ಚಿನ್ನದ ಬೆಲೆ ಏರಿಕೆ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ! Gold Rate  
ದೇಶ

ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವುದೇಕೆ? ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಕೊಟ್ಟ ಉತ್ತರ ಹೀಗಿದೆ... Gold Rate

ಪ್ರಮುಖ ಮುಖ್ಯಾಂಶಗಳು

  • ಈ ಹಿಂದೆ ಪ್ರತಿ ಗ್ರಾಂಗೆ 5 ಸಾವಿರ ರೂ. ಇದ್ದ ಚಿನ್ನ ಇಂದು 15 ಸಾವಿರ ಗಡಿ ದಾಟಿದೆ
  • ದಿನದಿಂದ ದಿನಕ್ಕೆ ಚಿನ್ನದ ಬೆಲೆ ಹೆಚ್ಚಾಗುತ್ತಿರುವುದು ಜನ ಸಾಮಾನ್ಯರನ್ನು ಚಿಂತೆಗೆ ದೂಡಿದೆ
  • ಚಿನ್ನದ ಬೆಲೆ ಏರಿಕೆ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ
Gold Rate : ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಏರುತ್ತಿರುವ ವೇಗವನ್ನು ನೋಡಿದರೆ ಮುಂದೊಂದು ದಿನ ಜನ ಸಾಮಾನ್ಯರು, ವಸ್ತು ಸಂಗ್ರಹಾಲಯದಲ್ಲಿ ಕಾಣಸಿಗುವ ವಸ್ತುಗಳಂತೆ ಚಿನ್ನವನ್ನು ನೋಡಿ ಕೇವಲ ಖುಷಿಪಟ್ಟುಕೊಳ್ಳಬೇಕಾಗುತ್ತದೆ. ಅದನ್ನು ಖರೀದಿ ಮಾಡುವುದು ದೂರದ ಮಾತು ಎಂಬಂತಾಗುತ್ತದೆ. ಕೇವಲ ಒಂದೆರೆಡು ವರ್ಷದ ಹಿಂದೆ ಪ್ರತಿ ಗ್ರಾಂಗೆ 5 ಸಾವಿರ ರೂ. ಇದ್ದ ಚಿನ್ನ, ಇಂದು 15 ಸಾವಿರ ಗಡಿ ದಾಟಿದೆ. ಚಿನ್ನದ ಬೆಲೆ ಈ ಪರಿ ಹೆಚ್ಚಾಗುತ್ತಿರುವುದಕ್ಕೆ ಕಾರಣ ಏನು ಎಂದು ಕೇಳಿದ್ದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊಟ್ಟ ಹೇಳಿಕೆ ಇದೀಗ ವೈರಲ್​ ಆಗಿದೆ.
ವಿಶ್ವಾದ್ಯಂತ ಇರುವ ಕೇಂದ್ರ ಬ್ಯಾಂಕುಗಳು ಚಿನ್ನದ ಬೆಲೆ ಏರಿಕೆಗೆ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು. ಇಂದು (ಫೆ. 23)ಆರ್‌ಬಿಐ ಕೇಂದ್ರ ಮಂಡಳಿಯನ್ನುದ್ದೇಶಿಸಿ ಮಾತನಾಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೀತಾರಾಮನ್, ವಿಶ್ವಾದ್ಯಂತ ಕೇಂದ್ರ ಬ್ಯಾಂಕುಗಳು ಹೆಚ್ಚಿನ ಪ್ರಮಾಣದ ಚಿನ್ನವನ್ನು ಖರೀದಿಸುತ್ತಿವೆ. ಇದು ಬೆಲೆ ಏರಿಕೆಗೆ ಕಾರಣವಾಗುತ್ತಿದೆ ಎಂದು ಹೇಳಿದರು.

ಇತರೆ ಕಾರಣಗಳು ಏನು?

ಕೇಂದ್ರೀಯ ಬ್ಯಾಂಕ್ ಖರೀದಿಗಳ ಹೊರತಾಗಿ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಸುಂಕಗಳು ಸಹ ಚಿನ್ನದ ಬೆಲೆಗಳನ್ನು ಹೆಚ್ಚಿಸುತ್ತಿವೆ. ಡಾಲರ್ ಮೌಲ್ಯ ಮತ್ತು ಹೂಡಿಕೆದಾರರ ಆಸಕ್ತಿಯು ಚಿನ್ನದ ದರವನ್ನು ಹೆಚ್ಚಿಸುತ್ತಿದೆ. ಪೂರೈಕೆ ಬೇಡಿಕೆಗಿಂತ ಕಡಿಮೆಯಾದಾಗ, ಬೆಲೆಗಳು ಏರುತ್ತವೆ.
ಇನ್ನು ಅನೇಕ ಜನರು ಬ್ಯಾಂಕುಗಳಲ್ಲಿ ತಮ್ಮ ಹೂಡಿಕೆಯಾಗಿ ಚಿನ್ನವನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಡಾಲರ್ ಮೌಲ್ಯ ಕುಸಿತ ಮತ್ತು ಯುಎಸ್ ರಿಸರ್ವ್ ಬಡ್ಡಿದರಗಳನ್ನು ಕಡಿತಗೊಳಿಸುತ್ತದೆ ಎಂಬ ಭಯದಿಂದಾಗಿ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದು ಚಿನ್ನದ ಬೆಲೆಯಲ್ಲಿ ಏರಿಳಿತಗಳಿಗೂ ಕಾರಣವಾಗುತ್ತಿದೆ. ಹೀಗಾಗಿ ಚಿನ್ನ ಇಂದು ದುಬಾರಿಯಾಗಿ, ಜನ ಸಾಮಾನ್ಯರ ಕೈನಿಂದ ದೂರ ಸರಿಯುತ್ತಿದೆ. ಇದೇ ರೀತಿ ಬೇಡಿಕೆ ಹೆಚ್ಚಾದರೆ ಚಿನ್ನದ ಬೆಲೆಯೂ ಸಹ ಹೆಚ್ಚಾಗುತ್ತದೆ.
ಅಂದಹಾಗೆ, ಬೆಂಗಳೂರಿನಲ್ಲಿಂದು (ಫೆ. 23) ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,47,900 ರೂ.ಗಳಿಗೆ ತಲುಪಿದ್ದರೆ, 24 ಕ್ಯಾರೆಟ್ ಬೆಲೆ 1,61,350 ರೂ.ಗಳಿಗೆ ತಲುಪಿದೆ. ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ ಚಿನ್ನದ ಬೆಲೆ 1,59,280 ರೂ. ಇತ್ತು. ಇಂದು 10 ಗ್ರಾಂಗೆ 2 ಸಾವಿರ ರೂ. ವರೆಗೂ ಏರಿಕೆಯಾಗಿದೆ, (ಏಜೆನ್ಸೀಸ್​).