1990 ರ ಕಾಶ್ಮೀರದ ಪರಿಸ್ಥಿತಿ ಬಗ್ಗೆ ಮಾತನಾಡಿದ ಕಾಮಿಡಿಯನ್​ ಸಮಯ್​ ರೈನಾ 
ದೇಶ

ಕೊಲೆ ಮಾಡಬೇಕಾದವರ ಲಿಸ್ಟ್‌ನಲ್ಲಿ ಅಜ್ಜನ ಹೆಸರಿತ್ತು: ಕಾಶ್ಮೀರದಲ್ಲಿ ನಡೆದ ಭೀಕರ ಘಟನೆ ಬಿಚ್ಚಿಟ್ಟ ಸಮಯ್​ ರೈನಾ! Samay Raina on Kashmiri Pandits

ಪ್ರಮುಖ ಮುಖ್ಯಾಂಶಗಳು

  • 1990 ರ ಕಾಶ್ಮೀರದ ಪರಿಸ್ಥಿತಿ ಬಗ್ಗೆ ಮಾತನಾಡಿದ ಕಾಮಿಡಿಯನ್​ ಸಮಯ್​ ರೈನಾ
  • ಕೊಲ್ಲುವವರ ಪಟ್ಟಿಯಲ್ಲಿ ನನ್ನಜ್ಜನ ಹೆಸರಿತ್ತೆಂದ ಸಮಯ್​
  • ಸ್ಥಳೀಯ ನಾಗರಿಕರ ಸಹಾಯದಿಂದ ನನ್ನಜ್ಜ ಬದುಕಿ ಬಂದರು
ನವದೆಹಲಿ: ಭಾರತದ ಖ್ಯಾತ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸಮಯ್ ರೈನಾ ಅಂದ್ರೆ ತಕ್ಷಣ ನೆನಪಾಗೋದು ಅವರ ಡಾರ್ಕ್ ಹ್ಯೂಮರ್. ಆದರೆ ಇತ್ತೀಚೆಗೆ ಪಾಡ್‌ಕ್ಯಾಸ್ಟ್‌ವೊಂದರಲ್ಲಿ ಮಾತನಾಡಿದ ಸಮಯ್, ತಮ್ಮ ಕುಟುಂಬ 1990ರ ದಶಕದಲ್ಲಿ ಕಾಶ್ಮೀರ (Samay Raina on Kashmiri Pandits) ದಲ್ಲಿ ಎದುರಿಸಿದ ಕರಾಳ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಕೊಲ್ಲಬೇಕಾದವರ ಪಟ್ಟಿಯಲ್ಲಿತ್ತು ಅಜ್ಜನ ಹೆಸರು!

ಅಂದು ಕಾಶ್ಮೀರದಲ್ಲಿ ಪರಿಸ್ಥಿತಿ ಎಷ್ಟು ಭಯಾನಕವಾಗಿತ್ತೆಂದರೆ, ಮರುದಿನ ಯಾರನ್ನು ಕೊಲ್ಲಲಾಗುವುದು ಎಂಬ ಹೆಸರಿರುವ ಪತ್ರಗಳು ಬೀದಿ ಬೀದಿಗಳಲ್ಲಿ ಹಂಚಿಕೆಯಾಗುತ್ತಿದ್ದವಂತೆ. ಸಮಯ್ ಅವರ ಅಜ್ಜ ಹಳ್ಳಿಯಲ್ಲಿ ದೊಡ್ಡ ಡಾಕ್ಟರ್ ಆಗಿದ್ದವರು. ಸಾವಿರಾರು ಜನರಿಗೆ ಚಿಕಿತ್ಸೆ ನೀಡಿ ಪ್ರಸಿದ್ಧರಾಗಿದ್ದರೂ, ಅವರನ್ನು ಕೊಲ್ಲುವುದಾಗಿ ಹೇಳಿದ್ದರಂತೆ.
ನನ್ನ ಅಜ್ಜನನ್ನು ಕೊಲ್ಲಲಾಗುವುದು ಎಂದು ಬರೆದಿದ್ದ ಆ ಪತ್ರವನ್ನು ನೋಡಿದ ಕೂಡಲೇ ನನ್ನ ತಾಯಿ ಮತ್ತು ಅಜ್ಜಿ ಇಬ್ಬರೂ ಮೂರ್ಛೆ ಹೋದರು. ಇಡೀ ಮನೆಯಲ್ಲಿ ಸಾವಿನ ಭಯ ಆವರಿಸಿತ್ತು ಎಂದು ಸಮಯ್ ಆ ದಿನದ ಭೀತಿಯನ್ನು ನೆನಪಿಸಿಕೊಂಡಿದ್ದಾರೆ.

