CJP Protest (ಚಿತ್ರ X) 
ದೇಶ

ಹೋರಾಟಗಾರರ ವಿರುದ್ಧದ ಪ್ರಕರಣಗಳು ರದ್ದು: 'ಕಾಕ್ರೋಚ್ ಜನತಾ ಪಾರ್ಟಿ' ಜೊತೆ ಸರ್ಕಾರ ಮಹತ್ವದ ಮಾತುಕತೆ! CJP Protest

ಪ್ರಮುಖ ಮುಖ್ಯಾಂಶಗಳು

  • ಆಂದೋಲನ ನಿರತರ ವಿರುದ್ಧದ ಪೊಲೀಸ್ ನಡಾವಳಿಗಳ ಕುರಿತು ಸರ್ಕಾರವು ಒಪ್ಪಂದ ಉಲ್ಲಂಘಿಸಿದೆ ಎಂದು ಸಿಜೆಪಿ ಆರೋಪ
  • ಬಿಹಾರ ಮತ್ತು ಅಸ್ಸಾಂ ಸರ್ಕಾರಗಳು ಈಗಾಗಲೇ ಹೊರಡಿಸಿರುವ ಅಧಿಕೃತ ಆದೇಶಗಳ ಪ್ರತಿಗಳನ್ನು ಸಿಜೆಪಿ ನಾಯಕರಿಗೆ ಹಸ್ತಾಂತರ
  • ಎಲ್ಲಾ ಎಫ್‌ಐಆರ್‌ಗಳನ್ನು ಹಿಂಪಡೆಯುವುದು ಮತ್ತು ಬಂಧನದಲ್ಲಿರುವ ಪ್ರತಿಯೊಬ್ಬರನ್ನೂ ತಕ್ಷಣವೇ ಬಿಡುಗಡೆ ಮಾಡಲು ಸರ್ಕಾರ ಮುಂದು
CJP Protest: ಆಂದೋಲನ ನಿರತರ ವಿರುದ್ಧದ ಪೊಲೀಸ್ ನಡಾವಳಿಗಳ ಕುರಿತು ಸರ್ಕಾರವು ಒಪ್ಪಂದ ಉಲ್ಲಂಘಿಸಿದೆ ಎಂದು ಆರೋಪಿಸಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಮತ್ತೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಈ ಪತ್ರಿಕಾಗೋಷ್ಠಿ ನಡೆದ ಕೆಲವೇ ಗಂಟೆಗಳಲ್ಲಿ ಸರ್ಕಾರದ ಪ್ರತಿನಿಧಿಗಳು ಸಕ್ರಿಯರಾಗಿದ್ದು, ತಡರಾತ್ರಿ (ಜು.27) ಸಿಜೆಪಿ ನಾಯಕರೊಂದಿಗೆ ಸುದೀರ್ಘವಾಗಿ ಸಭೆ ನಡೆಸಿದ್ದಾರೆ.
ಈ ಸಭೆಯಲ್ಲಿ ಅಧಿಕಾರಿಗಳು ಬಿಹಾರ ಮತ್ತು ಅಸ್ಸಾಂ ಸರ್ಕಾರಗಳು ಈಗಾಗಲೇ ಹೊರಡಿಸಿರುವ ಅಧಿಕೃತ ಆದೇಶಗಳ ಪ್ರತಿಗಳನ್ನು ಸಿಜೆಪಿ ನಾಯಕರಿಗೆ ಹಸ್ತಾಂತರಿಸಿದ್ದಾರೆ. ಈ ಆದೇಶಗಳ ಪ್ರಕಾರ, ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಹಿಂಪಡೆಯಲು, ಪ್ರಸ್ತುತ ಬಂಧನದಲ್ಲಿರುವ ಪ್ರತಿಯೊಬ್ಬರನ್ನೂ ತಕ್ಷಣವೇ ಬಿಡುಗಡೆ ಮಾಡಲು ಮತ್ತು ಭವಿಷ್ಯದಲ್ಲಿ ಅವರ ಮೇಲೆ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಜರುಗಿಸದಿರಲು ಸ್ಪಷ್ಟ ಭರವಸೆ ನೀಡಲಾಗಿದೆ.
