ವಿಡಿಯೋದಲ್ಲಿ ಕಣ್ಣೀರಿಟ್ಟ ಸರ್ಕಾರಿ ಶಿಕ್ಷಕಿ
- ಖಾಸಗಿ ಸ್ಕೂಲ್ಗಳ ಬಗ್ಗೆ ವಿಡಿಯೋದಲ್ಲಿ ಮಾಹಿತಿ ಹಂಚಿಕೊಂಡ ಕಾರಣಕ್ಕೆ ಶಿಕ್ಷಕಿಯನ್ನು ಕೆಲಸದಿಂದ ಅಮಾನತು
- ಆದೇಶವನ್ನು ಶಿಕ್ಷಣ ಇಲಾಖೆ ವಾಪಾಸ್ ಪಡೆದಿದ್ದೇ ಆದರೂ ವಿಡಿಯೋದಲ್ಲಿ ಕಣ್ಣೀರಿಡುತ್ತಲೇ ರಾಜೀನಾಮೆ
- ಡಿಇಒ ಅವರಿಂದ ಅವಮಾನ ಮತ್ತು ಒತ್ತಡವನ್ನು ಇನ್ನೂ ಸಹಿಸಲಾರೆ
School Teacher: ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ತೆಲಂಗಾಣದ ಶಾಲೆಯ ಆಡಳಿತ ಮಂಡಳಿಯು ಖಾಸಗಿ ಸ್ಕೂಲ್ಗಳ ಬಗ್ಗೆ ವಿಡಿಯೋದಲ್ಲಿ ಮಾಹಿತಿ ಹಂಚಿಕೊಂಡ ಕಾರಣಕ್ಕೆ ಖಮ್ಮಮ್ ಸರ್ಕಾರಿ ಶಿಕ್ಷಕಿಯನ್ನು (Bhukya Gauthami) ಕೆಲಸದಿಂದ ಅಮಾನತುಗೊಳಿಸಿತ್ತು. ಆದ್ರೆ, ಇತ್ತೀಚೆಗೆ ಆ ಆದೇಶವನ್ನು ಶಿಕ್ಷಣ ಇಲಾಖೆ ವಾಪಾಸ್ ಪಡೆದಿದ್ದೇ ಆದರೂ ವಿಡಿಯೋದಲ್ಲಿ ಕಣ್ಣೀರಿಡುತ್ತಲೇ ರಾಜೀನಾಮೆ ನೀಡಿರುವುದು ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಭುಕ್ಯ ಗೌತಮಿ ಎಂಬುವವರು ಖಮ್ಮಮ್‌ನ ಮಾಮಿಲಗುಡೆಮ್ ಹೈಸ್ಕೂಲ್‌ನಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿದ್ದರು. ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿ ಖಾಸಗಿ ಶಾಲೆಗಳ ಪ್ರವೇಶದ ಜಾಹೀರಾತಿನ ಬಗ್ಗೆ ನೇರವಾಗಿ ಮಾತನಾಡಿದ್ದಲ್ಲದೇ, ಅದನ್ನು ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಅಪ್ಲೋಡ್ ಮಾಡಿದ್ದಕ್ಕೆ ಕರ್ತವ್ಯದಿಂದ ತೆಗೆದುಹಾಕಲಾಯಿತು. ಬಳಿಕ ಅಮಾನತು ಆದೇಶವನ್ನು ತೆಗೆದು, ಕೆಲಸ ಮುಂದುವರಿಸುವಂತೆ ಸೂಚಿಸಿದ ಬಳಿಕ ಶಿಕ್ಷಣ ಅಧಿಕಾರಿಗಳ ವಿರುದ್ಧ ಆಕೆ ಮಾಡಿರುವ ಬಹಿರಂಗ ಆರೋಪ ಮತ್ತು ಕೊಟ್ಟಿರುವ ರಾಜೀನಾಮೆ ಸದ್ಯ ಸಾಕಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದೆ.
ಅಷ್ಟಕ್ಕೂ ಆಗಿದ್ದೇನು?