ಪ್ರಾಣ ಉಳಿಸಿದ್ದು ಸ್ಥಳೀಯ ಮುಸ್ಲಿಮರು

ಆದರೆ, ತನ್ನ ಅಜ್ಜನ ಪ್ರಾಣ ಉಳಿಸಿದ್ದು ಅಲ್ಲಿನ ಸ್ಥಳೀಯ ಕಾಶ್ಮೀರಿ ಮುಸ್ಲಿಮರೇ ಎಂದು ಸಮಯ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನನ್ನ ಅಜ್ಜ ಜನರಿಗೆ ತುಂಬಾ ಒಳ್ಳೆಯದು ಮಾಡಿದ್ದರು. ಹಾಗಾಗಿ, ನಮ್ಮೂರಿನ ಮುಸ್ಲಿಂ ಬಾಂಧವರು ಮುಂದೆ ಬಂದು, ನಮ್ಮ ಅಜ್ಜನಿಗೆ ಏನೂ ಆಗದಂತೆ ನೋಡಿಕೊಂಡು ಅಲ್ಲಿಂದ ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡಿದರು ಎಂದು ಹೇಳಿದ್ದಾರೆ.

ಬರಿಗೈಲಿ ಬಂದೆವು, ಇವತ್ತಿಗೂ ವಾಪಸ್ ಹೋಗಲಾಗಲಿಲ್ಲ

ಕಾಶ್ಮೀರಿ ಪಂಡಿತರ ವಲಸೆಯ ಬಗ್ಗೆ ಮಾತನಾಡಿದ ಅವರು, ನಾವೆಲ್ಲಾ ಕೇವಲ ಎರಡು ವಾರಗಳಲ್ಲಿ ವಾಪಸ್ ಬರಬಹುದು ಎಂದುಕೊಂಡು ಕೇವಲ ಎರಡು ಜೊತೆ ಬಟ್ಟೆ ಹಿಡಿದು ಮನೆ ಬಿಟ್ಟು ಬಂದೆವು. ಆದರೆ ಈಗ 25 ವರ್ಷ ಕಳೆದಿದೆ, ಇವತ್ತಿಗೂ ನಮ್ಮ ಸ್ವಂತ ಮನೆಗೆ ವಾಪಸ್ ಹೋಗಲು ಸಾಧ್ಯವಾಗಿಲ್ಲ. ನೀವು ನಿಮ್ಮ ಬಾಲ್ಯವನ್ನು, ನಿಮ್ಮ ಗುರುತನ್ನೇ ಕಳೆದುಕೊಳ್ಳುವುದು ಅಂದ್ರೆ ಏನು ಅಂತ ಅನುಭವಿಸಿದವರಿಗಷ್ಟೇ ಗೊತ್ತು ಎಂದು ಸಮಯ್​ ಭಾವುಕರಾದರು.

ಹೋರಾಟಕ್ಕಿಂತ ಬದುಕುಳಿಯುವುದೇ ಜಾಣತನ!

ತಮ್ಮ ಸ್ಟ್ಯಾಂಡ್-ಅಪ್ ಶೋ ಸ್ಟಿಲ್ ಅಲೈವ್ ನಲ್ಲಿ ಸಮಯ್ ಒಂದು ಅದ್ಭುತ ಮಾತು ಹೇಳಿದ್ದರು. ಕಾಶ್ಮೀರದಲ್ಲಿ ನಾವು ಕೇವಲ ಶೇ.5 ರಷ್ಟು ಇದ್ದೆವು. ಒಂದು ವೇಳೆ ನನ್ನ ಪೋಷಕರು ಅಂದು ಶಸ್ತ್ರಾಸ್ತ್ರ ಹಿಡಿದು ಹೋರಾಟಕ್ಕೆ ನಿಂತಿದ್ದರೆ, ಇವತ್ತು ನಾನಾಗಲಿ ಅಥವಾ ನನ್ನ ಕುಟುಂಬವಾಗಲಿ ಇರುತ್ತಿರಲಿಲ್ಲ. ಅನ್ಯಾಯದ ಹೋರಾಟದ ಮುಂದೆ ಸೋಲ ಒಪ್ಪದೆ ಅಲ್ಲಿಂದ ಹೊರಬರುವುದು ಕೂಡ ಒಂದು ದೊಡ್ಡ ಜ್ಞಾನ ಎಂದು ಅವರು ತಮ್ಮ ಸಮುದಾಯದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು,(ಏಜನ್ಸೀಸ್​).