Sonam Wangchuk | ಏನಾದ್ರೂ ಮಾಡಿ ವಾಂಗ್ಚುಕ್ ಪ್ರಾಣ ಉಳಿಸಿ!...ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ 
ದೇಶ

ಏನಾದ್ರೂ ಮಾಡಿ ವಾಂಗ್ಚುಕ್ ಪ್ರಾಣ ಉಳಿಸಿ!...ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ | Sonam Wangchuk

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ, ಕಳೆದ 19 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ (Sonam Wangchuk) ಆರೋಗ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸೋನಮ್ ವಾಂಗ್ಚುಕ್ ಅವರ ಜೀವ ಉಳಿಸಲು ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವು ಹಾಗೂ ತುರ್ತು ಚಿಕಿತ್ಸೆಯನ್ನು ಸರ್ಕಾರ ತಕ್ಷಣವೇ ಕೈಗೊಳ್ಳಬೇಕು, ಪ್ರತಿಯೊಬ್ಬ ಪ್ರಜೆಯ ಜೀವವೂ ಅತ್ಯಂತ ಅಮೂಲ್ಯವಾದದ್ದು, ಅದನ್ನು ಉಳಿಸಲು ಸರ್ಕಾರಿ ಅಧಿಕಾರಿಗಳು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದು ಹೈಕೋರ್ಟ್ ಇಂದು (ಗುರುವಾರ ಜುಲೈ- 16) ಬೆಳಿಗ್ಗೆ ಆದೇಶಿಸಿದೆ.

ಸರ್ಕಾರದ ವೈದ್ಯಕೀಯ ಮೇಲ್ವಿಚಾರಣೆ ಕುರಿತು ಹೈಕೋರ್ಟ್ ಪ್ರಶ್ನೆ

ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸೊಲಿಸಿಟರ್ ಜನರಲ್ ತುಷಾರ್ ಮೆಹ್ತಾರನ್ನು ಪ್ರಶ್ನಿಸಿದ ಹೈಕೋರ್ಟ್, ವಾಂಗ್ಚುಕ್ ಆರೋಗ್ಯ ಸ್ಥಿತಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಸೂಕ್ತ ವ್ಯವಸ್ಥೆ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿತು. ದಿನನಿತ್ಯದ ಆರೋಗ್ಯ ತಪಾಸಣೆಗಳನ್ನು ನಡೆಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿತಾದರೂ, ತಪಾಸಣೆ ನಡೆಸುತ್ತಿರುವ ವೈದ್ಯರು ಸರ್ಕಾರಿ ವೈದ್ಯಕೀಯ ಸಂಸ್ಥೆಗಳಿಗೆ ಸೇರಿದವರಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಕೆಲವೊಮ್ಮೆ ಸರ್ಕಾರಿ ವೈದ್ಯರು, ಇನ್ನು ಕೆಲವೊಮ್ಮೆ ಖಾಸಗಿ ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ ಎಂದು ತುಷಾರ್ ಮೆಹ್ತಾ ಒಪ್ಪಿಕೊಂಡರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ನ್ಯಾಯಾಲಯ, ಈ ವ್ಯಕ್ತಿಗೆ ಪ್ರತಿದಿನ ಸರ್ಕಾರಿ ವೈದ್ಯರಿಂದಲೇ ನಿಯಮಿತ ವೈದ್ಯಕೀಯ ತಪಾಸಣೆ ಸಿಗಬೇಕು ಹಾಗೂ ವೈದ್ಯಕೀಯ ವರದಿಗಳ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಬೇಕು, ಯಾವುದೇ ಔಷಧಿಯ ಅಗತ್ಯವಿದ್ದರೆ ತಕ್ಷಣ ನೀಡಬೇಕು. ಪ್ರತಿಯೊಂದು ಜೀವವೂ ನಮಗೆ ಅಮೂಲ್ಯ ಎಂದು ಸ್ಪಷ್ಟಪಡಿಸಿತು.

ಬಲವಂತದ ಆಹಾರಕ್ಕೆ ಮನವಿ!..

ಸತ್ಯಾಗ್ರಹ ನಿಲ್ಲಿಸದಿದ್ದರೆ ವಾಂಗ್ಚುಕ್ ಮುಂದಿನ 48 ಗಂಟೆಗಳ ಕಾಲ ಬದುಕುಳಿಯುವುದು ಕಷ್ಟ ಎಂದು ಎಚ್ಚರಿಸಿ ಬುಧವಾರ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ವಾಂಗ್ಚುಕ್ ಪರಿಸ್ಥಿತಿಯ ಕುರಿತು ಸರ್ಕಾರ ನಿರ್ಲಕ್ಷ್ಯ ಮತ್ತು ಸಂವೇದನಾಶೀಲತೆ ಇಲ್ಲದೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದ ಅರ್ಜಿದಾರರು, ಅವರಿಗೆ ಬಲವಂತವಾಗಿ ನೀಡಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದರು.
ಉಪವಾಸ ಸತ್ಯಾಗ್ರಹ ಆರಂಭಿಸಿದ ನಂತರ ವಾಂಗ್ಚುಕ್ ಸುಮಾರು 8.5 ಕೆಜಿ ತೂಕ ಕಳೆದುಕೊಂಡಿದ್ದಾರೆ. ಅವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಮಾನವ ದೇಹ ಬದುಕಲು ಅಗತ್ಯವಿರುವ ಪೋಷಕಾಂಶಗಳು, ವಿಟಮಿನ್‌ಗಳು ಮತ್ತು ಖನಿಜಗಳನ್ನು ಒಳಗೊಂಡ ದ್ರವಾಹಾರವನ್ನು ಬಲವಂತವಾಗಿ ನೀಡಬೇಕಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಸಾರ್ವಜನಿಕ ಸ್ಥಳದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರಜೆಗಳ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಾಗಿದ್ದರೂ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳು ಗಮನಿಸುತ್ತಿರುವಾಗ ವಾಂಗ್ಚುಕ್ ಸಾವು ಸಂಭವಿಸಿದರೆ, ಅದು ಇಡೀ ದೇಶಕ್ಕೆ ಮತ್ತು ಜಗತ್ತಿಗೆ ಭಾರೀ ಮುಜುಗರ ಹಾಗೂ ಅಪಮಾನದ ಸಂಗತಿಯಾಗುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ಸೋನಮ್ ವಾಂಗ್ಚುಕ್ ಅವರ ಭಾವುಕ ಸಂದೇಶ

