ಕರ್ನಾಟಕವು ಅನುಷ್ಠಾನದ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯುತ್ ಸಾಮರ್ಥ್ಯಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಚೆನ್ನೈನ ಟ್ರೇಡ್ ಸೆಂಟರ್ನಲ್ಲಿ ಇತ್ತೀಚೆಗೆ ನಡೆದ "ವಿಂಡರ್ಜಿ ಇಂಡಿಯಾ&2025' ಸಮಾವೇಶದಲ್ಲಿ ಈ ಪ್ರಶಸ್ತಿಗೆ ಕರ್ನಾಟಕ ಕೊರಳೊಡ್ಡಿದೆ. 2024&25ನೇ ಸಾಲಿನಲ್ಲಿ ಅತ್ಯಧಿಕ ಪವನ ವಿದ್ಯುತ್ ಉತ್ಪಾದನೆಗೆ ರಾಷ್ಟ್ರೀಯ ಪ್ರಶಸ್ತಿಯೂ ಕರ್ನಾಟಕಕ್ಕೇ ದೊರೆತಿತ್ತು.
ಹವಾಮಾನ ವೈಪರೀತ್ಯಕ್ಕೆ ಕಾರಣ ತಾಪಮಾನ ಹೆಚ್ಚಳ. ಇದಕ್ಕೆ ಕಾರಣವಾದ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 2070ರ ವೇಳೆಗೆ ನಿವ್ವಳ ಶೂನ್ಯ ಸಾಧಿಸುವುದು ಭಾರತದ ಗುರಿ. ಈ ಗುರಿ ತಲುಪುವ ಭಾಗವಾಗಿ 2030ರ ವೇಳೆಗೆ ನವ ಹಾಗೂ ನವೀಕರಿಸಬಹುದಾದ ಇಂಧನ ಮೂಲದಿಂದ ವಿದ್ಯುತ್ ಉತ್ಪಾದನೆ 500 ಗಿಗಾ ವಾಟ್ಗೆ ಏರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಂಕಲ್ಪ ಸಿದ್ಧಿಗೆ ಹಲವು ಪ್ರೋತ್ಸಾಹಕ ಕ್ರಮಗಳನ್ನು ರೂಪಿಸಿ ರಾಜ್ಯ ಸರ್ಕಾರಗಳಿಗೆ ಉತ್ತೇಜನ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಮಹತ್ವದ ಮೈಲಿಗಲ್ಲು ಸ್ಥಾಪನೆಯತ್ತ ಹೆಜ್ಜೆ ಇರಿಸಿದೆ. ಪರಿಸರ ಸ್ನೇಹಿ, ಸ್ವಚ್ಛ ಇಂಧನ ಉತ್ಪಾದಿಸಲು ಹಸಿರು ಇಂಧನ ಉಪಕ್ರಮಗಳು ನೆರವಾಗಿವೆ. ಲಭ್ಯ ಅವಕಾಶ, ನೈಸರ್ಗಿಕ ಸಂಪನ್ಮೂಲಗಳ ಗರಿಷ್ಠ ಬಳಕೆಗೆ ಮುಂದಾಗಿದೆ. ಇದರಿಂದಾಗಿ ನವ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕದ ವಿಕ್ರಮ ಸಾಧಿಸಿದೆ.
