ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಚಿನ್ನದ ಖರೀದಿ ಕುಸಿತ 
ದೇಶ

ಬೆಂಗಳೂರಿನಲ್ಲಿ ಚಿನ್ನದ ಖರೀದಿ ಶೇ.40 ಕುಸಿತ! ಆಭರಣ ಕ್ಷೇತ್ರದ ಉಳಿವಿಗಾಗಿ ತಯಾರಕರಿಂದ ಸರ್ಕಾರಕ್ಕೆ ಮನವಿ

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯ ಬಿಕ್ಕಟ್ಟಿನ ಬೆನ್ನಲ್ಲೇ ಮಿತ ಬಳಕೆಗೆ ಪ್ರಧಾನಿ ಕರೆ
  • ಬಂಗಾರ ಕೊಳ್ಳುವುದನ್ನು ತಡೆಹಿಡಿಯಬೇಕೆಂಬ ಮಾತಿಗೆ ಜನರ ಸ್ಪಂದನೆ
  • ಆಭರಣ ಕ್ಷೇತ್ರದ ಉಳಿವಿಗಾಗಿ ತಯಾರಕರಿಂದ ಸರ್ಕಾರಕ್ಕೆ ಮನವಿ
ಬೆಂಗಳೂರು: ಇಸ್ರೇಲ್​ ಜೊತೆಗೂಡಿ ಇರಾನ್​ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿರುವ ಅಮೆರಿಕ, ಶಾಂತಿಯ ಒಪ್ಪಂದವನ್ನು ತಿರಸ್ಕರಿಸುವ ಮೂಲಕ ಯುದ್ಧವನ್ನು ಮುಂದುವರಿಸಿದೆ. ಸದ್ಯ ಅಮೆರಿಕ ಅಧ್ಯಕ್ಷನ ಈ ನಡೆ ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಗೆ ದೊಡ್ಡ ಕಾರಣವಾಗಿದೆ. ಇದನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಗೆ ಒಂದು ವರ್ಷದ ಮಟ್ಟಿಗೆ ಅನಗತ್ಯವಾಗಿ ಚಿನ್ನವನ್ನು ಖರೀದಿ ಮಾಡಬೇಡಿ ಎಂದು ಕರೆ ನೀಡಿದರು. ಇದರ ಬೆನ್ನಲ್ಲೇ ರಾಜ್ಯ ರಾಜಧಾನಿಯಲ್ಲಿ ಚಿನ್ನದ ಖರೀದಿ ಕುಸಿತ ಕಂಡಿದೆ.  
ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಯಲ್ಲಿ ಗಣನೀಯವಾದ ಇಳಿಕೆ ಕಂಡುಬಂದಿದೆ. ಭಾರತದಲ್ಲಿ ಅನಿವಾರ್ಯವಲ್ಲದ ಚಿನ್ನದ ಖರೀದಿ ತಡೆಯುವುದು, ಹೆಚ್ಚಿನ ಕಸ್ಟಮ್ ಸುಂಕಗಳು ಮತ್ತು ರೂಪಾಯಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಬೆಳ್ಳಿ ಆಮದು ನಿರ್ಬಂಧಗಳನ್ನು ಬಿಗಿಗೊಳಿಸುವಂತೆ ಪ್ರಧಾನಿ ಮೋದಿ ರಾಷ್ಟ್ರದ ಜನರಲ್ಲಿ ಮನವಿ ಮಾಡಿದ್ದರು. ಆನಂತರದಲ್ಲಿ ಚಿನ್ನ ಮತ್ತು ಬೆಳ್ಳಿ ಬೇಡಿಕೆ ಗಮನಾರ್ಹವಾಗಿ ತಗ್ಗಿರುವುದು ಸದ್ಯ ಅಚ್ಚರಿ ಮೂಡಿಸಿದೆ.
ನಗರದಲ್ಲಿ ಚಿನ್ನ ಹಾಗೂ ಬೆಳ್ಳಿ ಮಾರಾಟವು ಶೇ.40 ಕುಸಿದಿದ್ದು, ಆಭರಣಪ್ರಿಯರು ಸಹ ಚಿನ್ನಾಭರಣ ಖರೀದಿಯನ್ನು ಕಡಿಮೆ ಮಾಡಿದ್ದು, ಅಂಗಡಿಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ಮದುವೆ, ನಾಮಕರಣ ಸೇರಿ ಅನಿವಾರ್ಯ ಕಾರ್ಯಕ್ರಮಗಳಿಗಾಗಿ ತಾಳಿ ಬೊಟ್ಟು, ಉಂಗುರಗಳಂತಹ ಅಗತ್ಯ ಚಿನ್ನಾಭರಣಗಳನ್ನು ಮಾತ್ರ ಜನರು ಖರೀದಿಸುತ್ತಿದ್ದಾರೆ ಎನ್ನುತ್ತಾರೆ ಚಿನ್ನಾಭರಣ ವ್ಯಾಪಾರಿಗಳು.

