Google Maps (ಚಿತ್ರ X) 
ದೇಶ

ಗೂಗಲ್ ಮ್ಯಾಪ್ಸ್‌ಗೆ ಎಐ ಟಚ್​: ಇನ್ಮುಂದೆ ರೂಟ್ ಅಷ್ಟೇ ಅಲ್ಲ, ಫುಡ್ ಆರ್ಡರ್, ಹೋಟೆಲ್ ಬುಕಿಂಗ್ ಕೂಡ ಫಾಸ್ಟ್! Google Maps

Google Maps: ಗೂಗಲ್ ಮ್ಯಾಪ್ಸ್ ಎಂದರೆ ಕೇವಲ ಸರಿಯಾದ ದಾರಿ ಹಾಗೂ ಸಂಚಾರ ಮಾರ್ಗ ತೋರಿಸುವ ಆ್ಯಪ್ ಎಂದಷ್ಟೇ ಭಾವಿಸಿದ್ದರೆ ನಿಮ್ಮ ಆಲೋಚನೆಯನ್ನು ಇಂದೇ ಬದಲಾಯಿಸಿಕೊಳ್ಳಿ. ಪ್ರಯಾಣಿಕರು ಹಾಗೂ ಆಹಾರ ಪ್ರಿಯರ ಅನುಭವವನ್ನೇ ಸಂಪೂರ್ಣವಾಗಿ ಬದಲಾಯಿಸಲು ಗೂಗಲ್ ಮ್ಯಾಪ್ಸ್ ಇದೀಗ ಕೃತಕ ಬುದ್ಧಿಮತ್ತೆ (AI) ಆಧಾರಿತ ಅತ್ಯಾಧುನಿಕ ಫೀಚರ್‌ಗಳನ್ನು ಪರಿಚಯಿಸಿದೆ. ಇನ್ಮುಂದೆ ನೀವು ಮನೆ ಅಥವಾ ಪ್ರವಾಸಕ್ಕೆ ಹೊರಡುವ ಮುನ್ನವೇ ಆಹಾರ ಆರ್ಡರ್ ಮಾಡುವುದು ಮತ್ತು ಹೋಟೆಲ್ ರೂಮ್ ಬುಕ್ ಮಾಡುವುದು ಅತ್ಯಂತ ಸರಳವಾಗಲಿದೆ.

ಆಸ್ಕ್ ಮ್ಯಾಪ್ಸ್' ಮೂಲಕ ಆಹಾರ ಆರ್ಡರ್ ಹಾಗೂ ಹೋಟೆಲ್ ಬುಕಿಂಗ್!

ನೀವು ವಿದೇಶದಲ್ಲಿದ್ದಾಗ ಅಥವಾ ಹೊಸ ಊರಿಗೆ ಹೋದಾಗ ದಿಢೀರನೆ ಬಟರ್ ಚಿಕನ್​, ಕಾಜು ಮಸಾಲ ಅಥವಾ ನಿಮಗಿಷ್ಟವಾದ ಖಾದ್ಯ ತಿನ್ನಬೇಕು ಎನಿಸಿದರೆ ಝೊಮೆಟೋ, ಸ್ವಿಗ್ಗಿ ಆ್ಯಪ್​ ಹುಡುಕುವ ಅಗತ್ಯವಿಲ್ಲ. ಬದಲಿಗೆ ಗೂಗಲ್ ಮ್ಯಾಪ್ಸ್‌ನ 'ಆಸ್ಕ್ ಮ್ಯಾಪ್ಸ್' (Ask Maps) ಫೀಚರ್‌ನಲ್ಲಿ ನೇರವಾಗಿ ಕೇಳಿದರೆ ಸಾಕು.

ಏನಿದು ಹೊಸ ಫೀಚರ್​? ಹೇಗೆ ಸಹಾಯ ಮಾಡುತ್ತೆ!

