Commonwealth Games 2026 > ಬಂಗಾರದ ಶನಿವಾರ; ಭಾರತಕ್ಕೆ ಅಷ್ಟ ಸ್ವರ್ಣ ಸಂಭ್ರಮ 
ದೇಶ

ಬಂಗಾರದ ಶನಿವಾರ; ಭಾರತಕ್ಕೆ ಅಷ್ಟ ಸ್ವರ್ಣ ಸಂಭ್ರಮ

ಗ್ಲಾಸ್ಗೋ: ಕಾಮನ್ವೆಲ್ತ್ ಗೇಮ್ಸ್ ಮುಕ್ತಾಯದ ಹಂತದಲ್ಲಿ ಭಾರತ ಭರ್ಜರಿ ಪದಕ ಬೇಟೆಯಾಡಿದ್ದು, ಶನಿವಾರ ಒಂದೇ ದಿನ 8 ಚಿನ್ನದ 3 ಪದಕಗಳನ್ನು ಗೆದ್ದು ವಿಜೃಂಭಿಸಿದೆ. ಕ್ರೀಡಾಸ್ಪರ್ಧೆಯ 9ನೇ ದಿನ ಭಾರತ ಒಟ್ಟು 15 (8 ಚಿನ್ನ, 5 ಬೆಳ್ಳಿ, 2 ಕಂಚು) ಪದಕಗಳನ್ನು ಗೆದ್ದುಕೊಂಡಿತು.

ಶುಕ್ರವಾರ ರಾತ್ರಿ 1 ಬೆಳ್ಳಿ, 2 ಕಂಚು ಒಲಿಸಿಕೊಂಡಿದ್ದ ಭಾರತ ಈಗ 13 ಚಿನ್ನ, 17 ಬೆಳ್ಳಿ, 8 ಕಂಚಿನ ಸಹಿತ ಒಟ್ಟು 38 4ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಈ ಮೂಲಕ ಬ್ಯಾಡ್ಮಿಂಟನ್, ಶೂಟಿಂಗ್, ಕುಸ್ತಿ, ಹಾಕಿ, ಟಿ20 ಕ್ರಿಕೆಟ್‌ನಂಥ ತನ್ನ ಪ್ರಾಬಲ್ಯದ ಪ್ರಮುಖ ಕ್ರೀಡೆಗಳ ಗೈರಿನಲ್ಲೂ ಭಾರತ ಗ್ಲಾಸ್ಕೋದಲ್ಲಿ ಭರ್ಜರಿ ಪದಕ ಬೇಟೆಯಾಡಿದೆ. ಈ ಮೂಲಕ 2030ರಲ್ಲಿ ತನ್ನ ಅತಿಥ್ಯದಲ್ಲೇ ನಡೆಯಲಿರುವ ಮುಂದಿನ ಆವೃತ್ತಿಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸಿಕೊಂಡಿದೆ.
ಬಾಕ್ಸಿಂಗ್‌ನಲ್ಲಿ ಸಚಿನ್ ಸಿವಾಚ್, ಅಂಕುಶ್ ಪಾಂಘಲ್, ಪ್ರೀತಿ ಪವಾರ್, ಜಾಸ್ಮಿನ್ ಲಂಬೋರಿಯಾ, ಸಾಕ್ಷಿ ಚೌಧರಿ, ಪ್ರಿಯಾ ಘಂಘಾಸ್, ಅರುಂಧತಿ ಚೌಧರಿ ಚಿನ್ನದ ಪದಕ ಗೆದ್ದರೆ, ಜಾದುಮಣಿ ಸಿಂಗ್, ನರೇಂದರ್ ಬೆರ್ವಾಲ್, ಲವಿನಾ ಬೋರ್ಗೋಹೈನ್ ರಜತಕ್ಕೆ ಸಮಾಧಾನ ಕಂಡರು. ಪ್ಯಾರಾ ಶಾಟ್‌ಪುಟ್‌ನಲ್ಲಿ ಸೋಮನ್ ರಾಣಾ ಚಿನ್ನ, ಶುಭಂ ಜುಯಲ್ ಬೆಳ್ಳಿ ಗೆದ್ದರು. ಟ್ರಿಪಲ್ ಜಂಪ್‌ನಲ್ಲಿ ಪ್ರವೀಣ್ ಚಿತ್ರವೇಲ್ ಬೆಳ್ಳಿ, ನೆಲ್ವ ಪ್ರಭು ಕಂಚು ಜಯಿಸಿದರು. ಜುಡೋದಲ್ಲಿ ಉನ್ನತಿ ಶರ್ಮ ಕಂಚು ಒಲಿಸಿಕೊಂಡರು. ಇದಕ್ಕೆ ಮುನ್ನ ಶುಕ್ರವಾರ ರಾತ್ರಿ ಜಾವೆಲಿನ್ ತಾರೆ ನೀರಜ್ ಚೋಪ್ರಾ ಬೆಳ್ಳಿ ಜಯಿಸಿದ್ದರೆ, ಯಶ್‌ವೀರ್ ಸಿಂಗ್ ಈ ಸ್ಪರ್ಧೆಯಲ್ಲಿ ಕಂಚು ಗೆದ್ದರು. ತೇಜಸ್ವಿನ್ ಶಂಕರ್ ಕಂಚು ಗೆದ್ದು, ಡೆಕಾಫ್ಲಾನ್‌ನಲ್ಲಿ ಪದಕ ಒಲಿಸಿಕೊಂಡ ಮೊದಲ ಭಾರತೀಯರೆನಿಸಿದರು.

