Illegal Gang 
ದೇಶ

ಮಂಟಪದಿಂದಲೇ ವರ ಅರೆಸ್ಟ್: ಸ್ಟೇಷನ್ ಮೆಟ್ಟಿಲೇರಿದ ವಧು,"ಠಾಣೆಯಲ್ಲಾದರೂ ಮದುವೆ ಮಾಡಿಸಿ" ಎಂದು ಕಣ್ಣೀರು! | Illegal Gang

ಭೋಪಾಲ್: ಮದುವೆ ಮನೆಯಲ್ಲಿ ಸಡಗರದ ಸಂಭ್ರಮ, ಮಂಗಲ ವಾದ್ಯಗಳ ನಿನಾದವಿರಬೇಕಾದ ಜಾಗದಲ್ಲಿ ಹಠಾತ್ತನೆ ಪೊಲೀಸರ ಎಂಟ್ರಿಯಾಗಿದೆ. ಹಸೆಮಣೆ ಏರಬೇಕಿದ್ದ ವರನ ಕೈಗೆ ಹೂವಿನ ಹಾರದ ಬದಲು ಕೈಕೋಳ ಬಿದ್ದಿದೆ. ಭೋಪಾಲ್‌ನಲ್ಲಿ ನಡೆದ ಈ ನಾಟಕೀಯ ಘಟನೆಯಲ್ಲಿ ಕುಖ್ಯಾತ "ಇಲ್ಲೀಗಲ್ ಗ್ಯಾಂಗ್" (Illegal Gang) ನಾಯಕ ಆಕಾಶ್ ಅಲಿಯಾಸ್ ಭೂರಾ ಎಂಬಾತನನ್ನು ಪೊಲೀಸರು ಮಂಟಪದಿಂದಲೇ ಬಂಧಿಸಿದ್ದಾರೆ.
ಬುಧವಾರ ಮಧ್ಯಾಹ್ನ ಮದುವೆ ಶಾಸ್ತ್ರಗಳು ನಡೆಯುತ್ತಿದ್ದಾಗ ಕೋಹ್-ಎ-ಫಿಜಾ ಪೊಲೀಸರ ತಂಡ ದಾಳಿ ನಡೆಸಿದೆ. ವರ ಆಕಾಶ್‌ನನ್ನು ಬಂಧಿಸಿ ಕರೆದೊಯ್ಯುತ್ತಿದ್ದಂತೆ ಅತಿಥಿಗಳು ದಿಗ್ಭ್ರಮೆಗೊಂಡಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ, ಕೈಯಲ್ಲಿ ಇನ್ನೂ ಕಪ್ಪಾಗಿರುವ ಮೆಹಂದಿ ಮತ್ತು ಮುಖದ ಮೇಲೆ ಹಳದಿಯೊಂದಿಗೆ ವಧು ಸೀಮಾ ಪೊಲೀಸ್ ಠಾಣೆಗೆ ಧಾವಿಸಿದ್ದಾಳೆ.
ಪೊಲೀಸ್ ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದ ಸೀಮಾ, "ಸಾಹೇಬ್ರೇ, ನನ್ನ ಜೀವನ ಹಾಳಾಗುತ್ತದೆ. ಆತ ಮಾಡಿರುವ ಅಪರಾಧಗಳ ಬಗ್ಗೆ ನನಗೆ ತಿಳಿಯದು. ಮನೆಯಲ್ಲಿ ಅತಿಥಿಗಳು ಕಾಯುತ್ತಿದ್ದಾರೆ, ಹಳದಿ ಶಾಸ್ತ್ರ ಮುಗಿದಿದೆ. ದಯವಿಟ್ಟು ಕೇವಲ ಎರಡು ಗಂಟೆಗಳ ಕಾಲ ನನ್ನ ಪತಿಯನ್ನು ಬಿಟ್ಟುಬಿಡಿ, ಮದುವೆ ವಿಧಿವಿಧಾನಗಳನ್ನು ಮುಗಿಸುತ್ತೇವೆ," ಎಂದು ಅಂಗಲಾಚಿದ್ದಾಳೆ. ಪೊಲೀಸರು ಇದಕ್ಕೆ ಒಪ್ಪದಿದ್ದಾಗ, "ಕನಿಷ್ಠ ಪೊಲೀಸ್ ವಶದಲ್ಲಾದರೂ ನಮಗೆ ಮದುವೆ ಮಾಡಿಕೊಳ್ಳಲು ಅವಕಾಶ ಕೊಡಿ" ಎಂದು ವಿನಂತಿಸಿದ್ದಾಳೆ. ಆದರೆ ಪೊಲೀಸರು ಈ ಯಾವುದೇ ಬೇಡಿಕೆಗೆ ಮಣಿಯದೆ ಆಕಾಶ್‌ನನ್ನು ಜೈಲಿಗಟ್ಟಿದ್ದಾರೆ.