ಮಧ್ಯರಾತ್ರಿ 1 ಗಂಟೆಗೆ 'X' ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ಸಭೆಯ ಆರಂಭದಲ್ಲಿ ಸರ್ಕಾರದ ಆಶ್ವಾಸನೆಗಳು ಅನುಷ್ಠಾನಗೊಳ್ಳುವುದಿಲ್ಲವೇನೋ ಎಂಬ ತೀವ್ರ ಆತಂಕ ತಮಗಿತ್ತು. ಆದರೆ, ನಾಯಕರ ಈ ಸಂಶಯಕ್ಕೆ ಸ್ಪಂದಿಸಿದ ಆಡಳಿತಾರೂಢ ಪ್ರತಿನಿಧಿಗಳು ಬಿಹಾರ ಗೃಹ ಇಲಾಖೆಯ ಪತ್ರಿಕಾ ಪ್ರಕಟಣೆಯನ್ನು ಸಾಕ್ಷಿಯಾಗಿ ಮುಂದಿಟ್ಟು, ಪ್ರತಿಭಟನಾಕಾರರ ಹಿತರಕ್ಷಣೆಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. 
ಆದಾಗ್ಯೂ, ಈ ಸಭೆಯಲ್ಲಿ ಮುಖ್ಯವಾಗಿ, ಹೋರಾಟಗಾರರು ಯಾವುದೇ ನಗರದಲ್ಲಿದ್ದರೂ ಅವರಿಗೆ ಕಾನೂನಾತ್ಮಕ ತೊಂದರೆಗಳು ಎದುರಾಗದಂತೆ ನೋಡಿಕೊಳ್ಳಲು ಯಾವೆಲ್ಲಾ ರಾಜ್ಯಗಳು ಇಂತಹ ಅಧಿಸೂಚನೆಗಳನ್ನು ಹೊರಡಿಸಬೇಕು ಎಂಬುದರ ಕುರಿತು ವಿಸ್ತೃತ ಚರ್ಚೆ ನಡೆದಿದೆ. ಇದಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ತನ್ನ ವ್ಯಾಪ್ತಿ ಸೇರಿದಂತೆ ಎನ್‌ಡಿಎ ಮತ್ತು ಬಿಜೆಪಿ ಆಡಳಿತವಿರುವ ಇತರ ಎಲ್ಲಾ ರಾಜ್ಯಗಳಿಂದಲೂ ನಾಳೆಯೊಳಗಾಗಿ ಇದೇ ಮಾದರಿಯ ರಕ್ಷಣಾತ್ಮಕ ಸುತ್ತೋಲೆಗಳನ್ನು ಹೊರಡಿಸುವುದಾಗಿ ತಿಳಿಸಿದೆ ಎಂದರು. 