ಸಚಿನ್, ಅಂಕುಶ್‌ಗೆ ಸ್ವರ್ಣ ಪದಕ

ಹರಿಯಾಣದ 23 ವರ್ಷದ ಬಾಕ್ಸರ್ ಸಚಿನ್ ಸಿವಾಚ್ ಪುರುಷರ 60 ಕೆಜಿ ವಿಭಾಗದ ಫೈನಲ್‌ನಲ್ಲಿ ನಮೀಬಿಯಾದ ಟ್ರಯಾಗೇನ್ ಮಾರ್ನಿಂಗ್ ವಿರುದ್ಧ 3-2 ಅಂತರದಿಂದ ಗೆದ್ದು ಚಿನ್ನಕ್ಕೆ ಕೊರಳೊಡ್ಡಿದರು. ಅಂಕುಶ್ ಪಾಂಗಲ್ 80 ಕೆಜಿ ವಿಭಾಗದ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಡಿಮೆಜಿ ಶಿಟ್ಟು ವಿರುದ್ಧ 4-1 ಅಂತರದಿಂದ ಜಯಿಸಿದರು. 31 ವರ್ಷದ ನರೇಂದರ್ ಬೆರ್ವಾಲ್ 90+ಕೆಜಿ ವಿಭಾಗದ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಡೇಮರ್ ಥಾಮಸ್ ವಿರುದ್ಧ 1-4 ಅಂತರದಿಂದ ಸೋತು ರಜತಕ್ಕೆ ತೃಪ್ತಿಪಟ್ಟರು.

ಜಾದುಮಣಿ, ಲವಿನಾಗೆ ರಜತ

ಮಣಿಪುರದ ಜಾದುಮಣಿ ಸಿಂಗ್ ಪುರುಷರ 55 ಕೆಜಿ ವಿಭಾಗದ ಫೈನಲ್‌ನಲ್ಲಿ ದಿಟ್ಟ ಹೋರಾಟ ತೋರಿದರೂ, ಚಿನ್ನದ ಪದಕದಿಂದ ವಂಚಿತರಾಗಿ ರಜತ ಪದಕಕ್ಕೆ ಸಮಾಧಾನ ಕಂಡರು. ಜಾನುಮಣಿ ಆಸ್ಟ್ರೇಲಿಯಾದ ಜೇ ಡಿಕ್ಷನ್ ವಿರುದ್ಧ 0-5 ಅಂತರದಿಂದ ಪರಾಭವಗೊಂಡರು. ಒಲಿಂಪಿಕ್ಸ್ ಪದಕ ವಿಜೇತೆ ಅಸ್ಸಾಂನ ಲವಿನಾ ಬೋರ್ಗೋಹೈನ್ ಮಹಿಳೆಯರ 75 ಕೆಜಿ ವಿಭಾಗದ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ವಿಮ್ಯಾ ಸುಯಿ ಗ್ರೀನ್‌ ಟೀ ವಿರುದ್ಧ 1-4 ಅಂತರದಿಂದ ಪರಾಭವಗೊಂಡು ರಜತಕ್ಕೆ ತೃಪ್ತಿಪಟ್ಟರು.

