ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ 
ದೇಶ

ಮೀಸಲಾತಿ ವಿರೋಧಿ ಪ್ರತಿಭಟನಾಕಾರರ ಜೊತೆ ಸರ್ಕಾರ ಮಾತುಕತೆ ನಡೆಸಲಿದೆ: ಚಿರಾಗ್ ಪಾಸ್ವಾನ್ | Chirag Paswan

ನವದೆಹಲಿ: ಮೀಸಲಾತಿ ಹಠಾವೋ ಆಂದೋಲನದ ಭಾಗವಾಗಿ ಶುಕ್ರವಾರ ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆದ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್(Chirag Paswan), ತಿಭಟನಾಕಾರರು ತಮ್ಮ ಬೇಡಿಕೆಗಳನ್ನು ವ್ಯವಸ್ಥಿತವಾಗಿ ಮಂಡಿಸಿದ ನಂತರ ಸರ್ಕಾರ ಅವರೊಂದಿಗೆ ಮಾತುಕತೆ ನಡೆಸಲಿದೆ ಎಂದು ಹೇಳಿದ್ದಾರೆ.
ಪಾಟ್ನಾದಲ್ಲಿ ಶನಿವಾರ(ಆ. 22) ಸುದ್ದಿಗಾರರೊಂದಿಗೆ ಮಾತನಾಡಿರುವ ಪಾಸ್ವಾನ್, ಮೀಸಲಾತಿಯ ಬಗ್ಗೆ ಯಾವುದೇ ರೀತಿಯ ತಪ್ಪು ತಿಳುವಳಿಕೆಯು ದೇಶದ ಜನಸಂಖ್ಯೆಯ ದೊಡ್ಡ ಭಾಗದಲ್ಲಿ ಕೋಪವನ್ನು ಉಂಟುಮಾಡಬಹುದು. ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ವ್ಯವಸ್ಥಿತವಾಗಿ ಮಂಡಿಸಿದ ನಂತರ, ಸರ್ಕಾರ ಅವರೊಂದಿಗೆ ಮಾತುಕತೆ ನಡೆಸುತ್ತದೆ ಎಂದು ತಿಳಿಸಿದ್ದಾರೆ.
ಆರ್ಥಿಕ ಮಾನದಂಡಗಳ ಆಧಾರದ ಮೇಲೆ ಮೀಸಲಾತಿ ಬೇಡಿಕೆಗಳ ಕುರಿತು ಮಾತನಾಡಿದ ಅವರು, ಎನ್‌ಡಿಎ ಸರ್ಕಾರವು ಈಗಾಗಲೇ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಇಡಬ್ಲ್ಯೂಎಸ್ ಅಡಿ ಶೇಕಡಾ 10ರಷ್ಟು ಮೀಸಲಾತಿಯನ್ನು ಪರಿಚಯಿಸಿದೆ ಎಂದಿದ್ದಾರೆ.
ಇದೇ ವೇಳೆ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಹೊರಗೆ ರಾಹುಲ್ ಗಾಂಧಿ ಧರಣಿ ನಡೆಸಿದ ಬಗ್ಗೆ ಟೀಕಿಸಿದ ಅವರು, ಸಂವಿಧಾನದ ಅಡಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿದೆ. ಆದರೆ ಕಾಂಗ್ರೆಸ್ ವಂದೇ ಮಾತರಂ ವಿವಾದದ ಬಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಿದೆ. ಜನರ ಗಮನವನ್ನು ಬೇರೆಡೆ ಈ ಪ್ರತಿಭಟನೆ ನಡೆಸಿದರು ಎಂದು ಕಿಡಿಕಾರಿದ್ದಾರೆ. 
ಜಂತರ್ ಮಂತರ್‌ನಲ್ಲಿ ಶುಕ್ರವಾರ(ಆ. 21) ಜಮಾಯಿಸಿದ ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾನರ್‌ಗಳು, ಪೋಸ್ಟರ್‌ಗಳು ಮತ್ತು ಕೇಸರಿ ಧ್ವಜಗಳನ್ನು ಹಿಡಿದು ಜಾತಿ ಆಧಾರಿತ ಮೀಸಲಾತಿಯ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ಮತ್ತು ಮೀಸಲಾತಿಗೆ ಅರ್ಹತೆಯನ್ನು ನಿರ್ಧರಿಸುವಲ್ಲಿ ಜಾತಿಗಿಂತ ಆರ್ಥಿಕ ಮಾನದಂಡಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ (ಏಜೆನ್ಸೀಸ್).