CM 
ದೇಶ

ತ್ರಿವಳಿ ತಲಾಖ್, ಆಸಿಡ್ ಸಂತ್ರಸ್ತರಿಗೆ ಸಿಹಿ ಸುದ್ದಿ: ಉಚಿತ ಸರ್ಕಾರಿ ಮನೆ ನೀಡಲು CM ಯೋಗಿ ಮಹತ್ವದ ನಿರ್ಧಾರ!

ಯುಪಿ: ಉತ್ತರ ಪ್ರದೇಶದಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರ ನೆರವಿಗೆ CM ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮುಂದಾಗಿದೆ. ತ್ರಿವಳಿ ತಲಾಖ್ ಮತ್ತು ಆಸಿಡ್ ದಾಳಿಗೆ ಒಳಗಾಗಿ ಸ್ವಂತ ಸೂರಿಲ್ಲದೆ ಪರದಾಡುತ್ತಿರುವ ಮಹಿಳೆಯರಿಗೆ ಉಚಿತವಾಗಿ ಸರ್ಕಾರಿ ಪಕ್ಕಾ ಮನೆಗಳನ್ನು ನೀಡಲು ಯೋಗಿ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ಇತ್ತೀಚೆಗೆ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಕುರಿತು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಪ್ರಮುಖ ಯೋಜನೆಗಳಡಿ ಉಚಿತ ಮನೆ ಮತ್ತು ಆರೋಗ್ಯ ಸೇವೆ

ಸ್ವಂತ ಮನೆ: ಶಾಶ್ವತ ವಸತಿ ಇಲ್ಲದ ಸಂತ್ರಸ್ತ ಮಹಿಳೆಯರಿಗೆ 'ಪ್ರಧಾನ ಮಂತ್ರಿ ಆವಾಸ್ ಯೋಜನೆ' ಅಥವಾ 'ಮುಖ್ಯಮಂತ್ರಿ ಆವಾಸ್ ಯೋಜನೆ' ಅಡಿಯಲ್ಲಿ ಉಚಿತವಾಗಿ ಪಕ್ಕಾ ಮನೆಗಳನ್ನು ನೀಡಲಾಗುತ್ತದೆ.
ಉಚಿತ ಆರೋಗ್ಯ ವಿಮೆ: ಈ ಮಹಿಳೆಯರು ಮತ್ತು ಅವರ ಇಡೀ ಕುಟುಂಬಕ್ಕೆ 'ಆಯುಷ್ಮಾನ್ ಭಾರತ್ ಯೋಜನೆ' ಹಾಗೂ 'ಮುಖ್ಯಮಂತ್ರಿ ಜನ ಆರೋಗ್ಯ ಯೋಜನೆ'ಯಡಿ ಉಚಿತ ವೈದ್ಯಕೀಯ ಸೌಲಭ್ಯ ಸಿಗಲಿದೆ.

ಅರ್ಹ ಮಹಿಳೆಯರ ಪಟ್ಟಿ ಸಿದ್ಧತೆ

ಮುಖ್ಯಮಂತ್ರಿಗಳ ಆದೇಶದ ಬೆನ್ನಲ್ಲೇ ಮಹಿಳಾ ಕಲ್ಯಾಣ ಇಲಾಖೆಯು ಕೆಲಸ ಆರಂಭಿಸಿದೆ. ರಾಜ್ಯದಲ್ಲಿರುವ ತ್ರಿವಳಿ ತಲಾಖ್ ಮತ್ತು ಆಸಿಡ್ ದಾಳಿಗೆ ಒಳಗಾದ ಮಹಿಳೆಯರ ಸಂಪೂರ್ಣ ವಿವರ ಹಾಗೂ ದಾಖಲೆಗಳನ್ನು ಕಲೆಹಾಕಲಾಗುತ್ತಿದೆ. ನಿಜವಾದ ಸಂತ್ರಸ್ತರು ಯಾರು ಎಂಬುದನ್ನು ಪರಿಶೀಲಿಸಿ, ಅವರಿಗೆ ನೇರವಾಗಿ ಸರ್ಕಾರದ ಈ ಯೋಜನೆಗಳ ಲಾಭ ಸಿಗುವಂತೆ ಮಾಡಲಾಗುತ್ತದೆ.

ಸರ್ಕಾರದ ಉದ್ದೇಶವೇನು?

ತ್ರಿವಳಿ ತಲಾಖ್ ಮತ್ತು ಆಸಿಡ್ ದಾಳಿಯಂತಹ ಕಠಿಣ ಪರಿಸ್ಥಿತಿ ಎದುರಿಸಿದ ಮಹಿಳೆಯರು ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿರುತ್ತಾರೆ. ಕಾಗದ ಪತ್ರಗಳ ಸಮಸ್ಯೆಯಿಂದ ಅಥವಾ ಮಾಹಿತಿ ಕೊರತೆಯಿಂದ ಯಾವುದೇ ಒಬ್ಬ ಅರ್ಹ ಮಹಿಳೆಯೂ ಈ ಯೋಜನೆಯಿಂದ ವಂಚಿತರಾಗಬಾರದು ಎನ್ನುವುದು ಸರ್ಕಾರದ ಮುಖ್ಯ ಗುರಿಯಾಗಿದೆ. ವಸತಿ ಮತ್ತು ಆರೋಗ್ಯ ಭದ್ರತೆ ನೀಡುವ ಮೂಲಕ ಅವರ ಜೀವನಕ್ಕೆ ಧೈರ್ಯ ತುಂಬಲು ಯೋಗಿ ಸರ್ಕಾರ ಈ ಮಹತ್ತರ ಹೆಜ್ಜೆ ಇಟ್ಟಿದೆ,(ಏಜೆನ್ಸೀಸ್​).