ಚಿನ್ನದ ದರ ಇಳಿಕೆ  
ದೇಶ

ಬಂಗಾರದ ಬೆಲೆಯಲ್ಲಿ ಭಾರಿ ಕುಸಿತ: 6 ತಿಂಗಳ ಕನಿಷ್ಠ ಮಟ್ಟಕ್ಕಿಳಿದ ಸ್ವರ್ಣ ದರ; ಹೀಗಿವೆ ಕಾರಣಗಳು | Gold Sinks

ಪ್ರಮುಖ ಮುಖ್ಯಾಂಶಗಳು

  • ಇರಾನ್​-ಅಮೆರಿಕ ನಡುವಿನ ಯುದ್ಧದಿಂದ ಚಿನ್ನದ ಬೆಲೆಯಲ್ಲಿ ಕುಸಿತ
  • ಇಂಧನ, ತೈಲ ಬೆಲೆ ಏರಿಕೆಯ ಹಿನ್ನೆಲೆ ಹಳದಿ ಲೋಹದ ದರ ಇಳಿಕೆ
  • ಸತತ ಕುಸಿತಕ್ಕೆ ಪ್ರಮುಖ ಕಾರಣಗಳೇನು? ಹೀಗಿದೆ ನೋಡಿ ವಿವರ
ನವದೆಹಲಿ: ಮಧ್ಯಪ್ರಾಚ್ಯದ ಉದ್ವಿಗ್ನತೆ, ಅಮೆರಿಕದ ಬಡ್ಡಿದರ ಏರಿಕೆಯ ಭೀತಿ ಹಾಗೂ ಸ್ಪೇಸ್-ಎಕ್ಸ್ (SpaceX) ಐಪಿಒ ಭರಾಟೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ದಿಢೀರ್ ಇಳಿಮುಖ ಕಾಣುತ್ತಿದೆ. 
ಮಾರ್ಚ್​-ಏಪ್ರಿಲ್​ನಿಂದಲೂ ಮದುವೆ ಮತ್ತು ಶುಭಕಾರ್ಯಗಳ ಓಡಾಟದಲ್ಲಿ ಸಖತ್ ಬಿಜಿಯಾಗಿದ್ದ ಚಿನ್ನ ಪ್ರಿಯರಿಗೆ, ಬೆಲೆ ಏರಿಕೆಯಿಂದ ದೊಡ್ಡ ತಲೆನೋವಾಗಿತ್ತು. ಆದರೀಗ, ಸತತವಾಗಿ ಕುಸಿಯುತ್ತಿರುವ ಚಿನ್ನವನ್ನು ಕೊಳ್ಳುವ ಮನಸ್ಸು ಮಾಡಿದರೂ ಒಂದು ವರ್ಷದ ಮಟ್ಟಿಗೆ ಖರೀದಿಯಿಂದ ದೂರವಿರಿ ಎಂಬ ಪ್ರಧಾನಿ ಅವರ ಮಾತುಗಳು ಜನರನ್ನು ಕೊಳ್ಳುವಿಕೆಯಿಂದ ಕಟ್ಟಿಹಾಕಿದೆ. 
ಕಳೆದ ಕೆಲವು ದಿನಗಳಿಂದ ಸಣ್ಣದಾಗಿ ಕುಸಿಯುತ್ತಿದ್ದ ಚಿನ್ನದ ಬೆಲೆ ಗುರುವಾರ (ಜೂ.11) ಬರೊಬ್ಬರಿ ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಅಚ್ಚರಿ ಮೂಡಿಸಿದೆ. ಜಾಗತಿಕ ರಾಜಕೀಯ ವಿದ್ಯಮಾನಗಳು ಮತ್ತು ಹೂಡಿಕೆದಾರರ ಮನಸ್ಥಿತಿಯಲ್ಲಿನ ಬದಲಾವಣೆಯಿಂದಾಗಿ ಸ್ವರ್ಣದ ಬೆಲೆ ಒಂದೇ ದಿನ ಶೇ.1ಕ್ಕಿಂತಲೂ ಹೆಚ್ಚು ಕುಸಿತ ಕಂಡು, ಪ್ರತಿ ಟ್ರಾಯ್ ಔನ್ಸ್‌ಗೆ 4,022 ಡಾಲರ್ ತಲುಪಿದೆ.
ಇದು ಕಳೆದ ವರ್ಷ ನವೆಂಬರ್​ಗೆ ಹೋಲಿಸಿದರೆ ಅತ್ಯಂತ ಕಡಿಮೆ ದರವಾಗಿದೆ. ಚಿನ್ನವು ದಿನದ ವಹಿವಾಟಿನ ಅಂತ್ಯದ ವೇಳೆಗೆ ಕೊಂಚ ಚೇತರಿಕೆ ಕಂಡು 4,091 ಡಾಲರ್​ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಈ ಮೂಲಕ ಗೋಲ್ಡ್​ ಕಳೆದ ಒಂದು ದಶಕದಲ್ಲೇ ಅತ್ಯಂತ ಕಳಪೆ ತ್ರೈಮಾಸಿಕ ಪ್ರದರ್ಶನ ನೀಡುವತ್ತ ಮುಖಮಾಡಿರುವುದು ಇಲ್ಲಿ ಗಮನಾರ್ಹ.