ಸಭೆಯ ನಂತರ ವೀಡಿಯೊ ಸಂದೇಶ ಬಿಡುಗಡೆ ಮಾಡಿದ ಸೌರವ್ ದಾಸ್, "ಯಾವೊಬ್ಬ ಪ್ರತಿಭಟನಾಕಾರನನ್ನೂ ನಾವು ಒಂಟಿಯಾಗಿ ಬಿಡುವುದಿಲ್ಲ, ನಾವೆಲ್ಲರೂ ಒಟ್ಟಾಗಿದ್ದೇವೆ" ಎಂದು ಧೈರ್ಯ ತುಂಬಿದ್ದಾರೆ. ತಮ್ಮ ನಗರಗಳಲ್ಲಿ ಶಾಂತಿಯುತವಾಗಿ ಧರಣಿ ನಡೆಸಿದ ಪ್ರತಿಯೊಬ್ಬ ವ್ಯಕ್ತಿಯ ಪರವಾಗಿ ಸಿಜೆಪಿ ಮೊದಲ ದಿನದಿಂದಲೂ ಬೆಂಬಲವಾಗಿ ನಿಂತಿದ್ದು, ಪ್ರತಿಯೊಬ್ಬರಿಗೂ ಸಂಪೂರ್ಣ ಕಾನೂನು ಭದ್ರತೆ ದೊರೆಯುವವರೆಗೆ ತಮ್ಮ ಹೋರಾಟ ಮತ್ತು ಬೆಂಬಲ ಮುಂದುವರಿಯಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಪ್ರತಿಭಟನಾಕಾರರ ಮೇಲಿನ ಪ್ರಕರಣ ರದ್ದತಿಗೆ ಸಿಜೆಪಿ ಆಗ್ರಹ

ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ನಡೆದ 37 ದಿನಗಳ ಧರಣಿಯು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯೊಂದಿಗೆ ಅಂತ್ಯಗೊಂಡಿತ್ತು. ಆದರೆ ಸರ್ಕಾರ ಭರವಸೆ ಮೀರಿ ಹೋರಾಟಗಾರರ ವಿರುದ್ಧ ಪೊಲೀಸ್ ನಡಾವಳಿ ಮುಂದುವರಿಸಿದೆ ಎಂದು ಸಿಜೆಪಿ ವಕ್ತಾರ ಅಶುತೋಷ್ ರಾಂಕಾ ಆರೋಪಿಸಿದ್ದಾರೆ. 
ಆದಾಗ್ಯೂ, ಬಿಹಾರ, ಬಂಗಾಳ ಹಾಗೂ ದೆಹಲಿಯಲ್ಲಿ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರ ಬಂಧನ, ಕಣ್ಗಾವಲು ನಡೆಯುತ್ತಿದೆ ಎಂದಿರುವ ಅವರು, ಎಲ್ಲಾ ಎಫ್‌ಐಆರ್‌ಗಳನ್ನು ತಕ್ಷಣವೇ ಹಿಂಪಡೆದು ಬಂಧಿತರನ್ನು ಬಿಡುಗಡೆ ಮಾಡದಿದ್ದಲ್ಲಿ ಮತ್ತೆ ಬೀದಿಗಿಳಿದು ಹೋರಾಡುವುದಾಗಿ ಎಚ್ಚರಿಸಿದ್ದಾರೆ.
ರಾಜಸ್ಥಾನದಿಂದ ಪ್ರತಿಭಟನಾಕಾರರಿಗೆ ಅಭಯ: 'ಸಿಜೆಪಿ' ನಾಯಕ ಸೌರವ್ ದಾಸ್
ನೀಟ್-ಯುಜಿ ಪರೀಕ್ಷಾ ಅಕ್ರಮ ಖಂಡಿಸಿ ಧರಣಿ ನಡೆಸಿದವರ ಮೇಲಿನ ಪ್ರಕರಣಗಳನ್ನು ಬಿಹಾರ ಹಾಗೂ ಅಸ್ಸಾಂ ರದ್ದುಗೊಳಿಸಿದ ಬೆನ್ನಲ್ಲೇ, ರಾಜಸ್ಥಾನದಲ್ಲೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಆಶ್ವಾಸನೆ ಸಿಕ್ಕಿದೆ ಎಂದು 'ಸಿಜೆಪಿ' ನಾಯಕ ಸೌರವ್ ದಾಸ್ ತಿಳಿಸಿದ್ದಾರೆ. ಅಲ್ಲಿ ಹೊಸ ಎಫ್‌ಐಆರ್‌ಗಳು ದಾಖಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಇತರ ಎನ್‌ಡಿಎ ಆಡಳಿತದ ರಾಜ್ಯಗಳಲ್ಲೂ ಹೋರಾಟಗಾರರ ರಕ್ಷಣೆಗೆ ಸೂಕ್ತ ಅಧಿಸೂಚನೆ ಹೊರಡಿಸಲು ಶ್ರಮಿಸುತ್ತಿದ್ದು, ಯಾವುದೇ ಯುವಕನನ್ನು ಕೈಬಿಡುವುದಿಲ್ಲ ಎಂದಿದ್ದಾರೆ (ಏಜೆನ್ಸೀಸ್​).