ರಾಷ್ಟ್ರಮಟ್ಟದಲ್ಲಿ ಹಲವು ಹೆಗ್ಗಳಿಕೆ
- ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದಲ್ಲಿ ನಾಲ್ಕನೇ ಸ್ಥಾನ
- ಸೌರ ಮೂಲದಿಂದ ವಿದ್ಯುತ್ ಉತ್ಪಾದನೆಯಲ್ಲಿ ಐದನೇ ಸ್ಥಾನ
- ಪವನ ಮೂಲದಿಂದ ವಿದ್ಯುತ್ ಉತ್ಪಾದನೆಯಲ್ಲಿ ಎರಡನೇ ಸ್ಥಾನ
- ರಾಷ್ಟ್ರದ ಒಟ್ಟು ಸ್ಥಾಪಿತ ಸಾಮರ್ಥ್ಯದಲ್ಲಿ ಕರ್ನಾಟಕದ ಪಾಲು ಶೇ. 11.25
ದಾಪುಗಾಲು
ಸ್ಥಾಪಿತ ಸಾಮರ್ಥ್ಯದ ಪ್ರಕಾರ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಅಗ್ರಸ್ಥಾನಿಯಾಗಿತ್ತು. ಪವನ ಮತ್ತು ಸೌರ ಮೂಲದಿಂದ ವಿದ್ಯುತ್ ಉತ್ಪಾದನೆಯಲ್ಲಿ ಗಮನಾರ್ಹ ಸಾಧನೆಯನ್ನು ಕಾಯ್ದುಕೊಂಡಿದೆ. ಪವನ ಮೂಲದಿಂದ ಕಳೆದ ವರ್ಷ (2024&25) ಹೊಸದಾಗಿ 1,331.48 ಮೆಗಾ ವಾಟ್ ಸೇರ್ಪಡೆ ಮಾಡುವ ಮೂಲಕ ರಾಷ್ಟ್ರಕ್ಕೆ ಬಲಿಷ್ಠ ರಾಜ್ಯವೆಂಬ ಸಂದೇಶ ಕಳುಹಿಸಿದೆ. ಹಸಿರು ಇಂಧನ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಪೈಪೋಟಿಗೆ ಅನುಗುಣವಾಗಿ ದಾಪುಗಾಲಿಡುತ್ತಿದೆ
ಶಕ್ತಿ&ಸಾಮರ್ಥ್ಯ
ನವೀಕರಿಸಬಹುದಾದ ಇಂಧನ ಮೂಲದ ಒಟ್ಟು ಸಾಮರ್ಥ್ಯ -23,097.97
ವಿಶ್ವದ ಅತಿದೊಡ್ಡ ಪಾರ್ಕ್
ತುಮಕೂರು ಜಿಲ್ಲೆಯ ಪಾವಗಡದ ಸೋಲಾರ್ ಪಾರ್ಕ್ 13 ಸಾವಿರ ಎಕರೆಯಲ್ಲಿ ವ್ಯಾಪಿಸಿದ್ದು, 2,050 ಮೆಗಾ ವಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ಗಳಲ್ಲಿ ಒಂದು ಎಂಬ ಹಿರಿಮೆಗೆ ಪಾತ್ರವಾಗಿದೆ. ಸೋಲಾರ್ ಪಾರ್ಕ್ ವ್ಯಾಪ್ತಿಗೆ ಮತ್ತೆ 10 ಸಾವಿರ ಎಕರೆ ಸೇರ್ಪಡೆ, ಹೆಚ್ಚುವರಿ 2000 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವನ್ನು ತನ್ನದಾಗಿಸಿಕೊಳ್ಳುವ ಸಾಧ್ಯತೆಗಳಿವೆ.
ಸರ್ಕಾರ ಮತ್ತು ಉದ್ದಿಮೆಗಳು ಒಟ್ಟಾಗಿ ಸಾಗಿದಾಗ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಸಾಧ್ಯವಿದೆ. ನವೀಕರಿಸಬಹುದಾದ ಇಂಧನ ವಲಯಕ್ಕೆ ಪ್ರಗತಿಪರ ನೀತಿ, ಉಪಕ್ರಮಗಳ ಮೂಲಕ ಕರ್ನಾಟಕ ನೀಡಿರುವ ಕೊಡುಗೆ ಶ್ಲಾನೀಯ.
ಪ್ರಲ್ಹಾದ ಜೋಶಿ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ
ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಮಾನ್ಯ ಸ್ಥಾನದಲ್ಲಿರುವ ಅಂಶವನ್ನು ಪ್ರಶಸ್ತಿ ಮೂಲಕ ಗುರುತಿಸಲಾಗಿದೆ. ಶುದ್ಧ ಇಂಧನ ಉತ್ಪಾದನೆ ಮತ್ತು ಸುಸ್ಥಿರ ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರಕ್ಕೆ ಇರುವ ಅಚಲ ಬದ್ಧತೆಗೆ ಸಾಯಾಗಿದೆ.