lawyer Murder 
ದೇಶ

lawyer Murder | ಹಾಡು ಹಗಲೇ ವಕೀಲನ ಹತ್ಯೆ; ತಮಿಳುನಾಡು ಕೊಲೆಗಳ ಭೂಮಿಯಾಗಿ ಮಾರ್ಪಟ್ಟಿದೆ ಎಂದ ವಿಪಕ್ಷ ನಾಯಕ ಪಳನಿಸ್ವಾಮಿ

ಚೆನ್ನೈ: ತಮಿಳುನಾಡಿನ ತೆಂಕಾಸಿ ಎಂಬಲ್ಲಿ ಬುಧವಾರ 45 ವರ್ಷದ ಸರ್ಕಾರಿ ವಕೀಲ ಮುತ್ತುಕುಮಾರಸಾಮಿ ಎನ್ನುವವರನ್ನು ಹತ್ಯೆ ಮಾಡಲಾಗಿದ್ದು. ಇದು ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ವಕೀಲರ ಕಚೇರಿಯ ಹೊರಗೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಈ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಮುತ್ತುಕುಮಾರಸಾಮಿ ಯತ್ನಿಸಿದರು ಕೂಡ ಬೆನ್ನಟ್ಟಿ ಹಲ್ಲೆ ನಡೆಸಲಾಯಿತು. ಹತ್ತಿರದ ಆಸ್ಪತ್ರೆಗೆ ಸಾಗಿಸುವಾಗ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದ್ದು. ಪೊಲೀಸರು ಹತ್ಯೆಯ ಕುರಿತಾಗಿ ತನಿಖೆ ಆರಂಭಿಸಿದ್ದಾರೆ.
ಈ ಘಟನೆಯ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯೆ ನೀಡಿರುವ ಎಐಎಡಿಎಂಕೆ ಮುಖ್ಯಸ್ಥ, ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಆಡಳಿತಾರೂಢ ಡಿಎಂಕೆ ಸರ್ಕಾರವೇ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಪ್ರಮುಖ ಕಾರಣ ಎಂದು ಆರೋಪಿಸಿದ್ದಾರೆ. ಹಗಲು ಹೊತ್ತಿನಲ್ಲಿ ನಡೆದ ಈ ಕೊಲೆ, ರಾಜ್ಯದ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವುದರ ಸ್ಪಷ್ಟ ಸೂಚನೆ ಎಂದು ಹೇಳಿದ್ದಾರೆ.
"ಸ್ಟಾಲಿನ್ ಮಾದರಿ ಸರ್ಕಾರ"ದಡಿಯಲ್ಲಿ ತಮಿಳುನಾಡು "ಕೊಲೆಗಳ ಭೂಮಿ"ಯಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿರುವ ಪಳನಿಸ್ವಾಮಿ, ರಸ್ತೆಯಲ್ಲಿ ಕೊಲೆಗಳು, ನ್ಯಾಯಾಲಯದಲ್ಲಿ ಕೊಲೆಗಳು, ಸಾಮಾನ್ಯ ಜನರು ಅಸುರಕ್ಷಿತರು, ಪೊಲೀಸ್ ಸಿಬ್ಬಂದಿ ಅಸುರಕ್ಷಿತರು, ಚಿಕ್ಕ ಮಕ್ಕಳಿಂದ ವೃದ್ಧರವರೆಗೆ, ಸರ್ಕಾರಿ ವೈದ್ಯರಿಂದ ಸರ್ಕಾರಿ ವಕೀಲರವರೆಗೆ ತಮಿಳುನಾಡಿನಲ್ಲಿ ಯಾರಿಗೂ ಸುರಕ್ಷತೆ ಇಲ್ಲ ಎನ್ನುವುದು ಈ ಘಟನೆಯಿಂದ ಸ್ಪಷ್ಟವಾಗಿದೆ ಎಂದು ಹೇಳಿದರು.
ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ, ಈ ಘಟನೆಯ ಸಂಬಂಧಪಟ್ಟವರನ್ನು ಕಂಡು ಹಿಡಿದು, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕೊಲೆ ಆರೋಪಿಗಳಿಗೆ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ(ಏಜೆನ್ಸೀಸ್​).