Kiyomasa Gorilla (ಚಿತ್ರ X)
Kiyomasa Gorilla: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಣಿಗಳ ವಿಚಿತ್ರ ಹಾಗೂ ಆಕರ್ಷಕ ವಿಡಿಯೋಗಳು ಆಗಾಗ್ಗೆ ಮುನ್ನಲೆಗೆ ಬರುತ್ತಿರುತ್ತವೆ. ಆದರೆ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರ ಗಮನವನ್ನು ಸಂಪೂರ್ಣವಾಗಿ ಸೆಳೆದಿದೆ. ತನ್ನ ಸಂಗಾತಿಯೊಂದಿಗಿನ ಜಗಳದ ನಂತರ ತೀವ್ರ ಬೇಸರ ಮತ್ತು ಆಳವಾದ ಚಿಂತನೆಯಲ್ಲಿ ಮುಳುಗಿರುವಂತೆ ಕಾಣುವ ಗೊರಿಲ್ಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಸಾವಿರಾರು ಬಳಕೆದಾರರು ಈ ಪ್ರಾಣಿಯ ಮುಖಭಾವ ಮತ್ತು ವರ್ತನೆಯನ್ನು ಕಂಡು, ಅದು "ಅತೀವ ನೋವಿನಿಂದ ಕೂಡಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕ್ಲಿಪ್‌ನ ತಾರೆ ಕಿರೋಮಾಸಾ, 13 ವರ್ಷದ ಗಂಡು ಗೊರಿಲ್ಲಾ, ನವೆಂಬರ್ 1, 2012 ರಂದು ಜಪಾನ್‌ನ ನಾಗೋಯಾ ನಗರದಲ್ಲಿರುವ 'ಹಿಗಾಶಿಯಾಮಾ ಮೃಗಾಲಯ ಮತ್ತು ಸಸ್ಯೋದ್ಯಾನ'ದಲ್ಲಿ ಜನಿಸಿತು. ಇದು 'ವೆಸ್ಟರ್ನ್ ಲೋಲ್ಯಾಂಡ್' ತಳಿಗೆ ಸೇರಿದ್ದಾಗಿದೆ. ಕಿಯೋಮಾಸಾ ವಿಶ್ವಪ್ರಸಿದ್ಧ ಸಿಲ್ವರ್‌ಬ್ಯಾಕ್ ಗೊರಿಲ್ಲಾ ಶಬಾನಿಯ ಮಗ, ಅದರ ಆಕರ್ಷಕ ನೋಟವು ಅದಕ್ಕೆ ಜಾಗತಿಕ ಅಭಿಮಾನಿಗಳನ್ನು ಗಳಿಸಿಕೊಟ್ಟಿತು.
ವೈರಲ್ ವಿಡಿಯೋದಲ್ಲೇನಿದೆ?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಿಯೋಮಾಸ ಒಬ್ಬಂಟಿಯಾಗಿ ಕೂತು ಚಿಂತೆ ಮಾಡುತ್ತಿರುವುದನ್ನು ತೋರಿಸಲಾಗಿದೆ. ತನ್ನ ಬಲಗೈಯನ್ನು ಮಡಚಿ ಎದೆಯ ಭಾಗಕ್ಕೆ ಇಟ್ಟುಕೊಂಡು, ಎಡಗೈ ಅನ್ನು ಬಾಯಿಯ ಮೇಲೆ ಇಟ್ಟುಕೊಂಡು, ಏನೋ ಆಳವಾದ ಆಲೋಚನೆಯಲ್ಲಿ ಮುಳುಗಿರುವಂತೆ ಕಾಣಿತ್ತಿದೆ.
ವರದಿಗಳ ಪ್ರಕಾರ, ಕಿಯೋಮಾಸಾ ತನ್ನ ಸಂಗಾತಿಯೊಂದಿಗೆ ಜಗಳವಾಡಿದ ಸ್ವಲ್ಪ ಸಮಯದ ನಂತರ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಎಂದು ನೆಟ್ಟಿಗರು ಬಣ್ಣಿಸಿದ್ದು, ಇದು ಇಂಟರ್ನೆಟ್ನ ಕಲ್ಪನೆಗೆ ಉತ್ತೇಜನ ನೀಡಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಕಾಮೆಂಟ್ ವಿಭಾಗವನ್ನು ಹಾಸ್ಯ ಮತ್ತು ಮಾನವ ಸಂಬಂಧಗಳಿಗೆ ಹೋಲಿಕೆ ಮಾಡಿದ್ದಾರೆ. ಒಬ್ಬ ಬಳಕೆದಾರ "ನನ್ನ ಹೆಂಡತಿಯೊಂದಿಗೆ ಅತಿಯಾಗಿ ತಮಾಷೆ ಮಾಡಲು ಹೋಗಿ, ಅದು ಕೊನೆಗೆ ಸಣ್ಣ ಜಗಳದಲ್ಲಿ ಮುಕ್ತಾಯವಾದಾಗ ನನ್ನ ಪರಿಸ್ಥಿತಿ ಹೀಗೆ ಇರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ನನ್ನ ಗಂಡ ನನ್ನ ಜೊತೆಗಿನ ವಾದದಲ್ಲಿ ಸೋತು ಬೇರೆ ಕೋಣೆಗೆ ಹೋದಾಗ ಅದೇ ರೀತಿ ವರ್ತಿಸುತ್ತಾರೆ. ಇದು ಸಾರ್ವತ್ರಿಕ ಎಂದು ಪ್ರತಿಕ್ರಿಯಿಸಿದ್ದಾರೆ.
ಕಿಯೋಮಾಸ ನಿಜವಾಗಿಯೂ ತನ್ನ ಸಂಗಾತಿಯ ಮುನಿಸಿನ ಬಗ್ಗೆ ಬೇಸರಗೊಂಡು ಯೋಚಿಸುತ್ತಿದ್ದಾನೋ ಅಥವಾ ಸುಮ್ಮನೆ ಆರಾಮವಾಗಿ ವಿರಾಮ ತೆಗೆದುಕೊಳ್ಳುತ್ತಿದ್ದಾನೋ ಆ ದೇವರಿಗೇ ಗೊತ್ತು. ಆದರೆ, ಇಂಟರ್ನೆಟ್ ಜಗತ್ತು ಮಾತ್ರ ಈಗಾಗಲೇ ತನ್ನದೇ ಆದ ತೀರ್ಪು ನೋಡಿ ಜಗತ್ತನ್ನು ಬೆರಗುಗೊಳಿಸಿದೆ (ಏಜೆನ್ಸೀಸ್).