ನ್ಯಾಯಾಲಯದ ಆದೇಶ ಬರುವುದಕ್ಕಿಂತ ಕೆಲವು ಗಂಟೆಗಳ ಮೊದಲು, ಸೋನಮ್ ವಾಂಗ್ಚುಕ್ ವೀಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದರು.
ಜನರ ಕಾಳಜಿಯನ್ನು ಧನ್ಯವಾದಗಳೊಂದಿಗೆ ಸ್ವೀಕರಿಸಿದ ಅವರು, ದೀರ್ಘಾವಧಿಯ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವ್ಯಕ್ತಿಯ ದೇಹಸ್ಥಿತಿಗೆ ಅನುಗುಣವಾಗಿಯೇ ತಮ್ಮ ಆರೋಗ್ಯವಿದೆ ಎಂದಿದ್ದಾರೆ. ಸರ್ಕಾರದ ಕಡೆಯಿಂದ ಯಾವುದೇ ಧನಾತ್ಮಕ ಸ್ಪಂದನೆ ಸಿಗದೆ ಉಪವಾಸ ಹಿಂಪಡೆದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದ ಅವರು, ಹಿರಿಯ ರಾಜಕಾರಣಿಗಳ ತೀವ್ರ ಮನವಿಗಳ ಹೊರತಾಗಿಯೂ ಸತ್ಯಾಗ್ರಹವನ್ನು ಕೊನೆಗೊಳಿಸುವುದನ್ನು ಸ್ಪಷ್ಟವಾಗಿ ತಿರಸ್ಕರಿಸಿದರು.
ನನ್ನ ಪರಿಸ್ಥಿತಿ ತೀರಾ ಹದಗೆಟ್ಟಿಲ್ಲ, ಹಾಗಾಗಿಯೇ ನಾನು ಇನ್ನೂ ಹಲವು ದಿನಗಳ ಕಾಲ ಹೆಜ್ಜೆಹಾಕಬಲ್ಲೆ. ಹೌದು, ದೈಹಿಕವಾಗಿ ನಿಃಶಕ್ತಿ ಇದೆ. ಸ್ನಾಯುಗಳು ಬಳಲುತ್ತಿವೆ, ಆದರೆ ನನ್ನ ಹೃದಯ ಮತ್ತು ದೇಹದ ಶಕ್ತಿ ಇನ್ನು ದೃಢವಾಗಿದೆ. ಆದ್ದರಿಂದ ಬರಿ ಉಪವಾಸ ಅಂತ್ಯಗೊಳಿಸಿ ಎಂದು ಹೇಳುವ ಬದಲು, ನೀವೆಲ್ಲರೂ ಒಂದು ಸಣ್ಣ ಹೆಜ್ಜೆ ಇಡಬೇಕೆಂದು ವಿನಂತಿಸುತ್ತೇನೆ. ಜುಲೈ 20 ರಂದು (ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಆಯೋಜಿಸಿರುವ ಬೃಹತ್ ಪ್ರತಿಭಟನಾ ದಿನ) ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಗ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನೆಯಾಗುತ್ತದೆ ಎಂದು ಅವರು ಮನವಿ ಮಾಡಿದ್ದಾರೆ.
ನಾವೆಲ್ಲರೂ ಒಟ್ಟಾಗಿ ಈ ಸಮಸ್ಯೆಯನ್ನು ಸಂಸದರಿಗೆ ಹಸ್ತಾಂತರಿಸಲಿದ್ದೇವೆ. ಆ ನಂತರವೇ ಈ ವಿಚಾರ ಸರಿಯಾದ ಕೈಗೆ ತಲುಪಿದೆ ಎಂದು ನಾನು ನಂಬುತ್ತೇನೆ ಎಂದು ಹೇಳಿದ ವಾಂಗ್ಚುಕ್, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೂ ಈ ಹೋರಾಟದಲ್ಲಿ ಕೈಜೋಡಿಸುವಂತೆ ಕರೆ ನೀಡಿದ್ದಾರೆ.

ಪ್ರಧಾನ್ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ ಪಟ್ಟು

ಅಭಿಜೀತ್ ದೀಪ್ಕೆ ನಾಯಕತ್ವದ ಕಾಕ್ರೋಚ್ ಜನತಾ ಪಾರ್ಟಿ ಮೇ 3 ರಂದು ನಡೆದ ನೀಟ್​ ವೈದ್ಯಕೀಯ ಪ್ರವೇಶ ಪರೀಕ್ಷೆ ಸೇರಿದಂತೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಅಥವಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಹೋರಾಟ ತೀವ್ರಗೊಳಿಸಿದೆ(ಏಜೆನ್ಸೀಸ್​).