ಜುಡೋದಲ್ಲಿ ಉನ್ನತಿಗೆ ಕಂಚು

ಜುಡೋ ಸ್ಪರ್ಧೆಯ ಮೊದಲ ದಿನ 2 ಚಿನ್ನ, 1 ಬೆಳ್ಳಿ ಗೆದ್ದು ಇತಿಹಾಸ ಬರೆದಿದ್ದ ಭಾರತ 2ನೇ ದಿನ 1 ಕಂಚಿಗೆ ತೃಪ್ತಿಪಟ್ಟಿತು. ಉನ್ನತಿ ಶರ್ಮ ಮಹಿಳೆಯರ 63 ಕೆಜಿ ವಿಭಾಗದಲ್ಲಿ ಕಂಚಿನ ಹಾರಕ್ಕೆ ಕೊರಳೊಡ್ಡಿದರು. ಉನ್ನತಿ ಕಂಚಿನ ಪದಕದ ಹೋರಾಟದಲ್ಲಿ ದಕ್ಷಿಣ ಆಫ್ರಿಕಾದ ಕ್ಲೋಸ್ಟರ್ ವಿರುದ್ಧ ಇಪ್ಪನ್ ಮೂಲಕ ಗೆಲುವು ಸಾಧಿಸಿದರು. ಅವರು ಸೆಮೀಸ್‌ನಲ್ಲಿ ಆಸ್ಟ್ರೇಲಿಯಾದ ಸಾಯಾ ಮಿಡಲ್‌ಟನ್ ವಿರುದ್ಧ ಇಪ್ಪನ್ ಮೂಲಕ ಪರಾಭವಗೊಂಡಿದ್ದರು. ಪುರುಷರ 81 ಕೆಜಿ ವಿಭಾಗದಲ್ಲಿ ಭಾರತದ ಹರ್ಷ್ ಟೋಕಸ್ ಕಂಚಿನ ಪದಕದ ಹೋರಾಟದಲ್ಲಿ ಸೋತರು. ಅವರು ಆಸೀಸ್‌ ಕೀಶಿನ್ ಓಚಿ ವಿರುದ್ಧ ಶರಣಾದರು. ಮಹಿಳೆಯರ 70 ಕೆಜಿ ವಿಭಾಗದಲ್ಲಿ ಇನುನ್‌ಗಂಬಿ ತಖೆಲ್ಲಂಬಮ್ ಮತ್ತು ಪುರುಷರ -90 ಕೆಜಿ ವಿಭಾಗದಲ್ಲಿ ಕರಣ್ ಜೀತ್ ಸಿಂಗ್ ಮಾನ್ ರಿಪಷಾಷ್ ಸುತ್ತಿನಲ್ಲಿ ಸೋಲು ಅನುಭವಿಸಿದರು.

