West Bengal Election | ದೆಹಲಿಯಿಂದ ಬಂಗಾಳದವರೆಗೆ ಬಿಜೆಪಿಯ ‘ಕಾನ್ಫಿಡೆಂಟ್’ ಪ್ಲಾನ್! 
ದೇಶ

ಫಲಿತಾಂಶಕ್ಕೂ ಮುನ್ನವೇ ಹೊಸ ಸರ್ಕಾರದ ರೂಪರೇಷೆ ಸಿದ್ಧ..? ದೆಹಲಿಯಿಂದ ಬಂಗಾಳದವರೆಗೆ ಬಿಜೆಪಿಯ ‘ಕಾನ್ಫಿಡೆಂಟ್’ ಪ್ಲಾನ್! | West Bengal Election

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ (West Bengal Election) ಫಲಿತಾಂಶಗಳು ಸೋಮವಾರ ಪ್ರಕಟವಾಗಲಿದ್ದು, ಅಂತಿಮ ಫಲಿತಾಂಶಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ದೆಹಲಿ ಮತ್ತು ರಾಜ್ಯ ಬಿಜೆಪಿಯಲ್ಲಿ ವಿಪರೀತ ಆತ್ಮವಿಶ್ವಾಸ ಮನೆಮಾಡಿದ್ದು, ಪಕ್ಷವು ಈಗಾಗಲೇ ಮುಂದಿನ ಸರ್ಕಾರದ ರೂಪರೇಷೆಗಳನ್ನು ಅನೌಪಚಾರಿಕವಾಗಿ ಯೋಜಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಬಿಜೆಪಿಯ ಆಂತರಿಕ ಸಮೀಕ್ಷೆ ಮತ್ತು ಅನೇಕ ಎಕ್ಸಿಟ್​ ಪೋಲ್​ಗಳ ಪ್ರಕಾರ, ಪಕ್ಷವು ನಿರಾಯಾಸವಾಗಿ ಬಹುಮತವನ್ನು ಪಡೆಯುವ ನಿರೀಕ್ಷೆ ಇದ್ದು, ಅಂತಿಮ ಫಲಿತಾಂಶಕ್ಕಾಗಿ ಕಾಯುವುದು ಬುದ್ಧಿವಂತಿಕೆ ರಾಜಕೀಯ ವಿಶ್ಲೇಷಕರು ಎಂದು ಹೇಳುತ್ತಿದ್ದರೂ, ಬಿಜೆಪಿಯೊಳಗಿನ ಸಕಾರಾತ್ಮಕ ಮನಸ್ಥಿತಿಯು ಅವರು ಅಧಿಕಾರ ಹಿಡಿಯಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ ಎಂಬ ಸೂಚನೆ ನೀಡುತ್ತಿದೆ.
ಶನಿವಾರ ಮಧ್ಯಾಹ್ನ ಬಿಜೆಪಿ ತನ್ನ ಪದಾಧಿಕಾರಿಗಳು ಮತ್ತು ಪ್ರಮುಖ ಕಾರ್ಯಕರ್ತರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದು, ಈ ಸಭೆಗಳ ಹಿಂದೆ ಕೇವಲ ಗೆಲುವಿನ ಆಶಾವಾದವಷ್ಟೇ ಅಲ್ಲದೆ, ಎಚ್ಚರಿಕೆಯೂ ಅಡಗಿದೆ. ಫಲಿತಾಂಶಗಳು ಹೊರಬಿದ್ದ ಬಳಿಕ ರಾಜ್ಯದಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆ ಇದೆ ಎಂದು ಕೇಂದ್ರ ಚುನಾವಣಾ ಆಯೋಗದ ವೀಕ್ಷಕರು ವರದಿ ನೀಡಿರುವುದು ಈ ಎಚ್ಚರಿಕೆಗೆ ಕಾರಣವಾಗಿದೆ.
