ಮುಂಬೈ: ಇರಾನ್ ಮತ್ತು ಅಮೆರಿಕ ನಡುವಿನ ಭೀಕರ ಯುದ್ಧದ ಕಾರ್ಮೋಡ ಜಾಗತಿಕ ಮಾರುಕಟ್ಟೆಯನ್ನು ಆವರಿಸಿದ್ದರೂ, ಇಂದು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ(Gold Price) ಅಚ್ಚರಿಯ ಕುಸಿತ ಕಂಡುಬಂದಿದೆ. ಡಾಲರ್ ಮೌಲ್ಯ ಬಲಗೊಂಡಿರುವುದು ಮತ್ತು ಹೂಡಿಕೆದಾರರು ಲಾಭಾಂಶ ಕಾಯ್ದಿರಿಸುವಿಕೆಗೆ (Profit Booking) ಮುಂದಾಗಿರುವುದು ಹಳದಿ(ಚಿನ್ನ) ಲೋಹದ ಬೆಲೆ ಇಳಿಕೆಗೆ ಮುಖ್ಯ ಕಾರಣವಾಗಿದೆ.
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಇಂದು ಬೆಳಿಗ್ಗೆ ಆರಂಭಿಕ ವಹಿವಾಟಿನಲ್ಲಿ ಚಿನ್ನದ ಬೆಲೆ ಶೇ. 0.73 ರಷ್ಟು ಇಳಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 1,60,450 ರೂಪಾಯಿ ತಲುಪಿದೆ. ಇನ್ನು ಬೆಳ್ಳಿ ಬೆಲೆಯೂ ಶೇ. 1.11 ರಷ್ಟು ಕುಸಿತ ಕಂಡು ಪ್ರತಿ ಕೆಜಿಗೆ 2,65,301 ರೂಪಾಯಿ ದಾಖಲಾಗಿದೆ. ಕಳೆದ ತಿಂಗಳು ಚಿನ್ನ 1.80 ಲಕ್ಷ ರೂಪಾಯಿ ಹಾಗೂ ಬೆಳ್ಳಿ 4.20 ಲಕ್ಷ ರೂಪಾಯಿಯ ಸಾರ್ವಕಾಲಿಕ ದಾಖಲೆ ಬರೆದಿದ್ದವು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಪ್ರಮುಖ ನಗರಗಳಲ್ಲಿನ ದರ (GST ಹೊರತುಪಡಿಸಿ)
ದೇಶದ ಆರ್ಥಿಕ ರಾಜಧಾನಿ ಮುಂಬೈ, ಬೆಂಗಳೂರು, ದೆಹಲಿ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ದರಗಳು ಹೀಗಿವೆ
24 ಕ್ಯಾರೆಟ್ ಚಿನ್ನ (10 ಗ್ರಾಂ): 1,63,630 ರೂ.
22 ಕ್ಯಾರೆಟ್ ಚಿನ್ನ (10 ಗ್ರಾಂ): 1,49,990 ರೂ.
ಬೆಲೆ ಕುಸಿತಕ್ಕೆ ಕಾರಣವೇನು?
ಯುದ್ಧದ ಸಮಯದಲ್ಲಿ ಸಾಮಾನ್ಯವಾಗಿ ಚಿನ್ನದ ಬೆಲೆ ಏರಿಕೆಯಾಗುತ್ತದೆ. ಆದರೆ ಇಂದು ಚಿತ್ರಣ ಬದಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಕಳೆದ ಮೂರು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಜಿಗಿದಿದೆ. ಇದರಿಂದಾಗಿ ಇತರ ಕರೆನ್ಸಿ ಹೊಂದಿರುವವರಿಗೆ ಚಿನ್ನದ ಖರೀದಿ ದುಬಾರಿಯಾಗಿದ್ದು, ಬೇಡಿಕೆ ತಗ್ಗಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 110 ಡಾಲರ್ ದಾಟಿದ್ದು, ಹಣದುಬ್ಬರದ ಆತಂಕ ಹೆಚ್ಚಿಸಿದೆ. ಇದು ಬಡ್ಡಿದರ ಇಳಿಕೆಯ ನಿರೀಕ್ಷೆಯನ್ನು ಕ್ಷೀಣಗೊಳಿಸಿದ್ದು, ಚಿನ್ನದ ಮೇಲಿನ ಹೂಡಿಕೆಯನ್ನು ತಾತ್ಕಾಲಿಕವಾಗಿ ತಗ್ಗಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಬೆಲೆ ಶೇ. 1.7 ರಷ್ಟು ಕುಸಿದು ಪ್ರತಿ ಔನ್ಸ್ ಗೆ 5,082 ಡಾಲರ್ ಗೆ ತಲುಪಿದೆ.
ಹೂಡಿಕೆದಾರರಿಗೆ ತಜ್ಞರ ಸಲಹೆ
ಭಾರತದಲ್ಲಿ ಚಿನ್ನವು ಕೇವಲ ಆಭರಣವಲ್ಲ, ಅದು ಭಾವನಾತ್ಮಕ ಮತ್ತು ಆರ್ಥಿಕ ಭದ್ರತೆಯ ಸಂಕೇತ. ಪ್ರಸ್ತುತ ಯುದ್ಧದ ಸನ್ನಿವೇಶದಲ್ಲಿ ಮಾರುಕಟ್ಟೆ ಅತ್ಯಂತ ಚಂಚಲವಾಗಿದ್ದು, ಹೂಡಿಕೆದಾರರು ಬೆಲೆ ಏರಿಳಿತಗಳನ್ನು ಸೂಕ್ಷ್ಮವಾಗಿ ಗಮನಿಸಿ ಹೂಡಿಕೆ ಮಾಡುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್)