- ಚಿನ್ನ-ಬೆಳ್ಳಿ ಬೆಲೆಗಳಿಗೆ ತಟ್ಟಿದ ಯುದ್ಧದ ಬಿಸಿ
- ಸತತ ಇಳಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಇಂದು ದಿಢೀರ್ ಹೆಚ್ಚಳ
- ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆ
Gold Rates: ಕಳೆದ ಕೆಲವು ದಿನಗಳಿಂದ ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ದಾಳಿಯು ಸದ್ಯ ಮಧ್ಯಪ್ರಾಚ್ಯದಲ್ಲಿ ಭಾರೀ ಉದ್ವಿಗ್ನತೆ ಸೃಷ್ಟಿಸಿದೆ. ಇದು ಕೇವಲ ಮೂರು ರಾಷ್ಟ್ರಗಳಿಗೆ ಮಾತ್ರವಲ್ಲ, ಇಡೀ ಜಗತ್ತಿನ ಮೇಲೆ ದೊಡ್ಡ ಪರಿಣಾಮ ಬೀರಲಾರಂಭಿಸಿದೆ. ತೈಲ, ಷೇರುಪೇಟೆಗೆ ಹೊಡೆತ ನೀಡಿರುವ ಸಂಘರ್ಷ ಇದೀಗ ಚಿನ್ನದ ಬೆಲೆಗೂ ಬಿಸಿ ಮುಟ್ಟಿಸಿದೆ.
ಕಳೆದ ಕೆಲವು ದಿನಗಳಿಂದ ಇಳಿಕೆಯತ್ತ ಸಾಗುತ್ತಿದ್ದ ಚಿನ್ನದ ಬೆಲೆಗಳು, ಈಗ ಮದುವೆ ಸೀಸನ್ ಬೆನ್ನಲ್ಲೇ ಮತ್ತೆ ಗಗನಕ್ಕೇರಿವೆ. ಮಾರ್ಚ್, ಏಪ್ರಿಲ್ನಿಂದ ಶುಭಕಾರ್ಯಗಳು ಸಾಲು ಸಾಲಾಗಿ ನಡೆಯಲಿದ್ದು, ಇದಕ್ಕೆ ಚಿನ್ನ ಬೇಕೇ ಬೇಕು. ಹೀಗಿರುವಾಗಲೇ, ಬೆಲೆಗಳು ದಿಢೀರ್ ದುಪ್ಪಟ್ಟಾಗಿರುವುದು ಸದ್ಯ ಗ್ರಾಹಕರಿಗೆ ದೊಡ್ಡ ತಲೆಬಿಸಿಯಾಗಿದೆ. ಇಂದು ಒಂದೇ ದಿನ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 2,510 ರೂ. ಹೆಚ್ಚಾಗಿದೆ.
ಬುಲಿಯನ್ ಮಾರುಕಟ್ಟೆಯಲ್ಲಿ, 10 ಗ್ರಾಂ ಚಿನ್ನದ ಬೆಲೆ 2,510 ರೂ. ಏರಿಕೆಯಾಗಿ 1,63,640 ರೂ.ಗೆ ಮಾರಾಟವಾಗುತ್ತಿದೆ. ಅದೇ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 2,300 ರೂ. ಏರಿಕೆಯಾಗಿ 1,50,000 ರೂ.ಗೆ ಮಾರಾಟವಾಗುತ್ತಿದೆ. ಇನ್ನು 18 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 1,880 ರೂ. ಏರಿಕೆಯಾಗಿ 1,22,730 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. ಸಖತ್ ಬೇಡಿಕೆಯಲ್ಲಿರುವ ಚಿನ್ನದ ಬೆಲೆಯು ಏಕಾಏಕಿ ಇಷ್ಟೊಂದು ಹೆಚ್ಚಾದರೆ, ಮಧ್ಯಮ ವರ್ಗದ ಜನರು ಖರೀದಿಸುವುದಾದರೂ ಹೇಗೆ? ಎಂಬ ಪ್ರಶ್ನೆ ಮೂಡಿದೆ.
ಇನ್ನು ಬೆಳ್ಳಿ ಬೆಲೆಗಳು ಗ್ರಾಹಕರನ್ನು ಚಿಂತೆಗೆ ದೂಡಿಲ್ಲ. ಪ್ರಸ್ತುತ, ನವದೆಹಲಿ ಮತ್ತು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ ಸುಮಾರು 2,85,000 ರೂ.ನಲ್ಲಿದೆ. ಹೈದರಾಬಾದ್ ಮತ್ತು ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ ಸುಮಾರು 2,90,000 ರೂ.ಗೆ ಮಾರಾಟವಾಗುತ್ತಿದೆ.
ಗಮನಿಸಿ: ಮೇಲೆ ತಿಳಿಸಲಾದ ದರಗಳು ಬೆಳಗಿನ ಮಾರುಕಟ್ಟೆಯ ವಿವರ ಆಧರಿಸಿ. ಈ ದರಗಳು ಮಧ್ಯಾಹ್ನದ ನಂತರ ಸಾಕಷ್ಟು ಬದಲಾವಣೆಗೆ ಒಳಪಟ್ಟಿರುತ್ತವೆ