ಟೆಲಿಗ್ರಾಂ ಆ್ಯಪ್‌ಗೆ ಕೇಂದ್ರ ಸರ್ಕಾರದಿಂದ ನೋಟಿಸ್
- ಟೆಲಿಗ್ರಾಂ ಆ್ಯಪ್‌ಗೆ ಕೇಂದ್ರ ಸರ್ಕಾರದಿಂದ ನೋಟಿಸ್
- ಕಾನೂನುಬಾಹಿರವಾಗಿ ಸಿನಿಮಾ ಮತ್ತು ಒಟಿಟಿ ಕಂಟೆಂಟ್ಗಳ ಪೈರಸಿ ಲಿಂಕ್ ಹಂಚಿಕೊಳ್ಳುತ್ತಿರುವುದಕ್ಕೆ ಕೇಂದ್ರ ಬ್ರೇಕ್
- ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಟೆಲಿಗ್ರಾಂಗೆ ಕಠಿಣ ಎಚ್ಚರಿಕೆ
- ಮುಂದಿನ 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಎಚ್ಚರಿಕೆ
Telegram App: ಸಿನಿಮಾಗಳು ಮತ್ತು ಒಟಿಟಿ ಕಂಟೆಂಟ್ಗಳ ಪೈರಸಿ ಲಿಂಕ್ಗಳನ್ನು ಯಾವುದೇ ಭಯವಿಲ್ಲದೆ, ವ್ಯಾಪಕವಾಗಿ ತನ್ನ ಬಳಕೆದಾರರಿಗೆ ಉಚಿತವಾಗಿ ನೀಡುತ್ತಿರುವ ಟೆಲಿಗ್ರಾಂ ಆ್ಯಪ್ ವಿರುದ್ಧ ಇದೀಗ ಕೇಂದ್ರ ಸರ್ಕಾರ ಗರಂ ಆಗಿದೆ. ಈ ನಿಟ್ಟಿನಲ್ಲಿ, ಹೊಸ ಬದಲಾವಣೆ ತರುವಂತೆ ಖಡಕ್ ಸೂಚನೆಯನ್ನು ನೋಟಿಸ್ ಮೂಲಕ ನೀಡಿದೆ.
ಟೆಲಿಗ್ರಾಂ ಪ್ಲಾಟ್‌ಫಾರ್ಮ್‌ನಲ್ಲಿ ಎಗ್ಗಿಲ್ಲದೆ ಸಾಗುತ್ತಿರುವ ಈ ಪೈರಸಿ ದಂಧಗೆ ಬ್ರೇಕ್ ಹಾಕಲು ಮುಂದಾಗಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಸಂಸ್ಥೆಗೆ ಅಧಿಕೃತ ನೋಟಿಸ್ ಜಾರಿಗೊಳಿಸಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯುತ್ತಿರುವ ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಮುಂದಿನ 15 ದಿನಗಳೊಳಗೆ ಡಿಜಿಟಲ್ ಸುರಕ್ಷತಾ ನಿಯಮಗಳನ್ನು ತಕ್ಷಣವೇ ಬಿಗಿಗೊಳಿಸಿ, ಅದರ ವರದಿಯನ್ನು ಸಲ್ಲಿಸಬೇಕು ಎಂದು ಸರ್ಕಾರ ಎಚ್ಚರಿಸಿದೆ.
ಪೈರಸಿ ಮುಕ್ತ ಮಾಡಲು ಕೈಗೊಂಡಿರುವ ಕಠಿಣ ಕ್ರಮಗಳ ಕುರಿತು 15 ದಿನಗಳ ಒಳಗೆ ವಿಸ್ತೃತವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಟೆಲಿಗ್ರಾಂ ಸಂಸ್ಥೆಗೆ ಕೇಂದ್ರವು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಚಿತ್ರರಂಗ, ಪ್ರಸಾರಕರು, ಒಟಿಟಿ ಸಂಸ್ಥೆಗಳು, ನಿರ್ಮಾಪಕರು ಮತ್ತು ವಿತರಕರ ಹಿತಾಸಕ್ತಿಯನ್ನು ಕಾಯುವುದು ಹಾಗೂ ಪೈರಸಿಯಿಂದ ಈ ವಲಯಗಳಿಗೆ ಆಗುತ್ತಿರುವ ಕೋಟ್ಯಂತರ ರೂ. ನಷ್ಟವನ್ನು ತಪ್ಪಿಸುವುದು ಸರ್ಕಾರದ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ, ಕಠಿಣ ಕ್ರಮ ಕೈಗೊಂಡಿದ್ದಾಗಿ ವರದಿಗಳು ಉಲ್ಲೇಖಿಸಿವೆ.
ಸರ್ಕಾರದ ಹೇಳಿಕೆಯಲ್ಲಿ ಏನಿದೆ?
ಹಕ್ಕುಸ್ವಾಮ್ಯ ಉಲ್ಲಂಘನೆಯು ಕೇವಲ ನಾಗರಿಕ ಉಲ್ಲಂಘನೆ ಮಾತ್ರವಲ್ಲ. 1957ರ ಕಾಪಿರೈಟ್ ಕಾಯ್ದೆ ಮತ್ತು 1952ರ ಸಿನಿಮಾಟೋಗ್ರಾಫ್ ಕಾಯ್ದೆಯ ಅಡಿಯಲ್ಲಿ ಕ್ರಿಮಿನಲ್ ಅಪರಾಧ. ಸರ್ಕಾರವು ಪ್ರತಿಯೊಂದು ಪೈರಸಿ ಚಾನೆಲ್ ಅನ್ನು ಒಂದೊಂದಾಗಿ ಗುರುತಿಸುವವರೆಗೆ ಟೆಲಿಗ್ರಾಮ್ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಸಚಿವಾಲಯ ಟೆಲಿಗ್ರಾಮ್‌ಗೆ ಕೊಟ್ಟ ನೋಟಿಸ್ನಲ್ಲಿ ತಿಳಿಸಿದೆ.
ನೀಟ್ ಮರು ಪರೀಕ್ಷೆಯ ಸಮಯದ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಕಳೆದ ಜೂನ್‌ನಲ್ಲಿ ಭಾರತದಲ್ಲಿ ಟೆಲಿಗ್ರಾಮ್ ಆ್ಯಪ್ ಅನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಈಗ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಆದರೀಗ, ಉಚಿತವಾಗಿ ಸಿಗುವ ಸಿನಿಮಾ ಮತ್ತು ಒಟಿಟಿ ಕಂಟೆಂಟ್ಗಳಿಗೆ ಬ್ರೇಕ್ ಹಾಕಲೇಬೇಕು ಎಂದು ಪಣತೊಟ್ಟಿರುವ ಕೇಂದ್ರ ಸರ್ಕಾರ, ಟೆಲಿಗ್ರಾಂಗೆ ಮುಂದಿನ 15 ದಿನಗಳ ಡೆಡ್ಲೈನ್ ನೀಡಿದೆ,(ಏಜೆನ್ಸೀಸ್).