ಆಹಾರ ಆರ್ಡರ್: ನೀವು ಪ್ರಯಾಣಿಸುತ್ತಿರುವ ದಾರಿಯಲ್ಲಿ ನಿಮಗೆ ಬೇಕಾಗಿರುವ ಆಹಾರವನ್ನು ಅತ್ಯತ್ತಮ ಉಪಹಾರ ಗೃಹಗಳಲ್ಲಿ ಮ್ಯಾಪ್​ ಹುಡುಕಿಕೊಡುತ್ತದೆ. ಆದಾಗ್ಯೂ, ರೆಸ್ಟೋರೆಂಟ್‌ ತೆರೆದಿರುವ ಸಮಯ, ನಿಮ್ಮ ಆಹಾರದ ಆದ್ಯತೆಗಳನ್ನು ಗಮನಿಸಿ ಸೂಕ್ತ ಜಾಗವನ್ನು ಶಿಫಾರಸು ಮಾಡುತ್ತದೆ. ಅಷ್ಟೇ ಅಲ್ಲ, ನೀವು ಆಯ್ಕೆ ಮಾಡಿದ ಖಾದ್ಯವನ್ನು ನೇರವಾಗಿ ಕಾರ್ಟ್‌ಗೆ (Cart) ಸೇರಿಸಲು ನೆರವಾಗುತ್ತದೆ.
ಸುಲಭ ಹೋಟೆಲ್ ಬುಕಿಂಗ್: ಹೋಟೆಲ್‌ಗಳಿಗಾಗಿ ಹತ್ತಾರು ಫಿಲ್ಟರ್​ಗಳ ಬದಲಿಗೆ "ಕ್ಯಾಲಿಫೋರ್ನಿಯಾದ ಬೀಚ್ ಬಳಿ ಇರುವ ಬಜೆಟ್ ಸ್ನೇಹಿ ಹೋಟೆಲ್ ಹುಡುಕಿ" ಎಂದು ನೇರವಾಗಿ ಟೈಪ್ ಮಾಡಬಹುದು. ಆಗ ಗೂಗಲ್ ಮ್ಯಾಪ್ಸ್ ತಕ್ಷಣವೇ ನಿಮಗೆ ಸೂಕ್ತವಾಗುವಂತಹ ಕೊಠಡಿಯನ್ನು ಹುಡುಕಿಕೊಡುತ್ತದೆ.
ಸ್ಥಳೀಯ ಕಾರ್ಯಕ್ರಮಗಳ ಮಾಹಿತಿ: ಪ್ರವಾಸದ ಸ್ಥಳದಲ್ಲಿ ನಡೆಯುವ ಸಂಗೀತ ಸಂಜೆ, ಹಬ್ಬಗಳು ಹಾಗೂ ಪ್ರವಾಸಿ ತಾಣಗಳ ಮಾಹಿತಿಯ ಜೊತೆಗೆ ಟಿಕೆಟ್ ಬುಕ್ ಮಾಡುವ ಲಿಂಕ್‌ಗಳನ್ನು ಸಹ ಒದಗಿಸುತ್ತದೆ.
ಈ 'ಆಸ್ಕ್ ಮ್ಯಾಪ್ಸ್' ಫೀಚರ್ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಇಂಡೋನೇಷ್ಯಾ, ಜಪಾನ್ ಮತ್ತು ಮೆಕ್ಸಿಕೋ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಾಗುತ್ತಿದೆ.

ಭಾರತೀಯ ಬಳಕೆದಾರರಿಗೆ 'ಹಿಂದಿ ಬೆಂಬಲ' ಮತ್ತು ವಿಶೇಷ ಫೀಚರ್‌ಗಳು!

ಭಾರತೀಯ ಗ್ರಾಹಕರ ಅನುಕೂಲಕ್ಕಾಗಿ ಗೂಗಲ್ ಕೆಲವು ವಿಶೇಷ ಮತ್ತು ಉಪಯುಕ್ತ ಅಪ್‌ಡೇಟ್‌ಗಳನ್ನು ತಂದಿದೆ
ಹಿಂದಿ ಭಾಷೆಯ ಬೆಂಬಲ: ಇನ್ಮುಂದೆ ರೆಸ್ಟೋರೆಂಟ್‌ಗಳು, ಪ್ರವಾಸಿ ತಾಣಗಳು ಅಥವಾ ಸ್ಥಳಗಳ ಮಾಹಿತಿಗಾಗಿ ಇಂಗ್ಲಿಷ್ ಬದಲಿಗೆ ನೀವು ಹಿಂದಿ ಭಾಷೆಯಲ್ಲೂ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಬಹುದು.
ಪರ್ಸನಲ್ ಇಂಟೆಲಿಜೆನ್ಸ್ : ಇದು ಜಿಮೇಲ್ (Gmail) ನಂತಹ ನಿಮ್ಮ ಗೂಗಲ್ ಸೇವೆಗಳೊಂದಿಗೆ ಲಿಂಕ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಇನ್‌ಬಾಕ್ಸ್‌ನಲ್ಲಿರುವ ಹೋಟೆಲ್ ಅಥವಾ ಫ್ಲೈಟ್ ಬುಕಿಂಗ್ ಮಾಹಿತಿಯನ್ನು ಆಧರಿಸಿ, ನಿಮ್ಮ ಪ್ರವಾಸದ ಯೋಜನೆಯನ್ನು ಇನ್ನಷ್ಟು ಸರಳಗೊಳಿಸಿ ಸೂಕ್ತ ಸಲಹೆಗಳನ್ನು ನೀಡುತ್ತದೆ.
ರಿಯಲ್-ಟೈಮ್ ಟ್ರಾನ್ಸಿಟ್ ಅಪ್‌ಡೇಟ್: ಬಸ್, ಮೆಟ್ರೋ, ರೈಲು ಹಾಗೂ ದೋಣಿ ಸೇವೆಗಳ ಪ್ರಸ್ತುತ ಸ್ಥಿತಿಗತಿ ಹಾಗೂ ಲೈಲ್​ ಮಾಹಿತಿಯನ್ನು ಒದಗಿಸುತ್ತದೆ.
ಒಟ್ಟಾರೆಯಾಗಿ, ಕೇವಲ ನ್ಯಾವಿಗೇಷನ್ ಆ್ಯಪ್ ಆಗಿ ಪ್ರಯಾಣ ಆರಂಭಿಸಿದ್ದ ಗೂಗಲ್ ಮ್ಯಾಪ್ಸ್, ಇಂದಿನ ದಿನಗಳಲ್ಲಿ ಪ್ರವಾಸಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ-ಪುಟ್ಟ ಕೆಲಸಗಳನ್ನು ತಾನೇ ನಿರ್ವಹಿಸುವ ಮಟ್ಟಿಗೆ ಬುದ್ಧಿವಂತ ಡಿಜಿಟಲ್ ಮಾರ್ಗದರ್ಶಿಯಾಗಿ ರೂಪುಗೊಂಡಿದೆ (ಏಜೆನ್ಸೀಸ್​).