ಪ್ರೀತಿ, ಪ್ರಿಯಾ, ಸಾಕ್ಷಿ ಸಹಿತ ಐವರು ಮಹಿಳಾ ಬಾಕ್ಟರ್‌ಗಳಿಂದ ಚಿನ್ನದ ಪಂಚ್

ಪ್ರೀತಿ ಪವಾರ್, ಜಾಸ್ಮಿನ್ ಲಂಬೋರಿಯಾ, ಸಾಕ್ಷಿ ಚೌಧರಿ, ಪ್ರಿಯಾ ಘಂಘಾಸ್, ಅರುಂಧತಿ ಚೌಧರಿ ಸುಲಭ ಗೆಲುವಿನೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಪ್ರೀತಿ ಪವಾರ್ ಮಹಿಳೆಯರ 54 ಕೆಜಿ ವಿಭಾಗದ ಫೈನಲ್‌ನಲ್ಲಿ ಕೆನಡಾದ ಸ್ಕಾರ್ಲೆಟ್ ಡೆಲ್ಲಡೊ ವಿರುದ್ಧ 5-0ಯಿಂದ ಗೆಲುವು ಸಾಧಿಸಿದರು. ವಿಶ್ವ ಚಾಂಪಿಯನ್ ಜಾಸ್ಮಿನ್ ಮಹಿಳೆಯರ 57 ಕೆಜಿ ವಿಭಾಗದ ಫೈನಲ್‌ನಲ್ಲಿ ಉತ್ತರ ಐರ್ಲೆಂಡ್‌ ಮಿಚೆಲಾ ವಾಲ್ಕ್ ವಿರುದ್ದ 5-0ಯಿಂದ ಜಯ ದಾಖಲಿಸಿದರು. ಹರಿಯಾಣದವರಾದ 22 ವರ್ಷದ ಪ್ರೀತಿ ಮತ್ತು 24 ವರ್ಷದ ಜಾಸ್ಮಿನ್ ಇಬ್ಬರೂ ಭಾರತೀಯ ಸೇನೆಯಲ್ಲಿ ನಯೀಬ್ ಸುಬೇದಾರ್ ಆಗಿದ್ದಾರೆ.
ಜಾಸ್ಮಿನ್ ಅವರ ಮುತ್ತಜ್ಜ 1966 ಮತ್ತು 1970ರ ಏಷ್ಯನ್ ಗೇಮ್ಸ್‌ನಲ್ಲಿ ಬಾಕ್ಸಿಂಗ್‌ನಲ್ಲಿ ಚಿನ್ನ ಜಯಿಸಿದ್ದರು. 2022ರಲ್ಲಿ ಜಾಸ್ಮಿನ್ ಕಂಚು ಜಯಿಸಿದ್ದರು. ಸಾಕ್ಷಿ ಮಹಿಳೆಯರ 51 ಕೆಜಿ ವಿಭಾಗದ ಫೈನಲ್‌ನಲ್ಲಿ ಇಂಗ್ಲೆಂಡ್‌ ರುಬಿ ವೈಟ್ ಎದುರು 5-0ಯಿಂದ ಜಯಿಸಿದರು. ಹರಿಯಾಣದ 22 ವರ್ಷದ ಸಾಕ್ಷಿ, ಭಾರತೀಯ ಸೇನೆಯಲ್ಲಿ ಹವಿಲ್ದಾರ್ ಆಗಿದ್ದಾರೆ. ಪ್ರಿಯಾ 60 ಕೆಜಿ ವಿಭಾಗದ ಫೈನಲ್‌ನಲ್ಲಿ ಕೆನಡಾದ ಅಲ್ -ಅಹ್ಮದೀಹ್ ವಿರುದ್ಧ 4-1 ಅಂತರದಿಂದ ಜಯ ಸಾಧಿಸಿದರು. ರಾಜಸ್ಥಾನದ ಅರುಂಧತಿ 70 ಕೆಜಿ ವಿಭಾಗದ ಫೈನಲ್‌ನಲ್ಲಿ ಇಂಗ್ಲೆಂಡ್‌ ಚಂಟೆಲ್ ರೀಡ್ ವಿರುದ್ದ ಗೆಲುವು ಕಂಡರು. ಬಾಕ್ಸಿಂಗ್‌ನಲ್ಲಿ ಸ್ಪರ್ಧಿಸಿದ 7 ಭಾರತೀಯ ಮಹಿಳೆಯರ ಪೈಕಿ ಐವರು ಚಿನ್ನ, ಒಬ್ಬರು ಬೆಳ್ಳಿ ಪದಕ ಗೆದ್ದರು. ಪರ್ವೀನ್ ಹೂಡಾ ಮಾತ್ರ ಕ್ವಾರ್ಟ‌್ರಫೈನಲ್‌ನಲ್ಲೇ ನಿರ್ಗಮಿಸಿದ್ದರು.

ಪ್ಯಾರಾ ಶಾಟ್‌ಪುಟ್ ಡಬಲ್ ಮೆಡಲ್

ಪ್ಯಾರಾ ಶಾಟ್​​ಪುಟ್ ಎಫ್57 ವಿಭಾಗದಲ್ಲಿ ಸೋಮನ್‌ ರಾಣಾ ಹಾಗೂ ಶುಭಂ ಜುಯಲ್ ಕ್ರಮವಾಗಿ ಚಿನ್ನ, ರಜತ ಪದಕಕ್ಕೆ ಕೊರಳೊಡ್ಡಿದ್ದರು. ಕ್ಯಾಮರೂನ್ ಸೆಡ್ರಿಕ್ ಅಜಮ್ಮಿ (12.57 ಮೀ) ಕಂಚಿನ ಪದಕ ಒಲಿಸಿಕೊಂಡರು. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತೀಯ ಸೇನೆಯ ಸುಬೇದಾರ್ ಆಗಿರುವ 43 ವರ್ಷದ ಸೋಮನ್ ರಾಣಾ 13.40 ಮೀಟರ್ ದೂರದ ಎಸೆತದೊಂದಿಗೆ ಪುರುಷರ ಪ್ಯಾರಾ ಶಾಟ್‌ಪುಟ್ ನಲ್ಲಿ ಸ್ವರ್ಣ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಭಾಜನರಾದರು. ಪೂಂಚ್ ವಲಯದಲ್ಲಿ 2006ರಲ್ಲಿ ಸಿಪಾಯಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಂಭವಿಸಿದ ಗಣಿ ಸ್ಪೋಟದಲ್ಲಿ ಸೋಮನ್ ತನ್ನ ಬಲಗಾಲನ್ನು ಕಳೆದುಕೊಂಡಿದ್ದರು. ನಂತರ 2017ರಲ್ಲಿ ಆರ್ಮಿಯ ಪ್ಯಾರಾಲಿಂಪಿಕ್ ನೋಡ್ ಗೆ ಸೇರ್ಪಡೆಗೊಂಡ ಅವರು, ಕ್ರೀಡೆಯಲ್ಲಿ ಮುಂದುವರಿದರು. ಮತ್ತೊರ್ವ ಭಾರತೀಯ ಶುಭಂ ಜುಯಲ್ 13.28 ಮೀಟರ್ ದೂರದ ಎಸೆತದೊಂದಿಗೆ ಎರಡನೇ ಸ್ಥಾನಿಯಾಗಿ ಪೋಡಿಯಂ ಏರಿದರು. ಆರ್ಮಿ ಕೆಡೆಟ್ ಕಾಲೇಜ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು, ಎಸ್‌ಎಸ್‌ಬಿ ಸಂದರ್ಶನಕ್ಕೆ ತೆರಳುವಾಗ ಸಂಭವಿಸಿದ ಬೈಕ್ ಅಪಘಾತ 26 ವರ್ಷದ ಜುಯಲ್ ಬದುಕಿಗೆ ತಿರುವು ನೀಡಿತು.

