ: ಪಂಜಾಬ್ ಆಪ್ ಸಚಿವ ಸಂಜೀವ್ ಅರೋರಾ ಮತ್ತು ಇತರರು ಭಾಗಿಯಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ(ED raid) ಮಂಗಳವಾರ(ಜೂ. 096) ಪಂಜಾಬ್ ಮತ್ತು ಉತ್ತರ ಪ್ರದೇಶದ ಹಲವು ಸ್ಥಳಗಳಲ್ಲಿ ಹೊಸ ಶೋಧಗಳನ್ನು ನಡೆಸಿದೆ.
ಮೊಬೈಲ್ ಫೋನ್ ಮಾರಾಟಕ್ಕೆ ಸಂಬಂಧಿಸಿದ 100 ಕೋಟಿ ರೂ. ಜಿಎಸ್‌ಟಿ ವಂಚನೆ ಪ್ರಕರಣದಲ್ಲಿ ತನಿಖೆ ನಡೆದಿದೆ. ಪಂಜಾಬ್‌ನ ಜಲಂಧರ್ ಮತ್ತು ಲುಧಿಯಾನದಲ್ಲಿ ಸುಮಾರು ಆರು ಸ್ಥಳಗಳು, ಉತ್ತರ ಪ್ರದೇಶದ ಬರೇಲಿ ಮತ್ತು ನೋಯ್ಡಾದಲ್ಲಿ ಶೋಧ ನಡೆಸಲಾಗುತ್ತಿದೆ ಎನ್ನಲಾಗಿದೆ.
ಅರೋರಾ ಜೊತೆ ಸಂಪರ್ಕ ಹೊಂದಿರುವ ಹ್ಯಾಂಪ್ಟನ್ ಸ್ಕೈ ರಿಯಾಲ್ಟಿ ಲಿಮಿಟೆಡ್ ಕಂಪನಿಗೆ ಸಂಬಂಧಿಸಿದಂತೆ ಸ್ಕ್ಯಾನರ್ ಅಡಿಯಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದ ವಸತಿ ಮತ್ತು ವ್ಯವಹಾರ ಸ್ಥಳಗಳಲ್ಲಿ ದಾಳಿ ನಡೆದಿದೆ.
62 ವರ್ಷದ ಅರೋರಾ ಅವರನ್ನು ಕಳೆದ ತಿಂಗಳು ಚಂಡೀಗಢದಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ದಿನವಿಡೀ ಶೋಧ ನಡೆಸಿದ ಬಳಿಕ ಇಡಿ ಬಂಧಿಸಿತ್ತು . ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪಂಜಾಬ್ ಸರ್ಕಾರದಲ್ಲಿ ವಿದ್ಯುತ್, ಕೈಗಾರಿಕೆ ಮತ್ತು ವಾಣಿಜ್ಯ ಖಾತೆಗಳನ್ನು ಹೊಂದಿದ್ದರು. ಬಂಧನದ ಬಳಿಕ ಅವರ ಖಾತೆಗಳನ್ನು ಬೇರೆಯವರಿಗೆ ಮರು ನಿಯೋಜಿಸಲಾಗಿದೆ (ಏಜೆನ್ಸೀಸ್).