Cylinder Crisis (ಸಾಂದರ್ಭಿಕ ಚಿತ್ರ) 
ದೇಶ

ಸಿಲಿಂಡರ್ ಕೊರತೆಗೆ ಬ್ರೇಕ್! ಕೇಂದ್ರದಿಂದ 1955ರ ‘ಬ್ರಹ್ಮಾಸ್ತ್ರ’ ಪ್ರಯೋಗ... ಏನಿದು ಅಗತ್ಯ ಸರಕುಗಳ ಕಾಯ್ದೆ? Cylinder Crisis

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಹೆಚ್ಚಾಗುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ
  • ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ 1955 ರ ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಮಹತ್ವದ ಹೆಜ್ಜೆಯನ್ನಿಟ್ಟಿದೆ
  • ಅನಿಲ ಪೂರೈಕೆ ಕೊರತೆಯ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಮತ್ತು ದೇಶದ ಆರ್ಥಿಕತೆಗೆ ತೊಂದರೆಯಾಗಬಾರದು
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚಾಗುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ನೈಸರ್ಗಿಕ (Cylinder Crisis) ಅನಿಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ 1955 ರ ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಅನಿಲ ಪೂರೈಕೆ ಕೊರತೆಯ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಮತ್ತು ದೇಶದ ಆರ್ಥಿಕತೆಗೆ ತೊಂದರೆಯಾಗಬಾರದು ಎಂದು ಕೇಂದ್ರ ಸರ್ಕಾರ ಅನೇಕ ವಲಯಗಳಿಗೆ ಆದ್ಯತೆ ನೀಡಿದ್ದು, ಈ ವಲಯಗಳಲ್ಲಿ ಮನೆಗಳಿಗೆ ಪೂರೈಸುವ ಪೈಪ್ಡ್ ನೈಸರ್ಗಿಕ ಅನಿಲ (PNG), ಸಾರಿಗೆಗೆ ಬಳಸುವ ಸಂಕುಚಿತ ನೈಸರ್ಗಿಕ ಅನಿಲ (CNG), ಎಲ್‌ಪಿಜಿ ಕುಗ್ಗುವಿಕೆ ಅಗತ್ಯತೆಗಳು ಸೇರಿದಂತೆ ಎಲ್‌ಪಿಜಿ ಉತ್ಪಾದನೆ, ಪೈಪ್‌ಲೈನ್ ಸಂಕೋಚಕ ಇಂಧನ ಮತ್ತು ಇತರ ಅತ್ಯಗತ್ಯ ಪೈಪ್‌ಲೈನ್ ಕಾರ್ಯಾಚರಣೆಯ ಅವಶ್ಯಕತೆಗಳು ಸೇರಿವೆ ಎಂದು ಎಎನ್‌ಐ ವರದಿ ಮಾಡಿದೆ.
ಭಾರತವು ಸುಮಾರು 332 ಮಿಲಿಯನ್​ ಎಲ್​ಪಿಜಿ ಗ್ರಾಹಕರನ್ನು ಹೊಂದಿದ್ದು, ನಿರಂತರ ಗ್ರಾಹಕರಿಗೆ ತನ್ನ ಅಗತ್ಯತೆಯನ್ನು ಪೂರೈಸಲು ಕೇಂದ್ರ ಸರ್ಕಾರ 1955ರ ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೆ ತಂದಿದೆ.
ಆದಾಗ್ಯೂ, ಮುಂಬೈ, ಬೆಂಗಳೂರು ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಹೆಚ್ಚಾದ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ.

1955 ರ ಅಗತ್ಯ ಸರಕುಗಳ ಕಾಯ್ದೆ ಎಂದರೇನು?