ಪ್ಯಾರಾದಲ್ಲಿ ಗರಿಷ್ಠ ಪದಕ ಗೆಲುವಿನ ಸಾಧನೆ

ಭಾರತದ ಪ್ಯಾರಾ ಕ್ರೀಡಾಪಟುಗಳು ಸರ್ವಾಧಿಕ ಪದಕ ಗೆದ್ದ ಕಾಮನ್ವೆಲ್ತ್ ಗೇಮ್ಸ್ ಆವೃತ್ತಿ ಇದಾಗಿದೆ. ಇದುವರೆಗೆ 3 ಚಿನ್ನ, 2 ಬೆಳ್ಳಿ, 2 ಕಂಚು ಸಹಿತ ಒಟ್ಟು 7 ಪದಕಗಳು ಪ್ಯಾರಾ ಸ್ಪರ್ಧೆಯಲ್ಲಿ ಭಾರತಕ್ಕೆ ಒಲಿದಿದೆ. ಇದಕ್ಕೆ ಮುನ್ನ 2022ರ ಆವೃತ್ತಿಯಲ್ಲಿ 2 ಚಿನ್ನ, 1 ಕಂಚು ಅತ್ಯುತ್ತಮ ಸಾಧನೆ ಎನಿಸಿತ್ತು.

ಪ್ರವೀಣ್ ಬೆಳ್ಳಿ ಜಿಗಿತ, ಸೆಲ್ಲಗೆ ಕಂಚು

ಟ್ರಿಪಲ್ ಜಂಪ್‌ನಲ್ಲಿ ಪ್ರವೀಣ್ ಚಿತ್ರವೇಲ್ ಹಾಗೂ ಸೆಲ್ವ ಪ್ರಭು ತಿರುಮರನ್ ಕ್ರಮವಾಗಿ ರಜತ ಹಾಗೂ ಕಂಚಿನ ಪದಕಕ್ಕೆ ಮುತ್ತಿಟ್ಟರು. ಏಷ್ಯನ್ ಗೇಮ್ಸ್ ಪದಕ ವಿಜೇತ ತಮಿಳುನಾಡಿನ ಪ್ರವೀಣ್‌, 4ನೇ ಯತ್ನದಲ್ಲಿ 16.58 ಮೀಟರ್ ದೂರದ ಜಿಗಿದರೆ, 5ನೇ ಯತ್ನದಲ್ಲಿ 16.52 ಮೀಟರ್ ಜಿಗಿದ ಸೆಲ್ವ ಪ್ರಭು ಮೂರನೇ ಸ್ಥಾನ ಪಡೆದರು. ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಸೆಲ್ವಗೆ ಮೊದಲ ಪದಕ ಇದಾಗಿದೆ. ಜಮೈಕಾದ ಜೋರ್ಡನ್ ಸ್ಯಾಟ್ (16.72 ಮೀ) ಚಿನ್ನದ ಪದಕ ಒಲಿಸಿಕೊಂಡರು. ಪ್ರವೀಣ್ ಚಿತ್ರವೇಲ್ 17.37 ಮೀಟರ್ ದೂರದ ಜಿಗಿತದ ರಾಷ್ಟ್ರೀಯ ದಾಖಲೆ ಹೊಂದಿದ್ದು, ಕೃಷಿ ಕೂಲಿ ಕಾರ್ಮಿಕನ ಮಗನಾಗಿದ್ದಾರೆ.