Golden Hour  
ದೇಶ

Golden Hour: ಕುಸಿದು ಬಿದ್ದ ಯುವಕ; ತಾಯಿಯ ಸಮಯಪ್ರಜ್ಞೆಯಿಂದ ಬಚಾವ್!

ನಾಗ್ಪುರ: "ಹಲವು ಬಾರಿ ಸೋತಿದ್ದೇನೆ, ಆದರೆ ಸೋಲೊಪ್ಪಿಕೊಳ್ಳುವುದು ನನ್ನ ಆಯ್ಕೆಯಲ್ಲ. ಗೆಲ್ಲುವವರೆಗೂ ನಾನು ಪ್ರಯತ್ನಿಸುತ್ತಲೇ ಇರುತ್ತೇನೆ" – ಇದು ನಾಗ್ಪುರದ 23 ವರ್ಷದ ಯುವಕ ಓಂ ಭೋಯರ್ ತನ್ನ ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಹಾಕಿಕೊಂಡಿದ್ದ ಸಾಲುಗಳು. ಜಿಮ್‌ನಲ್ಲಿ ಭಾರೀ ತೂಕದ 'ಡೆಡ್‌ಲಿಫ್ಟ್' ಎತ್ತಲು ಪ್ರಯತ್ನಿಸುತ್ತಿದ್ದ ವಿಡಿಯೋವನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಸಾವು-ಬದುಕಿನ ನಡುವೆ ಆತ ಹೋರಾಡಬೇಕಾದ(Golden Hour) ಪರಿಸ್ಥಿತಿ ಬಂದೊದಗಿದೆ.
ಹೌದು, ಏಪ್ರಿಲ್ 10 ರಂದು ಓಂ ಭೋಯರ್ ಜಿಮ್‌ನಲ್ಲಿ ತನ್ನ ಶಕ್ತಿಗೂ ಮೀರಿದ ತೂಕವನ್ನು ಎತ್ತಿ ವ್ಯಾಯಾಮ ಮಾಡಿದ್ದನು. ಜಿಮ್ ಮುಗಿಸಿ ಮನೆಗೆ ಬಂದ ಕೆಲವೇ ಹೊತ್ತಿನಲ್ಲಿ ಆತ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾನೆ. ಅತಿಯಾದ ದೈಹಿಕ ಶ್ರಮದಿಂದಾಗಿ ಮೆದುಳಿನ ಮೇಲೆ ಒತ್ತಡ ಉಂಟಾಗಿ ಈ ಸ್ಥಿತಿ ನಿರ್ಮಾಣವಾಗಿತ್ತು.

ಆಪದ್ಬಾಂಧವಿಯಾದ ತಾಯಿ

ಓಂ ಅವರ ತಾಯಿ ಆರತಿ ಭೋಯರ್ ವೃತ್ತಿಯಲ್ಲಿ ನರ್ಸ್ ಆಗಿರುವುದರಿಂದ, ಮಗನ ಸ್ಥಿತಿಯನ್ನು ಕಂಡ ಕೂಡಲೇ ಇದು ಪಾರ್ಶ್ವವಾಯು (Paralytic Attack) ಇರಬಹುದೆಂದು ಶಂಕಿಸಿದರು. ಮೆದುಳಿನಲ್ಲಿ ರಕ್ತಸ್ರಾವವಾಗಿರುವ ಸಾಧ್ಯತೆಯನ್ನು ಮನಗಂಡ ಅವರು, ಚಿಕಿತ್ಸೆಗೆ ಅತ್ಯಂತ ಮುಖ್ಯವಾದ 'ಗೋಲ್ಡನ್ ಅವರ್' (ಮೊದಲ 3-4 ಗಂಟೆಗಳು) ವ್ಯರ್ಥವಾಗದಂತೆ ಕೂಡಲೇ ಮಗನನ್ನು ಆಸ್ಪತ್ರೆಗೆ ದಾಖಲಿಸಿದರು.
ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಗಳ ವೇಳೆ ಓಂ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಯಿತು. ವೈದ್ಯರು ತಕ್ಷಣವೇ 'ಮೆಕ್ಯಾನಿಕಲ್ ಥ್ರೊಂಬೆಕ್ಟಮಿ' ಎಂಬ ಶಸ್ತ್ರಚಿಕಿತ್ಸೆಯ ಮೂಲಕ ಮೆದುಳಿನ ರಕ್ತನಾಳದಲ್ಲಿದ್ದ ಆ ಹೆಪ್ಪುಗಟ್ಟಿದ ರಕ್ತವನ್ನು ತೆಗೆದುಹಾಕಿದರು. ತಾಯಿಯ ಸಮಯಪ್ರಜ್ಞೆ ಮತ್ತು ವೈದ್ಯರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಓಂ ಪಾರ್ಶ್ವವಾಯುವಿನ ಅಪಾಯದಿಂದ ಪಾರಾಗಿ, ಏಪ್ರಿಲ್ 21 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಎಚ್ಚರಿಕೆ ಇರಲಿ: ಅತಿಯಾದ ವ್ಯಾಯಾಮ ಅಪಾಯಕಾರಿ

ಈ ಘಟನೆಯು ವ್ಯಾಯಾಮದ ಹುಚ್ಚಿನಲ್ಲಿ ತಮ್ಮ ದೈಹಿಕ ಸಾಮರ್ಥ್ಯವನ್ನು ಮೀರಿ ಶ್ರಮ ಪಡುವವರಿಗೆ ದೊಡ್ಡ ಎಚ್ಚರಿಕೆಯಾಗಿದೆ. ಮೆದುಳಿನ ರಕ್ತನಾಳಗಳು ಒಡೆದಾಗ ಉಂಟಾಗುವ ರಕ್ತಸ್ರಾವವು ದೇಹದ ಭಾಗಗಳಿಗೆ ಸಂಪರ್ಕ ಕಲ್ಪಿಸುವ ನರಗಳನ್ನು ಕಡಿತಗೊಳಿಸುತ್ತದೆ, ಇದರಿಂದ ಪಾರ್ಶ್ವವಾಯು ಸಂಭವಿಸುತ್ತದೆ. ತಜ್ಞರ ಮಾರ್ಗದರ್ಶನವಿಲ್ಲದೆ ಅಥವಾ ಅತಿಯಾದ ತೂಕ ಎತ್ತುವ ಸಾಹಸಕ್ಕೆ ಕೈಹಾಕುವುದು ಪ್ರಾಣಕ್ಕೆ ಕುತ್ತು ತರಬಹುದು,(ಏಜೆನ್ಸೀಸ್​).