ಅಷ್ಟಕ್ಕೂ ಚಿನ್ನದ ದರ ದಿಢೀರ್ ಕುಸಿತಕ್ಕೆ ಪ್ರಮುಖ ಕಾರಣಗಳಿವು?

ಮಧ್ಯಪ್ರಾಚ್ಯದ ಯುದ್ಧದ ಎಫೆಕ್ಟ್: ಇರಾನ್-ಅಮೆರಿಕ ನಡುವೆ ಯುದ್ಧದ ವಾತಾವರಣ ಆರಂಭವಾದಾಗಿನಿಂದ ಚಿನ್ನದ ಬೆಲೆ ಸುಮಾರು ಶೇ.20 ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಈ ಬಿಕ್ಕಟ್ಟಿನ ಕಾರಣದಿಂದಾಗಿ ಹಲವು ದೇಶಗಳ ಕೇಂದ್ರೀಯ ಬ್ಯಾಂಕುಗಳು ತಮ್ಮ ಕರೆನ್ಸಿ (ನಾಣ್ಯ) ಮೌಲ್ಯವನ್ನು ಉಳಿಸಿಕೊಳ್ಳಲು ಚಿನ್ನವನ್ನು ಮಾರಾಟಕ್ಕಿಡುತ್ತಿವೆ.

ಸ್ಪೆಕ್ಯುಲೇಟಿವ್ ಹೂಡಿಕೆದಾರರ ಎಕ್ಸಿಟ್

ಕಳೆದ ವರ್ಷದ ಕೊನೆಯಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ ಚಿನ್ನದ ಬೆಲೆ ಗಗನಕ್ಕೇರಲು ಕಾರಣವಾಗಿದ್ದ ಸಟ್ಟಾ ಹೂಡಿಕೆದಾರರು (Speculative Investors) ಈಗ ಮಾರುಕಟ್ಟೆಯಿಂದ ಭಾರೀ ಪ್ರಮಾಣದಲ್ಲಿ ಎಕ್ಸಿಟ್​ ಆಗುತ್ತಿದ್ದಾರೆ. ಇದು ಕೂಡ ಕುಸಿತಕ್ಕೆ ಒಂದು ಪ್ರಮುಖ ಕಾರಣವಾಗಿದೆ. 

ಅಮೆರಿಕದ ಬಡ್ಡಿದರ ಏರಿಕೆ

ಅಮೆರಿಕದಲ್ಲಿ ಬಡ್ಡಿದರಗಳು ಮತ್ತಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಗಳು ಹೂಡಿಕೆದಾರರನ್ನು ಚಿನ್ನದಿಂದ ಬೇರೆಡೆಗೆ ಸೆಳೆಯುತ್ತಿವೆ.

ಸ್ಪೇಸ್-ಎಕ್ಸ್ ಐಪಿಒ ಹವಾ 

ಮಾರುಕಟ್ಟೆಗೆ ಬರಲಿರುವ ಬಹುನಿರೀಕ್ಷಿತ ಸ್ಪೇಸ್-ಎಕ್ಸ್ ಐಪಿಒ ಕೂಡ ಹೂಡಿಕೆದಾರರ ಗಮನವನ್ನು ತನ್ನತ್ತ ಸೆಳೆದಿದ್ದು, ಬಂಗಾರದ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ.

ತಜ್ಞರು ಹೇಳುವುದೇನು?

ಇರಾನ್‌ನಲ್ಲಿ ಉದ್ವಿಗ್ನತೆ ಆರಂಭವಾಗುತ್ತಿದ್ದಂತೆ, ಹೂಡಿಕೆದಾರರು ತಮ್ಮ ಪೋರ್ಟ್‌ಫೋಲಿಯೊದಲ್ಲಿನ ರಿಸ್ಕ್ ಕಡಿತಗೊಳಿಸಲು ಮುಂದಾಗಿದ್ದಾರೆ. ಮಾರುಕಟ್ಟೆಯಲ್ಲಿನ ಇತರ ನಷ್ಟಗಳನ್ನು ಸರಿದೂಗಿಸಲು ಜನರು ಚಿನ್ನವನ್ನು ಮಾರಾಟ ಮಾಡಿ, ನಗದು ಪಡೆಯುತ್ತಿದ್ದಾರೆ ಎನ್ನುತ್ತಾರೆ ಯುಬಿಪಿ (UBP) ಹೂಡಿಕೆ ಸೇವೆಗಳ ಮುಖ್ಯಸ್ಥ ಪೀಟರ್ ಕಿನ್ಸೆಲ್ಲಾ,(ಏಜೆನ್ಸೀಸ್).