ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ ಗೂಡ್ಸ್ ರೈಲಿನ ಎಂಟು ವ್ಯಾಗನ್‌ಗಳು ಹಳಿ ತಪ್ಪಿ ಬಿದ್ದಿದ್ದು(Train derails), ಹಲವು ರೈಲುಗಳ ಸಂಚಾರ ರದ್ದಾಗಿದ್ದು, ಹಲವು ರೈಲಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಮಧ್ಯರಾತ್ರಿ 11.40ರ ಸುಮಾರಿಗೆ ಲಹಾಬನ್-ಸಿಮುಲ್ತಲಾ ನಿಲ್ದಾಣಗಳ ನಡುವೆ ಘಟನೆ ನಡೆದಿದೆ. ರೈಲು ಅಸಾನ್ಸನ್‌ನಿಂದ ಸೀತಾಮರ್ಹಿಗೆ ತೆರಳುತ್ತಿದ್ದಾ ಅಪಘಾತ ಸಂಭವಿಸಿದೆ. ಸಿಮುಲ್ತಾಲಾ-ತೆಲ್ವಾ ಹಾಲ್ಟ್‌ನಲ್ಲಿರುವ ಬರುವಾ ನದಿ ಸೇತುವೆಯ ಬಳಿ ರೈಲಿನ 42 ವ್ಯಾಗನ್‌ಗಳಲ್ಲಿ 19 ವ್ಯಾಗನ್‌ಗಳು ಹಳಿ ತಪ್ಪಿ, 10 ನದಿಗೆ ಬಿದ್ದವು, ಎರಡೂ ಮಾರ್ಗಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ. ಅದೃಷ್ಟವಶಾತ್, ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಘಟನೆ ಬಳಿಕ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೂರ್ವ ಮಧ್ಯ ರೈಲ್ವೆಯ ಸಿಪಿಆರ್‌ಒ, ಅಪಘಾತದ ಕಾರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಶನಿವಾರ ರಾತ್ರಿ 11.25 ರ ಸುಮಾರಿಗೆ ಘಟನೆ ನಡೆದಿದೆ. ಇದರಿಂದಾಗಿ ರಾತ್ರಿಯಿಡೀ ಸುಮಾರು ಎರಡು ಡಜನ್ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಅಸನ್ಸೋಲ್, ಮಧುಪುರ ಮತ್ತು ಝಾಝಾ ನಿಲ್ದಾಣಗಳಿಂದ ಅಪಘಾತ ಪರಿಹಾರ ರೈಲುಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಸ್ಥಳದಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಗೂಡ್ಸ್ ರೈಲು ಹಳಿತಪ್ಪಿದ ಕಾರಣ ಹಳಿಗಳಲ್ಲಿ ಅಡಚಣೆ ಉಂಟಾಗಿರುವುದರಿಂದ ಹಲವಾರು ಎಕ್ಸ್‌ಪ್ರೆಸ್ ಮತ್ತು ಇತರ ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ. ಜೊತೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. 12369 ಹೌರಾ-ಡೆಹ್ರಾಡೂನ್ ಕುಂಭ ಎಕ್ಸ್‌ಪ್ರೆಸ್, 13105 ಸೀಲ್ಡಾ-ಬಲ್ಲಿಯಾ ಎಕ್ಸ್‌ಪ್ರೆಸ್, 13030 ಮೊಕಾಮಾ-ಹೌರಾ ಎಕ್ಸ್‌ಪ್ರೆಸ್ ಮತ್ತು ಹಲವಾರು ಮೆಮು ರೈಲುಗಳನ್ನು ರದ್ದುಗೊಳಿಸಲಾಗಿದೆ. ಹಲವಾರು ಎಕ್ಸ್‌ಪ್ರೆಸ್ ರೈಲುಗಳನ್ನು ಧನ್‌ಬಾದ್-ಗಯಾ ಮತ್ತು ಇತರ ಮಾರ್ಗಗಳ ಮೂಲಕ ತಿರುಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ (ಏಜೆನ್ಸೀಸ್).