ಸಿಎಂ ಎಂ.ಕೆ.ಸ್ಟಾಲಿನ್ ಮತ್ತು ರಾಜ್ಯಪಾಲ ಆರ್.ಎನ್.ರವಿ
ಚೆನ್ನೈ: ತಮಿಳುನಾಡಿನ ಡಿಎಂಕೆ ಸರ್ಕಾರ ಮತ್ತು ರಾಜ್ಯಪಾಲ ಆರ್.ಎನ್.ರವಿ ನಡುವಿನ ಕಿತ್ತಾಟ ಮುಂದುವರೆದಿದೆ. ಇಂದು(ಜ. 20) ವಿಧಾನಸಭೆಯಲ್ಲಿ ಸರ್ಕಾರದ ಭಾಷಣ ಓದದೇ ವಿಧಾನಸಭೆಯಿಂದ ಗವರ್ನರ್ ತೆರಳಿದ ನಡೆಯನ್ನು ಟೀಕಿಸಿರುವ ಸಿಎಂ ಎಂ.ಕೆ.ಸ್ಟಾಲಿನ್, ರಾಜ್ಯಪಾಲರ ವಾರ್ಷಿಕ ಭಾಷಣವನ್ನು ರದ್ದುಗೊಳಿಸಲು ಸಾಂವಿಧಾನಿಕ ತಿದ್ದುಪಡಿಗೆ ಒತ್ತಾಯಿಸುವುದಾಗಿ ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ಪ್ರತಿ ವರ್ಷ ಸರ್ಕಾರ ಸಿದ್ಧಪಡಿಸುವ ಭಾಷಣವನ್ನು ರಾಜ್ಯಪಾಲರು ನಿರಾಕರಿಸುವುದು ಸರಿಯಲ್ಲ. ಬಿಜೆಪಿಯೇತರ ಆಡಳಿತವಿರುವ ಇತರ ರಾಜ್ಯಗಳಲ್ಲಿಯೂ ಇದೇ ರೀತಿಯ ಸಮಸ್ಯೆಗಳು ಕಂಡುಬರುತ್ತವೆ. 2021ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ನಾಲ್ಕನೇ ಬಾರಿಗೆ ಇಂತಹ ಘಟನೆ ನಡೆದಿವೆ.
ಪದೇ ಪದೇ ಉಲ್ಲಂಘಿಸಲ್ಪಡುವ ಪದ್ಧತಿಯ ಪ್ರಸ್ತುತ ಸಂವಿಧಾನದಲ್ಲಿ ಅದರ ಸ್ಥಾನವನ್ನು ಮರುಪರಿಶೀಲಿಸುವ ಸಮಯ ಇದಾಗಿರಬಹುದು. ದ್ರಾವಿಡ ಮಾದರಿ ಸರ್ಕಾರದ ಸಾಧನೆಗಳನ್ನು ಮರೆಮಾಚಲು ಗವರ್ನರ್ ಭಾಷಣವನ್ನು ಮಾಡಲಿಲ್ಲ ಎಂದು ಕಿಡಿಕಾರಿದ್ದಾರೆ.
ಡಿಎಂಕೆ ಸಂಸತ್ತಿನಲ್ಲಿ ಸಮಾನ ಮನಸ್ಕ ಪಕ್ಷಗಳ ಬೆಂಬಲದಿಂದ ವರ್ಷದ ಆರಂಭದಲ್ಲಿ ರಾಜ್ಯಪಾಲರು ರಾಜ್ಯ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡುವ ನಿಬಂಧನೆಯನ್ನು ತೆಗೆದುಹಾಕಲು ಸಾಂವಿಧಾನಿಕ ತಿದ್ದುಪಡಿಗೆ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.
ಸದನದಲ್ಲಿ ನಡೆದಿದ್ದೇನು?
ವಾರ್ಷಿಕ ಸರ್ಕಾರದ ಸಾಧನೆಯ ಬಗ್ಗೆ ಭಾಷಣ ಮಾಡಲು ರಾಜ್ಯಪಾಲರು ಸದನವನ್ನು ಪ್ರವೇಶಿಸಿದ ಕೂಡಲೇ ರಾಷ್ಟ್ರಗೀತೆ ಹಾಡುವ ಸಂಬಂಧ ರಾಷ್ಟ್ರಗೀತೆಗೆ ಸರಿಯಾದ ಗೌರವ ನೀಡಬೇಕು. ಆದರೆ ಸದನದಲ್ಲಿ ನನಗೆ ಈಗ ನಿರಾಶೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನಸಭೆ ಸ್ಪೀಕರ್ ಅಪ್ಪಾವು, ರಾಜ್ಯ ಸರ್ಕಾರ ಸಿದ್ಧಪಡಿಸಿದ ಸಾಂಪ್ರದಾಯಿಕ ಭಾಷಣವನ್ನು ಓದುವುದಕ್ಕೆ ಮಾತ್ರ ರಾಜ್ಯಪಾಲರು ತಮ್ಮನ್ನು ಸೀಮಿತಗೊಳಿಸಿಕೊಳ್ಳಬೇಕು. ಸದನದ ಸ್ಥಾಪಿತ ನಿಯಮಗಳು ಮತ್ತು ಸಂಪ್ರದಾಯಗಳನ್ನು ಪಾಲಿಸಬೇಕು. ವಿಧಾನಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಮಾತ್ರ ಅಭಿಪ್ರಾಯ ವ್ಯಕ್ತಪಡಿಸಲು ಅನುಮತಿ ಇದೆ ಎಂದು ಹೇಳಿದ್ದಾರೆ.
ಮಾತಿಗೆ ಮಾತು ಬೆಳೆದಂತೆ ರಾಜ್ಯಪಾಲರು ತಮ್ಮ ಭಾಷಣೆಕ್ಕೆ ಅಡ್ಡಿಪಡಿಸಿದ್ದು ದುರದೃಷ್ಟಕರ, ಭಾಷಣದ ವೇಳೆ ನಮ್ಮ ಮೈಕ್ ಆಫ್ ಮಾಡಲಾಗಿದೆ. ಇದಿರಂದ ನನಗೆ ಅವಮಾನ ಮಾಡಲಾಗಿದೆ ಎಂದು ಹೇಳಿ ಅರ್ಧಕ್ಕೆ ವಿಧಾನಸಭೆಯಿಂದ ಹೊರ ನಡೆದಿದ್ದರು (ಏಜೆನ್ಸೀಸ್).