ಮಧ್ಯಮವರ್ಗದ ಸ್ಪಂದನೆ

ಮುಂದಿನ ಒಂದು ವರ್ಷದ ಅವಧಿಗೆ ಚಿನ್ನ ಖರೀದಿಯನ್ನು ತಡೆಹಿಡಿಯುವಂತೆ ಮೋದಿ ನೀಡಿರುವ ಕರೆಗೆ ದೇಶಾದ್ಯಂತ ಅದರಲ್ಲೂ ಹೆಚ್ಚಾಗಿ ಮಧ್ಯಮ ವರ್ಗದ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಚಿನ್ನದ ಮೇಲಿನ ಹೂಡಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ಚಿನ್ನಾಭರಣ ಮಾರುಕಟ್ಟೆಯ ಮೇಲೆ ಬೃಹತ್ ಪರಿಣಾಮ ಬೀರಲಾರಂಭಿಸಿದೆ. ಮೋದಿ ಕರೆ ನಂತರದಲ್ಲಿ ಚಿನ್ನ ಕೊಳ್ಳುವವರ ಸಂಖ್ಯೆ ಶೇ.40ರಷ್ಟು ಕುಸಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ಷೀಣಿಸುವ ಸಾಧ್ಯತೆಯೂ ಇದೆ ಎಂದು ಕರ್ನಾಟಕ ರಾಜ್ಯ ಆಭರಣ ತಯಾರಿಕರ ಸಂಘದ ಅಧ್ಯಕ್ಷ ರಾಮಾಚಾರಿ ಹೇಳುತ್ತಾರೆ.

ಸರ್ಕಾರಕ್ಕೆ ಮನವಿ

ಚಿನ್ನ ಖರೀದಿ ತಡೆಹಿಡಿಯುವಂತೆ ಮೋದಿ ಕರೆ ಹಿನ್ನೆಲೆ ಆಭರಣ ತಯಾರಕರು, ಮಾರಾಟಗಾರರು ಆಭರಣ ಕ್ಷೇತ್ರದ ಚೇತರಿಕೆಗೆ ನೆರವಾಗುವಂತೆ ಕೋರಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಬುಲಿಯನ್ ಬ್ಯಾಂಕ್ ಸ್ಥಾಪನೆ ಮಾಡುವುದು, ಚಿನ್ನ ಬೆಳ್ಳಿ ನಿರ್ವಹಣಾ ಸಂಸ್ಥೆ ಸ್ಥಾಪಿಸಬೇಕು, ಪುನರ್ ಬಳಕೆ ಚಿನ್ನಕ್ಕೆ ತೆರಿಗೆ ವಿನಾಯಿತಿ ನೀಡಬೇಕು, ಚಿನ್ನಾಭರಣ ಕಾರ್ವಿುಕರಿಗೆ ಸಹಾಯಧನ ನೀಡಬೇಕು, ವಿಶೇಷ ಸಾಲ ಸೌಲಭ್ಯದೊಂದಿಗೆ, ಮರುಪಾವತಿಗೆ ಬಡ್ಡಿ ರಹಿತ ಕಾಲಾವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.