ಯಾರು ಈ ಆಕಾಶ್ ಅಲಿಯಾಸ್ ಭೂರಾ?

ಬಂಧಿತ ಆಕಾಶ್ ಸಾಮಾನ್ಯ ವ್ಯಕ್ತಿಯಲ್ಲ. ಈತ ಭೋಪಾಲ್‌ನಲ್ಲಿ ಸಕ್ರಿಯವಾಗಿರುವ 'ಇಲ್ಲೀಗಲ್ ಗ್ಯಾಂಗ್' ಎಂಬ ಕುಖ್ಯಾತ ತಂಡದ ನಾಯಕ. 2018 ರಿಂದಲೂ ಈ ಗ್ಯಾಂಗ್ ಸಕ್ರಿಯವಾಗಿದ್ದು, ವಜಪಾಯಿ ನಗರ ಪ್ರದೇಶದ ಸುಮಾರು 50 ಕ್ಕೂ ಹೆಚ್ಚು ಯುವಕರು ಇದರಲ್ಲಿದ್ದಾರೆ. ಈ ಗ್ಯಾಂಗ್‌ನ ಸದಸ್ಯರು ತಮ್ಮ ನಿಷ್ಠೆಯ ಗುರುತಾಗಿ ಕುತ್ತಿಗೆಯ ಮೇಲೆ 'Illegal' ಎಂದು ಟ್ಯಾಟೂ ಹಾಕಿಸಿಕೊಂಡಿರುವುದು ವಿಶೇಷ.
ಆಕಾಶ್ ಮೇಲೆ ಕೊಲೆ ಸೇರಿದಂತೆ ಬರೋಬ್ಬರಿ 31 ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ. 2024ರ ಮಾರ್ಚ್ 18 ರಂದು ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಸುರೇಂದ್ರ ಕುಶ್ವಾಹ ಕೊಲೆ ಪ್ರಕರಣದಲ್ಲಿಯೂ ಈತನೇ ಪ್ರಮುಖ ಆರೋಪಿಯಾಗಿದ್ದು, ಈ ಹಿಂದೆ 18 ತಿಂಗಳು ಜೈಲುವಾಸ ಅನುಭವಿಸಿ ನಾಲ್ಕು ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ.
ಬಂಧನಕ್ಕೆ ಕಾರಣವಾದ ಅಪಹರಣ ಪ್ರಕರಣ
ಮದುವೆಯ ದಿನವೇ ಪೊಲೀಸರು ದಾಳಿ ನಡೆಸಲು ಬಲವಾದ ಕಾರಣವಿತ್ತು. ಇತ್ತೀಚೆಗಷ್ಟೇ ಈ ಗ್ಯಾಂಗ್ 26 ವರ್ಷದ ಅರ್ಚಕರೊಬ್ಬರನ್ನು ಅಪಹರಿಸಿ, ಈದ್ಗಾ ಹಿಲ್ಸ್ ಪ್ರದೇಶದ ಫ್ಲಾಟ್‌ನಲ್ಲಿ ಕೂಡಿ ಹಾಕಿತ್ತು. 8 ಲಕ್ಷ ರೂ. ಹಣಕ್ಕಾಗಿ ಅರ್ಚಕರ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರು. ಅರ್ಚಕರು ಹೇಗೋ ತಪ್ಪಿಸಿಕೊಂಡು ಮಾಚ್ 11 ರಂದು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಆಕಾಶ್‌ನ ಮದುವೆಯ ಸುಳಿವು ಪಡೆದು ನೇರವಾಗಿ ಮಂಟಪಕ್ಕೇ ಲಗ್ಗೆ ಇಟ್ಟಿದ್ದರು.

ಸಹಚರರೂ ಪೊಲೀಸ್ ಪಾಲು

ಆಕಾಶ್ ಜೊತೆಗೆ ಆತನ ಗ್ಯಾಂಗ್‌ನ ಸದಸ್ಯರಾದ ರಾಜಂಜಿ ಠಾಕೂರ್, ಅಭಿಷೇಕ್ ಉಪಾಧ್ಯಾಯ, ಅಭಿಷೇಕ್ ಮೀನಾ, ನೀರಜ್ ಖಾಂಗೇ ಮತ್ತು ಅಮಿತ್ ಓಸ್ವಾಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಆರು ವರ್ಷಗಳ ಪ್ರೇಮ ಸಂಬಂಧದ ನಂತರ ಸೀಮಾ ಮತ್ತು ಆಕಾಶ್ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಸೀಮಾಳ ಈ ಕನಸು ಪೋಲೀಸ್ ಕಾರ್ಯಾಚರಣೆಯಿಂದಾಗಿ ನುಚ್ಚುನೂರಾಗಿದೆ,(ಏಜೆನ್ಸೀಸ್​).