ಸಾಂದರ್ಭಿಕ ಚಿತ್ರ ( Gold Rate )
- ಒಂದು ವರ್ಷದಿಂದ ಶರವೇಗದಲ್ಲಿ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆಗೆ ಬ್ರೇಕ್ ಬೀಳುವ ಸಾಧ್ಯತೆ
- ಜಾಗತಿಕ ರಾಜಕೀಯ ವಿದ್ಯಮಾನ ಮತ್ತು ಆರ್ಥಿಕ ಬದಲಾವಣೆಗಳಿಂದಾಗಿ ಚಿನ್ನದ ಬೆಲೆ ಇಳಿಕೆಯಾಗಲಿದೆ
- ರಷ್ಯಾ ದೇಶದ ಒಂದು ಮಹತ್ವದ ನಡೆಯೇ ಬಂಗಾರದ ಬೆಲೆ ಕುಸಿಯಲು ಪ್ರಮುಖ ಕಾರಣವಾಗಲಿದೆ
ನವದೆಹಲಿ: ಕಳೆದ ಒಂದು ವರ್ಷದಿಂದ ಶರವೇಗದಲ್ಲಿ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆಗೆ ( Gold Rate ) ಬ್ರೇಕ್ ಬೀಳುವ ಸಾಧ್ಯತೆ ಗೋಚರಿಸಿದೆ. ಜಾಗತಿಕ ರಾಜಕೀಯ ವಿದ್ಯಮಾನ ಮತ್ತು ಆರ್ಥಿಕ ಬದಲಾವಣೆಗಳಿಂದಾಗಿ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ.ಗಿಂತ ಕೆಳಕ್ಕೆ ಇಳಿಯಬಹುದೆಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ರಷ್ಯಾ ದೇಶದ ಒಂದು ಮಹತ್ವದ ನಡೆಯೇ ಬಂಗಾರದ ಬೆಲೆ ಕುಸಿಯಲು ಪ್ರಮುಖ ಕಾರಣವಾಗಲಿದೆ. ಮತ್ತೆ ಅಮೆರಿಕನ್ ಡಾಲರ್ ಮೂಲಕ ವ್ಯಾಪಾರ ವಹಿವಾಟು ನಡೆಸಲು ರಷ್ಯಾ ಚಿಂತಿಸುತ್ತಿದೆ. ಇದು ಬ್ರಿಕ್ಸ್ ರಾಷ್ಟ್ರಗಳು ಕೈಗೊಂಡಿದ್ದ ಡಿ-ಡಾಲರೈಸೇಶನ್ (ಅಂದರೆ ಡಾಲರ್ ಮೇಲಿನ ಅವಲಂಬನೆ ತಗ್ಗಿಸುವುದು) ಪ್ರಕ್ರಿಯೆಗೆ ದೊಡ್ಡ ಹೊಡೆತ ನೀಡಲಿದೆ.
ಇಲ್ಲಿಯವರೆಗೆ ರಷ್ಯಾ ಸೇರಿ ಹಲವು ದೇಶಗಳು ಡಾಲರ್ ಬದಲಿಗೆ ಚಿನ್ನ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದವು. ಇದರಿಂದ ಚಿನ್ನಕ್ಕೆ ಭಾರಿ ಬೇಡಿಕೆ ಕುದುರಿತ್ತು. ಭಾರತದಲ್ಲಿ ಚಿನ್ನದ ದರ ಈಗಾಗಲೇ ತನ್ನ ಗರಿಷ್ಠ ಮಟ್ಟವಾದ 1,80,779 ರೂ.ಗಳಿಂದ ಸಾಕಷ್ಟು ಇಳಿಕೆ ಕಂಡಿದೆ. ಈ ಕುಸಿತ ಮುಂದುವರಿದು 2027ರ ವೇಳೆಗೆ ಹತ್ತು ಗ್ರಾಂ ಚಿನ್ನದ ಬೆಲೆ 90,000 ರೂ.ನಿಂದ 1,00,000 ರೂ.ಗಳ ಆಸುಪಾಸಿಗೆ ಬಂದು ನಿಲ್ಲುವ ಸಾಧ್ಯತೆಯಿದೆ.
ಹೂಡಿಕೆದಾರರಿಗೆ ಎಚ್ಚರಿಕೆ: ಚಿನ್ನಕ್ಕಿಂತ ಹೆಚ್ಚಾಗಿ ದೀರ್ಘಾವಧಿಯ ಸರ್ಕಾರಿ ಬಾಂಡ್ಗಳು ಹೆಚ್ಚು ಸುರಕ್ಷಿತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಬ್ಯಾಂಕ್ಗಳ ಪಾತ್ರ
ರಷ್ಯಾ ಮತ್ತು ಅಮೆರಿಕ ನಡುವೆ ವಾಣಿಜ್ಯ ಸಂಬಂಧ ಸುಧಾರಿಸುವ ಲಕ್ಷಣ ಕಾಣಿಸುತ್ತಿರುವುದರಿಂದ, ಬ್ಯಾಂಕುಗಳು ಚಿನ್ನದ ಖರೀದಿ ನಿಲ್ಲಿಸಬಹುದು ಅಥವಾ ತಮ್ಮ ಬಳಿ ಇರುವ ಚಿನ್ನವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಹೀಗಾದಲ್ಲಿ ಮಾರುಕಟ್ಟೆಯಲ್ಲಿ ಚಿನ್ನದ ಪೂರೈಕೆ ಹೆಚ್ಚಾಗಿ ಬೆಲೆ ಇನ್ನಷ್ಟು ಕುಸಿಯಲಿದೆ, (ಏಜೆನ್ಸೀಸ್).