ಇಂಧನ ಖರೀದಿಯೂ ಇಳಿಕೆ

ಚಿನ್ನ ಮಾತ್ರವಲ್ಲದೆ, ಮೋದಿ ಹೇಳಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವು ಸಹ ಕೊಂಚ ಇಳಿಕೆ ಕಂಡಿದೆ. ಬಂಕ್​ಗಳಲ್ಲಿ ಪ್ರತಿದಿನ 150ರಿಂದ 250 ಲೀಟರ್ ಇಂಧನ ಮಾರಾಟ ಕಡಿಮೆಯಾಗಿದ್ದು, ನಾಗರಿಕರು ಸಾರ್ವಜನಿಕ ಸಾರಿಗೆಯತ್ತ ಮುಖ ಮಾಡುತ್ತಿದ್ದಾರೆ. ಕೆಲ ರಾಜಕೀಯ ಮುಖಂಡರೂ ಸೇರಿ ಮೆಟ್ರೋ, ಎಲೆಕ್ಟ್ರಿಕ್ ವಾಹನಗಳಲ್ಲಿ ಸಂಚಾರ ಆರಂಭಿಸಿದ್ದಾರೆ. ಕೆಲವರು ತಮ್ಮ ಬೆಂಗಾವಲು ಪಡೆಗಳನ್ನು ಕಡಿತಗೊಳಿಸಿದ್ದಾರೆ. ಮಧ್ಯಮ ವರ್ಗದ ಜನರು ಸ್ವಂತ ವಾಹನಗಳ ಬಳಕೆ ತಗ್ಗಿಸಿ ಬಸ್ ಸೇರಿ ಸಾರ್ವಜನಿಕ ಸಾರಿಗೆ ಬಳಕೆಯತ್ತ ಮುಖ ಮಾಡುತ್ತಿದ್ದಾರೆ.
ಆಭರಣ ಉದ್ಯಮಕ್ಕೆ ಇದು ಸಂಕಷ್ಟ ಕಾಲ. ಒಂದು ವರ್ಷದ ಅವಧಿಗೆ ಚಿನ್ನ ಖರೀದಿ ತಡೆಗೆ ಕರೆ ನೀಡಿದ್ದಾರೆ. ಮುಂದಿನ ಬಜೆಟ್ ವೇಳೆಗೆ ಎಲ್ಲವೂ ಸರಿಹೋಗಬಹುದು. ಆದರೆ ಅಲ್ಲಿಯವರೆಗೆ ಪರ್ಯಾಯ ವ್ಯವಸ್ಥೇ ಮಾಡಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಕೆಲವು ಮನವಿ ಮಾಡಿಕೊಳ್ಳಲಾಗಿದೆ. ಎಂದು ಕರ್ನಾಟಕ ರಾಜ್ಯ ಆಭರಣ ತಯಾರಕರ ಸಂಘದ ಅಧ್ಯಕ್ಷ ರಾಮಾಚಾರಿ ಹೇಳಿದ್ದಾರೆ.

ಕೆಲಸ ಕಳೆದುಕೊಳ್ಳುವ ಭೀತಿ

ಆಭರಣ ಮಾರಾಟ ಕ್ಷೇತ್ರದಲ್ಲಿ ಹೂಡಿಕೆ ಕುಸಿತ ಕಾಣುತ್ತಿದ್ದು, ಇದರಿಂದಾಗಿ ರಾಜ್ಯದಲ್ಲಿ ಇದನ್ನೇ ನಂಬಿ ಬದುಕುತ್ತಿರುವ ಸುಮಾರು 12 ಸಾವಿರಕ್ಕೂ ಅಧಿಕ ಚಿನ್ನಾಭರಣ ವರ್ತಕರು ವ್ಯಾಪಾರ ಕುಸಿತದ ಆತಂಕದಲ್ಲಿದ್ದಾರೆ. ಜತೆಗೆ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ ಎಂದು ರಾಜ್ಯ ಆಭರಣ ತಯಾರಕರ ಸಂಘ ಕಳವಳ ವ್ಯಕ್ತಪಡಿಸಿದೆ.