ಎರಡು ದಿನಗಳ ಬಳಿಕ ಉಪವಾಸ ಸತ್ಯಾಗ್ರಹ ಹಿಂಪಡೆದ ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ 
ದೇಶ

ಕಾಕ್ರೋಚ್​ ಪಾರ್ಟಿ ಜೊತೆ ಸರ್ಕಾರ ಮಾತುಕತೆ: ಎರಡು ದಿನಗಳ ಬಳಿಕ ಉಪವಾಸ ನಿಲ್ಲಿಸಿದ ಅಭಿಜಿತ್​ ದೀಪ್ಕೆ! Abhijit Dipke ends Hunger Strike

ಪ್ರಮುಖ ಮುಖ್ಯಾಂಶಗಳು

  • ನೀಟ್ ಸೇರಿದಂತೆ ದೇಶದ ಪರೀಕ್ಷಾ ಅಕ್ರಮ ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ 'ಚಲೋ ಸಂಸತ್' ರ‍್ಯಾಲಿ
  • ರ‍್ಯಾಲಿ ಬೆನ್ನಲ್ಲೇ ಕೇಂದ್ರ ಸಚಿವ ಜೆ.ಪಿ. ನಡ್ಡಾ ಮಾತುಕತೆ ಭರವಸೆ
  • ಎರಡು ದಿನಗಳ ಬಳಿಕ ಉಪವಾಸ ಸತ್ಯಾಗ್ರಹ ಹಿಂಪಡೆದ ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ
ನವದೆಹಲಿ: ನೀಟ್​ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್​ ಜನತಾ ಪಾರ್ಟಿ ಸೋಮವಾರ (ಜು.20) ಜಂತರ್​ ಮಂತರ್​ನಿಂದ ಸಂಸತ್​ ಭವನದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸುತ್ತಿದೆ.
ಈಗ ಈ ಪ್ರತಿಭಟನೆಗೆ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಿರುವ ಕಾರಣ ಕಾಕ್ರೋಚ್ ಪಕ್ಷದ ಸ್ಥಾಪಕ ಅಭಿಜಿತ್​ ದೀಪ್ಕೆ (Abhijit Dipke ends Hunger Strike) ಜಂತರ್​-ಮಂತರ್​ನಲ್ಲಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಎರಡು ದಿನಗಳ ಉಪವಾಸ ಅಂತ್ಯ!

ಈ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ, ಪರಿಸರವಾದ ಸೋನಮ್​ ವಾಂಗ್​ಚುಕ್​​ 20 ದಿನಗಳವರೆಗೆ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ನಂತರ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನಲೆ ದೆಹಲಿ ಪೊಲೀಸರು ಶನಿವಾರ ಅವರನ್ನು ಸಫ್ದರ್​ಜಂಗ್​ ಆಸ್ಪತ್ರೆಗೆ ದಾಖಲಿಸಿತ್ತು.
ಈ ಘಟನೆ ಬಳಿಕ ಸಿಜೆಪಿ ಸ್ಥಾಪಕ ಅಭಿಜಿತ್​ ದೀಪ್ಕೆ ಅನಿರ್ದಿಷ್ಟಾವಧಿ ಉಪವಾಸವನ್ನು ಕೈಗೊಳ್ಳುವುದಾಗಿ ಘೋಷಿಸಿದ್ದರು. ಇಂದು ಪ್ರತಿಭಟನಾ ರ‍್ಯಾಲಿ ಆರಂಭಗೊಳ್ಳುತ್ತಲೇ ಸರ್ಕಾರದಿಂದ ಮಾತುಕತೆ ಭರವಸೆ ದೊರೆತ ಹಿನ್ನಲೆ ದೀಪ್ಕೆ ತಮ್ಮ ಉಪವಾಸವನ್ನು ಮೊಟಕು ಗೊಳಿಸಿದ್ದಾರೆ.

ನಡ್ಡಾ ಜೊತೆ ಮಾತುಕತೆ ಸಾಧ್ಯತೆ!

ಇಂದಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಮಳೆಗಾಲದ ಸಂಸತ್​ ಅಧಿವೇಶನ ಆರಂಭವಾಗುತ್ತಿದ್ದು, ಇದೇ ಸಂದರ್ಭದಲ್ಲಿ ಕಾಕ್ರೋಚ್​ ಜನತಾ ಪಾರ್ಟಿ ಕಾರ್ಯಕರ್ತರು ಸಂಸತ್​ಗೆ ಮುತ್ತಿಗೆ ಹಾಕಲು ಮುಂದಾಗಿದ್ದರೆಂದು ತಿಳಿದು ಬಂದಿದೆ.
ಈಗ ಸರ್ಕಾರದ ವತಿಯಿಂದ ಕೇಂದ್ರ ಸಚಿವ ಜೆ.ಪಿ. ನಡ್ಡಾ ಮಾತುಕತೆಗೆ ಮುಂದಾಗಿದ್ದಾರೆಂದು ಮಾಹಿತಿ ಲಭ್ಯವಾಗಿದೆ. ಈ ಕುರಿತು ಕಾಕ್ರೋಚ್​ ಜನತಾ ಪಾರ್ಟಿ ವಕ್ತಾರ, ಸೌರವ್​ ದಾಸ್​​, ಎಕ್ಸ್​​ ಪೋಸ್ಟ್​ವೊಂದರಲ್ಲಿ, ಸೋಮವಾರ ಕಾಕ್ರೋಚ್​ ಜನತಾ ಪಾರ್ಟಿಯ ನಾಯಕರು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ಬೇಟಿಯಾಗಲು ಹೋಗುತ್ತಿದ್ದಾರೆ. ಸರ್ಕಾರ ನಮ್ಮನ್ನು ಸಂಪರ್ಕಿಸಿದೆ ಹೀಗಾಗಿ ಆಶುತೋಷ್​ ರಾಂಕಾ ನೇತೃತ್ವದಲ್ಲಿ ನಾವು ನಮ್ಮ ಬೇಡಿಕೆಯನ್ನು ಸಚಿವರಿಗೆ ಮನವರಿಕೆ ಮಾಡಿಕೊಡಲಿದ್ದು, ನಮಗೆ ಈ ಬಾರಿ ಜಯ ಸಿಗಲಿದೆ ಎಂದು ಬರೆದುಕೊಂಡಿದ್ದಾರೆ, (ಏಜನ್ಸೀಸ್​).