ಕೇಂದ್ರ ಗೃಹ ಸಚಿವ ಅಮಿತ್ ಶಾ 
ದೇಶ

ಸನಾತನ ಮೌಲ್ಯಗಳನ್ನು ಎತ್ತಿ ಹಿಡಿಯಲು ವಿಫಲವಾದ ಸರ್ಕಾರ ಮತ್ತೆ ಎಂದಿಗೂ ಅಧಿಕಾರಕ್ಕೆ ಬರಲ್ಲ: ಅಮಿತ್ ಶಾ | Amit Shah

ನವದೆಹಲಿ: ಭಾರತದಲ್ಲಿ ಸನಾತನ ಧರ್ಮದ ಮೌಲ್ಯಗಳನ್ನು ಎತ್ತಿ ಹಿಡಿಯಲು ವಿಫಲವಾದ ಯಾವುದೇ ಸರ್ಕಾರ ಮತ್ತೆ ಎಂದಿಗೂ ಅಧಿಕಾರಕ್ಕೆ ಬರಲ್ಲ ಎಂದು ಮಂಗಳವಾರ(ಜ. 27) ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಗುಜರಾತ್‌ನ ಗಾಂಧಿನಗರದಲ್ಲಿ ಸ್ವಾಮಿನಾರಾಯಣ ಪಂಥದ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಸ್ವಾತಂತ್ರ್ಯ ನಂತರ ಅನೇಕ ಸನಾತನ ಸಂಪ್ರದಾಯದ ಅನುಯಾಯಿಗಳು ಸನಾತನ ಧರ್ಮಕ್ಕೆ ಆದ್ಯತೆ ನೀಡುವ ಮತ್ತು ಅದರ ತತ್ವಗಳ ಮೂಲಕ ಆಡಳಿತ ನಡುಸುವ ಸರ್ಕಾರಕ್ಕಾಗಿ ಬಹಳ ವರ್ಷಗಳಿಂದ ಕಾಯುತ್ತಿದ್ದರು. 
ಕಳೆದ 11 ವರ್ಷಗಳಿಂದ ಗುಜರಾತ್​ನ ಪುತ್ರ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ವಿವಿಧ ಕ್ರಮಗಳು ಭಾರತದ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯ ಬದ್ಧತೆಯನ್ನು ಪ್ರತಿಬಿಂಬಿಸಿವೆ. ಶತಮಾನಗಳ ಕಾಯುವಿಕೆಯ ಅಯೋಧ್ಯೆಯ ರಾಮಮಂದಿರ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ. 
370 ನೇ ವಿಧಿ, ತ್ರಿವಳಿ ತಲಾಖ್ ರದ್ದುಗೊಳಿಸಲಾಗಿದೆ. ಸಾಮಾನ್ಯ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಬಗ್ಗೆ ಕೇಂದ್ರ ನಡೆಸಿರುವ ಪ್ರಯತ್ನ ಬಗ್ಗೆ ಹೊಗಳಿದ್ದು, ಯೋಗ, ಆಯುರ್ವೇದ ಮತ್ತು ಗೋ ರಕ್ಷಣೆಯ ಮೂಲಕ ಪ್ರಾಚೀನ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಸಮಗ್ರ ಯೋಗಕ್ಷೇಮವನ್ನು ಉತ್ತೇಜಿಸುವ ಪ್ರಯತ್ನಗಳನ್ನು ನಮ್ಮ ಸರ್ಕಾರ ಮಾಡಿದೆ ಎಂದು ಪ್ರತಿಪಾದಿಸಿದ್ದಾರೆ.
ಬದರಿನಾಥ, ಕೇದಾರನಾಥ, ಕಾಶಿ ವಿಶ್ವನಾಥ ಮತ್ತು ಸೋಮನಾಥ ಸೇರಿದಂತೆ ಪ್ರಮುಖ ಯಾತ್ರಾ ಸ್ಥಳಗಳ ಪುನಃಸ್ಥಾಪನೆಯು ರಾಷ್ಟ್ರದ ಆಧ್ಯಾತ್ಮಿಕ ಬೇರುಗಳಿಗೆ ಸರ್ಕಾರದ ಸಮರ್ಪಣೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).