ಬಂಗಾಳದಲ್ಲಿ ದೀದಿಗೆ ಸುವೇಂದು ಶಾಕ್! ಟಿಎಂಸಿ ಕಾಲದ ಭ್ರಷ್ಟಾಚಾರ, ಮಹಿಳಾ ಕಿರುಕುಳ ತನಿಖೆಗೆ ಹೈಕೋರ್ಟ್ ಜಡ್ಜ್‌ಗಳ ಮಹಾ ಸಮಿತಿ ರಚನೆ!
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ದಿನದಿಂದಲೂ ಹಿಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಠಿಣ ನಿಲುವು ತಳೆದಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಸೋಮವಾರ ಮಮತಾ ಬ್ಯಾನರ್ಜಿ(Bengal Corruption Panel) ಪಾಳಯಕ್ಕೆ ಭಾರಿ ಆಘಾತ ನೀಡಿದ್ದಾರೆ. ಮಮತಾ ಆಡಳಿತಾವಧಿಯಲ್ಲಿ ನಡೆದ ಕೋಟ್ಯಂತರ ರೂಪಾಯಿಗಳ ಆರ್ಥಿಕ ಅಕ್ರಮಗಳು, ಕಟ್ ಮನಿ ದಂಧೆಗಳು ಹಾಗೂ ರಾಜ್ಯಾದ್ಯಂತ ಹೆಣ್ಣುಮಕ್ಕಳ ಮೇಲೆ ನಡೆದ ಭೀಕರ ಅತ್ಯಾಚಾರ ಮತ್ತು ದೌರ್ಜನ್ಯಗಳ ತನಿಖೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಎರಡು ಹೈ-ಪ್ರೊಫೈಲ್ ತನಿಖಾ ಸಮಿತಿಗಳನ್ನು ರಚಿಸುವುದಾಗಿ ಸುವೇಂದು ಅಧಿಕಾರಿ ಘೋಷಿಸಿದ್ದಾರೆ.
ಈ ಬಗ್ಗೆ ರಾಜ್ಯ ಸಚಿವ ಸಂಪುಟವು ಈ ಮಹತ್ವದ ನಿರ್ಧಾರಕ್ಕೆ ಅಧಿಕೃತ ಅನುಮೋದನೆ ನೀಡಿದ್ದು, ಜೂನ್ 1 ರಿಂದಲೇ ಎರಡೂ ಸಮಿತಿಗಳು ತಮ್ಮ ಸಿಂಹಾವಲೋಕನ ಹಾಗೂ ತನಿಖಾ ಕಾರ್ಯಾಚರಣೆಯನ್ನು ಆರಂಭಿಸಲಿವೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಮೊದಲ ಸಮಿತಿ: ಮಮತಾ ಸರ್ಕಾರದ ಭ್ರಷ್ಟಾಚಾರ ಮತ್ತು 'ಕಟ್ ಮನಿ' ಬೇಟೆ!
ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಪ್ರಕಟಣೆಯ ಪ್ರಕಾರ, ಮೊದಲ ತನಿಖಾ ಸಮಿತಿಯು ತೃಣಮೂಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಸಾಂಸ್ಥಿಕ ಮತ್ತು ಆರ್ಥಿಕ ಅಕ್ರಮಗಳ ತನಿಖೆ ನಡೆಸಲಿದೆ. ಪ್ರತಿಯೊಂದು ಸರ್ಕಾರಿ ಯೋಜನೆಗಳಲ್ಲೂ ಸಾರ್ವಜನಿಕರಿಂದ ಮತ್ತು ಉದ್ಯಮಿಗಳಿಂದ ಟಿಎಂಸಿ ನಾಯಕರು ವಸೂಲಿ ಮಾಡುತ್ತಿದ್ದರು ಎನ್ನಲಾದ ಕಟ್ ಮನಿ ವ್ಯವಸ್ಥೆಯ ಅಸಲಿ ಮುಖವಾಡವನ್ನು ಈ ಸಮಿತಿ ಬಯಲಿಗೆಳೆಯಲಿದೆ.
ಈ ಅತ್ಯಂತ ಪ್ರಭಾವಿ ಸಮಿತಿಯ ನೇತೃತ್ವವನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿಸ್ವಜಿತ್ ಬಸು ಅವರಿಗೆ ವಹಿಸಲಾಗಿದ್ದು, ಹಿರಿಯ ಐಪಿಎಸ್ ಅಧಿಕಾರಿ ಜಯರಾಮನ್ ಅವರು ಈ ಸಮಿತಿಯ ಸದಸ್ಯ-ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಎರಡನೇ ಸಮಿತಿ: ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ತನಿಖೆ!
ಹಿಂದಿನ ಆಡಳಿತದಲ್ಲಿ ಇಡೀ ಬಂಗಾಳವನ್ನು ತಲ್ಲಣಗೊಳಿಸಿದ್ದ ಮಹಿಳೆಯರ ಮತ್ತು ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ಹಾಗೂ ಅತ್ಯಾಚಾರ ಪ್ರಕರಣಗಳನ್ನು ಮರುತನಿಖೆ ಮಾಡಲು ಎರಡನೇ ಪ್ರಬಲ ಸಮಿತಿಯನ್ನು ರಚಿಸಲಾಗಿದೆ. ಸಂದೇಶ್‌ಖಾಲಿ ಸೇರಿದಂತೆ ಬಂಗಾಳದ ವಿವಿಧ ಮೂಲೆಗಳಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಸತ್ಯಾಸತ್ಯತೆಯನ್ನು ಈ ಸಮಿತಿ ಹೊರಹಾಕಲಿದೆ.