ಕರ್ತವ್ಯಕ್ಕೆ ಮರಳುವಂತೆ ಜಿಲ್ಲಾ ಶಿಕ್ಷಣ ಅಧಿಕಾರಿ ಸೂಚನೆ ನೀಡಿದ್ದೇ ಆದರೂ ಕಚೇರಿಗೆ ಕರೆಸಿಕೊಂಡ ಅಧಿಕಾರಿಗಳು, ಅಮಾನತು ಹಿಂಪಡೆದು ಕರ್ತವ್ಯಕ್ಕೆ ಮರಳುವಂತೆ ಆದೇಶಿಸಿದರು. ಆದರೆ, ಮತ್ತೆ ಸೇರಲು ಬಯಸಿದಾಗ ಅವಮಾನಿಸಿ, ಚುಚ್ಚಿ ಮಾತನಾಡಿದರು. ತಪ್ಪಿಗೆ ಛೀಮಾರಿ ಹಾಕಿದ್ದಲ್ಲದೇ, ಮಾನಸಿಕವಾಗಿ ಹಿಂಸಿಸಿದರು. ಇದನ್ನು ಸಹಿಸಲಾಗದೆ ಕೆಲಸಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಆಗಸ್ಟ್ 2ರಂದು ಗೌತಮಿ ಹರಿಬಿಟ್ಟ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ, "ನಾನು ಈ ವ್ಯವಸ್ಥೆಯಲ್ಲಿ 12 ವರ್ಷಗಳಿದ ದುಡಿದಿದ್ದೇನೆ. ನಾನು ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡಲು ಬಯಸಿದ್ದರಿಂದ ಈ ವೃತ್ತಿಗೆ ಸೇರಿದೆ. ಆದರೆ, ಒಂದು ತಪ್ಪಿಗೆ ನಿರಂತರ ಅವಮಾನ ಮತ್ತು ಒತ್ತಡವನ್ನು ಸಹಿಸಲಾರೆ. ಡಿಇಒ ನನ್ನನ್ನು ತೀವ್ರವಾಗಿ ನಿಂದಿಸಿ ಮಾನಸಿಕ ಕಿರುಕುಳ ನೀಡಿದರು. ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೆ, ಇದರ ಹೊರತಾಗಿಯೂ ಹೋರಾಟವನ್ನು ಮುಂದುವರೆಸಿದೆ. ಆದರೆ, ಇನ್ನೂ ನನ್ನಿಂದ ಆಗಲ್ಲ. ನೌಕರಿಯಲ್ಲಿ ಮುಂದುವರಿಯಲು ಸಿಗಬೇಕಿದ್ದ ಗೌರವ ಮತ್ತು ನ್ಯಾಯ ಸಿಕ್ಕಿಲ್ಲ" ಎಂದು ವಿಡಿಯೋದಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಲೇ ರಾಜೀನಾಮೆ ಪತ್ರ ತೋರಿಸಿದ್ದಾರೆ.
ಮುಖ್ಯವಾಗಿ, ಬೋಧನೆಯನ್ನು ನಿರ್ಲಕ್ಷಿಸುವ, ಆಂತರಿಕ ರಾಜಕೀಯದಲ್ಲಿ ತೊಡಗಿರುವ ಮತ್ತು ಶಿಕ್ಷಣ ನೀಡುವ ಸಮಯದಲ್ಲಿ ಮೊಬೈಲ್ ಫೋನ್‌ಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿರುವವರನ್ನು ರಕ್ಷಿಸುವ ಮೂಲಕ ವ್ಯವಸ್ಥೆಯು ತನ್ನಂತಹ ಪ್ರಾಮಾಣಿಕ ಶಿಕ್ಷಕರನ್ನು ಬದಿಗಿಟ್ಟಿದೆ. ಸಹೋದ್ಯೋಗಿಗಳ ಹಗೆತನ ಮತ್ತು ಪಿತೂರಿಗಳು, ಸೋಷಿಯಲ್ ಮೀಡಿಯಾ ಟ್ರೋಲ್ಗಳು ನನ್ನ ಮನಸ್ಸಿನ ಮೇಲೆ ಆಳವಾಗಿ ಪರಿಣಾಮ ಬೀರಿದೆ. ಹೀಗಾಗಿ, ಈ ರಾಜೀನಾಮೆ ಎಂದು ಗೌತಮಿ ಹೇಳಿದ್ದಾರೆ. ಇಲ್ಲಿಯವರೆಗೆ ಇದಕ್ಕೆ ತೆಲಂಗಾಣ ಡಿಇಒ ಅಥವಾ ಶಿಕ್ಷಣ ಇಲಾಖೆಯಾಗಲಿ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).