1955ರ ಅಗತ್ಯ ಸರಕುಗಳ ಕಾಯ್ದೆ ಎನ್ನುವುದು, ಜನಸಾಮಾನ್ಯರ ದೈನಂದಿನ ಜೀವನಕ್ಕೆ ಅತ್ಯಗತ್ಯವಾದ ವಸ್ತುಗಳು ಸರಿಯಾದ ಬೆಲೆಗೆ ಮತ್ತು ಸುಗಮವಾಗಿ ಸಿಗುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರಕ್ಕಿರುವ ಒಂದು ಬಲಿಷ್ಠ ಕಾನೂನು ಅಸ್ತ್ರವಾಗಿದೆ.

ಮುಖ್ಯ ಉದ್ದೇಶ!

ಯಾವುದಾದರೂ ಒಂದು ವಸ್ತುವಿನ ಕೊರತೆ ಉಂಟಾದಾಗ ಅಥವಾ ಯುದ್ಧದಂತಹ ಪರಿಸ್ಥಿತಿ ಎದುರಾದಾಗ, ವ್ಯಾಪಾರಿಗಳು ಅಥವಾ ಕಂಪನಿಗಳು ಆ ವಸ್ತುಗಳನ್ನು ಬಚ್ಚಿಟ್ಟುಕೊಂಡು (Hoarding) ಕೃತಕ ಅಭಾವ ಸೃಷ್ಟಿಸದಂತೆ ತಡೆಯುವುದು ಮತ್ತು ಕಪ್ಪು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ನಿಯಂತ್ರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಕಾಯ್ದೆಯ ಪ್ರಮುಖ ಅಂಶಗಳು

ಅಕ್ರಮ ದಾಸ್ತಾನು ತಡೆ: ಕೆಲವು ವ್ಯಾಪಾರಿಗಳು ವಸ್ತುಗಳ ಬೆಲೆ ಏರಿಕೆಯಾಗಲಿ ಎಂದು ಕಾದು ಗೋದಾಮಿನಲ್ಲಿ ಸರಕುಗಳನ್ನು ಬಚ್ಚಿಟ್ಟು ಮಾರುಕಟ್ಟೆಯಲ್ಲಿ ಕೃತಕ ಅಭಾವವನ್ನು ಸೃಷ್ಟಿಸುತ್ತಾರೆ. ಈ ಕಾಯ್ದೆಯಡಿ ಸರ್ಕಾರವು 'ದಾಸ್ತಾನು ಮಿತಿ' ಹೇರಬಹುದು. ಅಂದರೆ ಒಬ್ಬ ವ್ಯಕ್ತಿ ಎಷ್ಟು ಪ್ರಮಾಣದ ಸರಕು ಇಟ್ಟುಕೊಳ್ಳಬಹುದು ಎಂದು ಸರ್ಕಾರ ನಿರ್ಧರಿಸುತ್ತದೆ.
ಬೆಲೆ ನಿಯಂತ್ರಣ: ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರದಂತೆ ತಡೆಯಲು ಸರ್ಕಾರವು ಗರಿಷ್ಠ ಮಾರಾಟ ದರವನ್ನು (MRP) ನಿಗದಿಪಡಿಸುವ ಅಧಿಕಾರವನ್ನು ಹೊಂದಿದೆ.
ಆದ್ಯತೆಯ ಹಂಚಿಕೆ: ನೈಸರ್ಗಿಕ ಅನಿಲದ ವಿಷಯದಲ್ಲಿ ಮಾಡಿರುವಂತೆ, ಲಭ್ಯವಿರುವ ಕಡಿಮೆ ಸರಕನ್ನು ಮೊದಲು ಯಾರಿಗೆ ನೀಡಬೇಕು ಎಂದು ಸರ್ಕಾರ ಆದೇಶಿಸಬಹುದು. ಕೈಗಾರಿಕೆಗಳಿಗಿಂತ ಮನೆಗಳಿಗೆ ಬೇಕಾದ ಅಡುಗೆ ಅನಿಲಕ್ಕೆ ಮೊದಲ ಆದ್ಯತೆ ನೀಡಲು ಈ ಕಾಯ್ದೆ ಬಲ ನೀಡುತ್ತದೆ (ಏಜೆನ್ಸೀಸ್​).