ಟಿಎಂಸಿಗೆ ಈಗಾಗಲೇ ತನ್ನ ಸೋಲಿನ ಸುಳಿವು ಸಿಕ್ಕಿದ್ದು, ಕಾನೂನು ಸುವ್ಯವಸ್ಥೆ ಹಾಳು ಪ್ರಯತ್ನಕ್ಕೆ ದೀದಿ ಕಾರ್ಯಕರ್ತರು ಕೈ ಹಾಕಬಹುದು ಎಂಬ ಸಂಶಯ ಬಿಜೆಪಿಯಲ್ಲಿದೆ. ಈ ಹಿನ್ನೆಲೆಯಲ್ಲಿ, ಪ್ರಚೋದನೆಗಳಿಗೆ ಬಲಿಯಾಗದಂತೆ ಮತ್ತು ಜವಾಬ್ದಾರಿಯುತವಾಗಿ ವರ್ತಿಸುವಂತೆ ಬಿಜೆಪಿ ನಾಯಕರು ತಮ್ಮ ಬೆಂಬಲಿಗರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಿಶೇಷವಾಗಿ ಸ್ಟ್ರಾಂಗ್ ರೂಂಗಳ ಬಳಿ ಟಿಎಂಸಿ ಕಾರ್ಯಕರ್ತರು ಜನರನ್ನು ಬೆದರಿಸಲು ಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಕೇಸರಿ ಕಲಿಗಳು ಮಾಡಿದ್ದು, ಇದು ಉಭಯ ಪಕ್ಷಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಇತ್ತ ತೃಣಮೂಲ ಕಾಂಗ್ರೆಸ್ ಕೂಡ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಕ್ರಿಯವಾಗಿ ಸಂಘಟನೆ ನಡೆಸುತ್ತಿದ್ದು, ಶನಿವಾರ ಸಂಜೆ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ವರ್ಚುವಲ್ ಸಭೆಯ ಮೂಲಕ ಕಾರ್ಯಕರ್ತರೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದರು. ಯಾವುದೇ ಕಾರಣಕ್ಕೂ ಸಂಘರ್ಷಕ್ಕೆ ಇಳಿಯದಂತೆ ಮತ್ತು ಅತ್ಯಂತ ಜಾಗರೂಕರಾಗಿರುವಂತೆ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಸ್ಟ್ರಾಂಗ್ ರೂಮ್‌ಗಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಟಿಎಂಸಿ ನಾಯಕರು, ಯಾವುದೇ ಹಂತದಲ್ಲೂ ಕಾವಲನ್ನು ಸಡಿಲಗೊಳಿಸದಂತೆ ನಿರ್ದೇಶಿಸಿದೆ. ಕಳೆದ ಚುನಾವಣೆಗಳಲ್ಲಿ ಗೆಲುವಿನ ಭ್ರಮೆಯಲ್ಲೋ ಅಥವಾ ಸೋಲಿನ ಹತಾಶೆಯಲ್ಲೋ ಕಾರ್ಯಕರ್ತರು ಎಣಿಕೆ ಕೇಂದ್ರಗಳಿಂದ ಬೇಗನೆ ಹೊರಬಂದಿದ್ದರಿಂದ ಆದ ಲೋಪಗಳನ್ನು ಈ ಬಾರಿ ಪುನರಾವರ್ತಿಸಬಾರದು ಎಂಬುದು ದೀದಿ ಪಡೆಯ ಉದ್ದೇಶವಾಗಿದೆ.
ಎರಡೂ ಪಕ್ಷಗಳು ಚುನಾವಣಾ ಪ್ರಕ್ರಿಯೆ ಇನ್ನೂ ಮುಗಿದಿಲ್ಲ ಎಂಬ ಒಂದೇ ವಾದವನ್ನು ಮುಂದಿಡುತ್ತಿವೆ. ಟಿಎಂಸಿಗೆ ಇವಿಎಂ ತಿರುಚುವಿಕೆ ಅಥವಾ ಅಕ್ರಮದ ಭಯವಿದ್ದರೆ, ಬಿಜೆಪಿ ಅಂತಹ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಒಟ್ಟಾರೆಯಾಗಿ ವಿಶ್ವಾಸ, ಅನುಮಾನ ಮತ್ತು ರಣತಂತ್ರಗಳ ನಡುವೆ ಬಂಗಾಳದ ರಾಜಕೀಯ ವಾತಾವರಣವು ಫಲಿತಾಂಶದ ಮುನ್ನಾ ದಿನ ಅತ್ಯಂತ ಉತ್ಸಾಹಭರಿತವಾಗಿ ಮತ್ತು ಉದ್ವಿಗ್ನತೆಯಿಂದ ಕೂಡಿದೆ(ಏಜೆನ್ಸೀಸ್​​).