ಈ ಸೂಕ್ಷ್ಮ ಸಮಿತಿಯ ಅಧ್ಯಕ್ಷತೆಯನ್ನು ನಿವೃತ್ತ ನ್ಯಾಯಾಧೀಶರಾದ ಸಮಾಪ್ತಿ ಚಟರ್ಜಿ ವಹಿಸಲಿದ್ದಾರೆ. ಅತ್ಯಂತ ಕಠಿಣ ಅಧಿಕಾರಿ ಎಂದೇ ಹೆಸರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ದಮಯಂತಿ ಸೇನ್ ಅವರನ್ನು ಈ ಸಮಿತಿಯ ಸದಸ್ಯ-ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ತಿಲ್ಜಾಲಾ ದಂಗಲ್ ಬೆನ್ನಲ್ಲೇ ಗೂಂಡಾಗಳಿಗೆ ಸಿಎಂ ಸುವೇಂದು ವಾರ್ನಿಂಗ್!
ಕೋಲ್ಕತ್ತಾದ ತಿಲ್ಜಾಲಾ ಪ್ರದೇಶದಲ್ಲಿ ಕಾನೂನುಬಾಹಿರ ಕಟ್ಟಡಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ ನಡೆಯುತ್ತಿದ್ದಾಗ ಭದ್ರತಾ ಪಡೆಗಳು ಮತ್ತು ಪೊಲೀಸರ ಮೇಲೆ ಗೂಂಡಾಗಳು ಭೀಕರ ಕಲ್ಲು ತೂರಾಟ ನಡೆಸಿದ್ದರು. ಈ ಘಟನೆಯ ಬೆನ್ನಲ್ಲೇ ತೀವ್ರ ಆಕ್ರೋಶ ಹೊರಹಾಕಿರುವ ಮುಖ್ಯಮಂತ್ರಿ ಸುವೇಂದು, ಬಂಗಾಳದ ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಮಾಡುವ ಹಾಗೂ ಪೊಲೀಸರ ಮೇಲೆ ಕೈಮಾಡುವ ಗೂಂಡಾಗಳ ವಿರುದ್ಧ ತಮ್ಮ ಸರ್ಕಾರ ಝೀರೋ ಟಾಲರೆನ್ಸ್ ನೀತಿ ಅನುಸರಿಸಲಿದೆ ಎಂದು ಗುಡುಗಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಪೊಲೀಸರು ಇನ್ನು ಮುಂದೆ ಕೇವಲ ಮೂಕಪ್ರೇಕ್ಷಕರಾಗಿ ಕೂರುವುದಿಲ್ಲ, ಕಾನೂನಿನ ಪ್ರಕಾರ ಅತ್ಯಂತ ಕಠಿಣವಾಗಿ ಕ್ರಮ ಕೈಗೊಳ್ಳಲಿದ್ದಾರೆ. ಪೊಲೀಸರ ಮೇಲೆ ಗೂಂಡಾಗಳು ಹಲ್ಲೆ ನಡೆಸುತ್ತಿದ್ದರೆ, ಇತ್ತ ಗೃಹ ಸಚಿವರು ಎಸಿ ರೂಂನಲ್ಲಿ ಕುಳಿತು ತಮಾಷೆ ನೋಡುತ್ತಿದ್ದ ಆ ಹಳೆಯ ದಿನಗಳು ಈಗ ಕಳೆದುಹೋಗಿವೆ, ಆ ದಿನಗಳನ್ನು ಈಗ ಮರೆತುಬಿಡಿ ಎಂದಿದ್ದಾರೆ.
ಇಂದಿನಿಂದ ಬಂಗಾಳದ ಮಣ್ಣಿನಿಂದ ಗೂಂಡಾಗಿರಿಯನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೊಗೆಯಲಾಗುವುದು. ಈ ಹೊಸ ಸರ್ಕಾರ ತಪ್ಪು ಮಾಡಿದವರ ವಿರುದ್ಧ ತಕ್ಷಣ ಆಕ್ಷನ್ ತೆಗೆದುಕೊಳ್ಳುತ್ತದೆ ಎಂಬ ಕಠಿಣ ಸಂದೇಶ ಪ್ರತಿಯೊಬ್ಬ ಗೂಂಡಾಗೂ ತಲುಪಬೇಕು ಎಂದು ಮಮತಾ ಅವರ ಹಳೆಯ ಆಡಳಿತ ಶೈಲಿಯನ್ನು ಅಣಕಿಸುತ್ತಾ ಸಿಎಂ ಸುವೇಂದು ತೀವ್ರ ಎಚ್ಚರಿಕೆ ನೀಡಿದ್ದಾರೆ,(ಏಜೆನ್ಸೀಸ್).